ಮೌಲ್ಯಮಾಪನದ ತಂತ್ರಗಳು

 

ಮೌಲ್ಯಮಾಪನದ ತಂತ್ರಗಳು

ವೀಕ್ಷಣೆ:

    ಸಂಶೋಧನಾ ಕ್ಷೇತ್ರದಲ್ಲಿ ಮಾಹಿತಿ ಸಂಗ್ರಹಣೆಗೆಂದು ಬಳಕೆ ಮಾಡುವ ಸಾಧನಗಳಲ್ಲಿ ವೀಕ್ಷಣೆಯು ಒಂದು.

ಅರ್ಥ: ಸಾಮಾನ್ಯ ಅರ್ಥದಲ್ಲಿ ʼವೀಕ್ಷಣೆʼ ಎಂದರೆ ʼನೋಡುʼ ʼಅವಲೋಕಿಸುʼ ಲಕ್ಷಿಸುʼ ಎಂದಾಗುವುದು. ವೈಜ್ಞಾನಿಕ ದೃಷ್ಠಿಯಿಂದ ನಾವು ನೊಡುವುದೆಲ್ಲವೂ ವೀಕ್ಷಣೆ ಎನಿಸುವುದಿಲ್ಲ. ʼಒಂದು ನಿರ್ದಿಷ್ಠ ಉದ್ದೇಶವಿಟ್ಟುಕೊಂಡು ವ್ಯವಸ್ಥಿತವಾಗಿ ಗಮನಿಸುವುದನ್ನುʼ ವೀಕ್ಷಣೆʼ ಎನ್ನುವರು.

ವ್ಯಾಖ್ಯೆಗಳು:

  1. ಗುಡ್‌ - ʼಸೂಕ್ತ ಸನ್ನಿವೇಶದಲ್ಲಿ ವ್ಯಕ್ತಿಯ ವರ್ತನೆ ಅಥವಾ ನಡವಳಿಕೆಯನ್ನು ಗಮನಿಸುವುದೇ ವೀಕ್ಷಣೆ. ʼ
  2. ರೂಸೋ - ʼಮಗುವಿಗೆ ಯಾವುದೇ ಪದವನ್ನು ಹೇಳುವುದಕ್ಕಿಂತ ಮುನ್ನ ಸಹಜ ರೀತಿಯಲ್ಲಿ ಬಹು ಎಚ್ಚರಿಕೆಯಿಂದ ಅವಲೋಕಿಸುವುದೇ ವೀಕ್ಷಣೆ. ʼ

ಸ್ವಭಾವ:

     ವೀಕ್ಷಣೆ ಎಂಬುದು ದತ್ತಾಂ ಸಂಗ್ರಹಣೆಯ ಒಂದು ಮೂಲಭೂತ ಸಾಧನವಾಗಿದ್ದು ಇಲ್ಲಿ ಸಂಶೋಧನೆಗೆಂದು ಆಯ್ಕೆ ಮಾಡಿಕೊಂಡ ವ್ಯಕ್ತಿ/ ವ್ಯಕ್ತಿಗಳ ವರ್ತನೆಯನ್ನು ಗಮನಿಸುವುದು, ಕೇಳುವುದು ಮತ್ತು ಗಮನಿಸಿದ ಮತ್ತು ಕೇಳಿದ ಅಂಶಗಳನ್ನು ಟಿಪ್ಪಣಿ ಮಾಡುವುದು ಅವಶ್ಯವಾಗಿದೆ. ನಮ್ಮ ಜೀವಿತಾವಧಿಯಲ್ಲಿ ಪಡೆದುಕೊಂಡಿರುವ ಜ್ಞಾನದ ಅಧಿಕ ಭಾಗ ಬೇರೆಯವರನ್ನು ಅವಲೋಕನ ಮಾಡುವುದರ ಮೂಲಕವೇ ಪಡೆದುಕೊಂಡಿರುತ್ತೇವೆ. ಇಲ್ಲಿ ಯಾರನ್ನು ಯಾರು ಬೇಕಾದರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವೀಕ್ಷಣೆ ಮಾಡಿ ತನ್ಮೂಲಕ ಅಗತ್ಯವಾದ ಮಾಹಿತಿಯನ್ನು ಪಡೆಯಬಹುದು, ಆದರೆ ಸಂಶೋಧನಾ ಕ್ಷೇತ್ತದಲ್ಲಿ ಇದಕ್ಕೆ ತನ್ನದೇ ಆದ ಮಹತ್ವವಿದೆ. ಕೆಲವೊಮ್ಮೆ ಇಬ್ಬರು ಅವಲೋಕನಕಾರರ ಅವಲೋಕನ ಒಂದೇ ರೀತಿಯಾಗಿರದೆ ವಿಭಿನ್ನತೆಯಿಂದ ಕೂಡಿರುವುದು. ಇದಕ್ಕೆ ಮೂಲ ಕಾರಣವೆಂದರೆ ಅವಲೋಕಿಸುವ ಪರಿಸ್ಥಿತಿ ಹೇಗಿದೆ? ಉತ್ತರಿಸುವವರು ಅವಲೋಕನಕ್ಕಾಗಿ ಎಷ್ಟರಮಟ್ಟಿಗೆ ಲಭ್ಯವಿರುವರು ಎಂಬುದರ ಮೇಲೆ ಆಧಾರಿತವಾಗಿರುವುದು. ಕೆಲವೊಮ್ಮೆ ವೀಕ್ಷಣೆಗೆಂದು ಆಯ್ಕೆ ಮಾಡಿಕೊಂಡ ವ್ಯಕ್ತಿ ಸಹಜ ರೀತಿಯಲ್ಲಿ ಉತ್ತರಿಸದಿರಬಹುದು, ಇದರಿಂದ ನಿರೀಕ್ಷಿತ ಮಾಹಿತಿಯನ್ನು ಅವರಿಂದ ಪಡೆಯಲಾಗದು. ಈ ದಿಶೆಯಲ್ಲಿ ಉತ್ತಮವಾದ ವಾತಾವರಣವನ್ನು ಕಲ್ಪಿಸುವುದರಿಂದ ಅವರ ಮೂಲಕ ಅಗತ್ಯ ಮಾಹಿತಿಯನ್ನು ಪಡೆಯಬಹುದು. ವೀಕ್ಷಣೆಯು ಪ್ರಮುಖವಾಗಿ ಸಂವೇದನೆ, ಅವಧಾನ ಮತ್ತು ಗ್ರಹಿಕೆಯನ್ನು ಒಳಗೊಂಡಿರುತ್ತದೆ. ಸಂವೇದನೆಯು ವೀಕ್ಷಿಸಿದ ಅಂಶಗಳನ್ನು ವರದಿ ಮಾಡುವುದು. ಗ್ರಹಿಕೆಯು ತಥ್ಯಾಂಶಗಳನ್ನು ಗುರುತಿಸಲು ಮನಸ್ಸಿಗೆ ಒತ್ತು ನೀಡುವುದು. ಆದರೆ ಯಾವುದೇ ವೀಕ್ಷಕ ಎಲ್ಲವನ್ನು ವೀಕ್ಷಣೆ ಮಾಡುತ್ತಾನೆಂದು ಹೇಳಲಾಗದು.

ವೀಕ್ಷಣೆಯ ಉದ್ದೇಶಗಳು:

  1. ಇದು ವ್ಯಕ್ತಿಯ ವರ್ತನೆಯನ್ನು ಅಧ್ಯಯನ ಮಾಡುವುದು.
  2. ನೈಜ ಜೀವನದ ಮಾಹಿತಿಯನ್ನು ಹೊರಗೆಡುವುದು.
  3. ಮಕ್ಕಳ ವರ್ತನಾ ಸಮಸ್ಯೆಗಳಾದ ಅಶಿಸ್ತು, ಕಲಿಕೆಯಲ್ಲಿ ಹಿಂದುಳಿಯುವಿಕೆ, ಚುರುಕುತನ, ಅಪರಾಧ ಇತ್ಯಾದಿಗಳನ್ನು ಅಧ್ಯಯನ ಮಾಡುವುದು.

ವೀಕ್ಷಣೆಯ ವಿಧಗಳು;

  1. ಸಹಭಾಗಿ ವೀಕ್ಷಣೆ: ʼಸ್ವತಃ ಸಂಶೋಧಕನು ತಾನು ವೀಕ್ಷಿಸಬೇಕಾದ ಗುಂಪಿನ ಸದಸ್ಯರೊಂದಿಗೆ ಚಟುವಟಿಕೆಯಿಂದ ಬೆರೆತು ಮಾಹಿತಿ ಸಂಗ್ರಹಿಸುವುದನ್ನು ಸಹಭಾಗಿ ವೀಕ್ಷಣೆ ʼ ಎಂದು ಕರೆಯುವರು. ಇಲ್ಲಿ ಸಂಶೋಧನಕನು ವ್ಯಕ್ತಿಗಳಿಂದ ಸಂಶೋಧನೆಗೆ ಅಗತ್ಯವಾದ ಮಾಹಿತಿಯನ್ನು ಕಲೆಹಾಕಲು ಬಂದಿರುವೆನೆಂದು ನೇರವಾಗಿ ಹೇಳದೆ ಅವರಲ್ಲಿ ಒಬ್ಬನಾಗಿ ಬೆರೆತು ಸಹಜವಾಗಿ ಮಾತಿಗಿಳಿದು ಮಾಹಿತಿಯನ್ನು ಸಂಗ್ರಹಿಸಬೇಕು. ಕೆಲವೊಮ್ಮೆ ಸಂಶೋಧಕನು ತಾನು ಬಂದಿರುವ ಉದ್ದೇಶವನ್ನು ತಿಳಿಸಿದಲ್ಲಿ ಆಗ ವೀಕ್ಷಣೆಗೆ ಒಳಗಾಗುವವರಲ್ಲಿ ತಮಗರಿವಿಲ್ಲದೆ ಸಂಕೋಚ ಸ್ವಭಾವ ಉಂಟಾಗಿ ಇದು ಮಾಹಿತಿ ಸಂಗ್ರಹಿಸಲು ಅಡ್ಡಿಯಾಗುವುದು. ಆದ್ದರಿಂದ ಸಂಶೋಧಕನು ಅತ್ಯಂತ ಸಲಿಗೆಯಿಂದ, ಪ್ರೀತಿಯಿಂದ, ವಿಶ್ವಾಸಪೂರ್ವಕವಾಗಿ, ಚಾಕಚಕ್ಯತೆಯಿಂದ ಅವರನ್ನು ತನ್ನಡೆಗೆ ಒಲಿಸಿಕೊಳ್ಳುವುದರ ಮೂಲಕ ಮಾಹಿತಿ ಸಂಗ್ರಹಿಸಬಹುದು.

    ಅನುಕೂಲಗಳು           

  1. ಸಹಜ ಸನ್ನಿವೇಶದಲ್ಲಿ ಮಾಹಿತಿಯನ್ನು ಸಂಗ್ರಹಿಸುವುದರಿಂದ ವ್ಯಕ್ತಿಗಳ ಪ್ರತಿಕ್ರಿಯೆ ಉತ್ತಮವಾಗಿರುವುದು.
  2. ಬೇರೆ ಸಾಧನಗಳಿಗಿಂತ ಈ ಸಾಧನದ ಮೂಲಕ ವಿಸ್ತೃತ ಮಾಹಿತಿ ಪಡೆಯಬಹುದು.
  3. ವೀಕ್ಷಣೆಯ ಸಾಧನದ ಮೂಲಕ ಪಡೆದ ಮಾಹಿತಿಯನ್ನು ಪ್ರಶ್ನಾವಳಿ, ಸಂದರ್ಶನದಂತಹ ಸಾಧನದ ಮೂಲಕ ಪಡೆದ ಮಾಹಿತಿ ಜೊತೆಯಲ್ಲಿ ಅದರ ಗುಣಮಟ್ಟವನ್ನು ಪರಿಶೀಲಿಸಬಹುದು.
  4. ವ್ಯಕ್ತಿಗಳಿಂದ ಪಡೆದ ಎಲ್ಲಾ ಮಾಹಿತಿಗಳನ್ನು ದಾಖಲಿಸುವುದು.
  5. ಇದು ಆರ್ಥಿಕವಾಗಿ ಹೆಚ್ಚು ಹೊರೆ ಎನಿಸದು.
  6. ಸಂಶೋಧಕನು ಕೇಳುವ ಎಲ್ಲಾ ಪ್ರಶ್ನೆಗಳಿಗೆ ನಿಖರ ಮಾಹಿತಿ ಸಿಗುವುದು.
  7. ಕ್ರಿಯಾ ಸಂಶೋಧನೆಗಳಲ್ಲಿ ಈ ವಿಧಾನವನ್ನು ಸಮರ್ಪಕವಾಗಿ ಬಳಸಬಹುದು.

  ಅನಾನುಕೂಲಗಳು

  1. ಇದು ಅಧಿಕ ಸಮಯವನ್ನು ವ್ಯಯ ಮಾಡುವುದು.
  2. ಸಂಶೋಧಕನು ಬಹುತೇಕ ಸಂದರ್ಭದಲ್ಲಿ ವಸ್ತುನಿಷ್ಠತೆಯನ್ನು ಕಳೆದುಕೊಳ್ಳುವನು.
  3. ಎಲ್ಲಾ ವ್ಯಕ್ತಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾಹಿತಿ ಸಂಗ್ರಹಿಸಲು ಆಗದು.
  4. ಗುಂಪಿನ ಪ್ರತಿಯೊಬ್ಬ ಸದಸ್ಯನೂ ನೀಡುವ ಉತ್ತರವು ಸಮರ್ಪಕವಾಗಿದೆ ಎಂದು ಹೇಳಲಾಗುವುದಿಲ್ಲ.
  5. ಕೆಲವೊಮ್ಮೆ ಗುಂಪಿನ ಎಲ್ಲಾ ಸದಸ್ಯರ ಸಹಕಾರ ಸಿಗುವುದು ದುರ್ಲಭವೆನಿಸುವುದು.
  6. ಸಂಶೋಧಕನು ಕೆಲ ಸಂದರ್ಭಗಳಲ್ಲಿ ವ್ಯಕ್ತಿಗಳ ಜೊತೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳದಿದ್ದಲ್ಲಿ ನಿರೀಕ್ಷಿತ ಮಾಹಿತಿ ಪಡೆಯಲಾಗದು.

2.  ಸಹಭಾಗಿಯಲ್ಲದ ವೀಕ್ಷಣೆ:  

          ಸಹಭಾಗಿ ವೀಕ್ಷಣೆಯಲ್ಲಿ ಹಲವು ಕೊರತೆಗಳನ್ನು ಸಹಭಾಗಿಯಲ್ಲದ ವೀಕ್ಷಣೆಯು ನಿವಾರಿಸುವುದು. ಇದನ್ನು ಮತ್ತೊಂದು ಹೆಸರಿನಲ್ಲಿ ನೇರ ವೀಕ್ಷಣೆ ಎಂದು ಕರೆಯುವರು. ಈ ವಿಧವಾದ ವೀಕ್ಷಣೆಯಲ್ಲಿ ʼಸಂಶೋಧಕನು/ಶಿಕ್ಷಕನು ಗುಂಪಿನ ಕಾರ್ಯಚಟುವಟಿಕೆಗಳನ್ನು ಗುಂಪಿನ ಹೊರಗೆ ನಿಂತು ವೀಕ್ಷಿಸುವುದನ್ನು ಸಹಭಾಗಿಯಲ್ಲದ ವೀಕ್ಷಣೆ ಎನ್ನುವರು. ʼ ಇದು ಒಂದು ಯೋಜನಾಬದ್ದ ವೀಕ್ಷಣೆಯಾಗಿದ್ದು ಸಂಶೋಧಕನು ತನಗೆ ಬೇಕಾದ ಮಾಹಿತಿಯನ್ನು ಪರೋಕ್ಷವಾಗಿ ಗುಂಪಿನಲ್ಲಿರುವ ವ್ಯಕ್ತಿಗಳ ವರ್ತನೆ, ಹಾವ-ಭಾವ, ನಡತೆ, ವ್ಯಕ್ತಿತ್ವ, ಬಳಕೆ ಮಾಡುವ ಭಾಷೆ, ಮುಖಭಾವ ಇತ್ಯಾದಿಗಳನ್ನು ಗಮನಿಸಿ ಸಂಗ್ರಹಿಸುವನು. ಆದರೆ ತಮ್ಮ ವರ್ತತೆಗಳನ್ನು ಬೇರೊಬ್ಬರು ವೀಕ್ಷಿಸುತ್ತಾರೆಂಬುದು ಅವರ ಗಮನಕ್ಕೆ ಬಾರದು. ಇಲ್ಲಿ ಸಂಶೋಧಕನು ತಾನು ರಚಿಸಿಕೊಂಡ ಪ್ರಶ್ನೆಗಳನ್ನು ಗುಂಪಿನಲ್ಲಿರುವ ವ್ಯಕ್ತಿಗಳಿಗೆ ನೇರವಾಗಿ ಕೇಳದೆ ಪರೋಕ್ಷವಾಗಿ ಅವರನ್ನು ವೀಕ್ಷಿಸುವುದರ ಮೂಲಕ    ಪಡೆಯುವನು. ಅನೇಕ ಮನೋವಿಜ್ಞಾನಿಗಳು ಮಕ್ಕಳು ಮತ್ತು ಪ್ರಾಣಿಗಳ ಹೊಂದಾಣಿಕೆಯ ಸಮಸ್ಯೆಯನ್ನು ತಿಳಿಯಲು ಸಹಭಾಗಿಯಲ್ಲದ ವೀಕ್ಷಣೆಯನ್ನು ಕೈಗೊಳ್ಳುವರು.

ಅನುಕೂಲಗಳು

  1. ವೈಯಕ್ತಿಕವಾಗಿ ಮತ್ತು ಗುಂಪಿನಲ್ಲಿ ಈ ತಂತ್ರವನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು.
  2. ಈ ವಿಧಾನದ ಮೂಲಕ ಪಡೆದ ಮಾಹಿತಿಯನ್ನು ಹೆಚ್ಚು ವಿಶ್ವಸನೀಯ ಮತ್ತು ಪ್ರಾತಿನಿಧ್ಯತೆಯಿಂದ ಕೂಡಿರುವುದು.
  3. ಆರ್ಥಿಕವಾಗಿ ಯಾವುದೇ ಹೊರೆ ಎನಿಸದು.
  4. ಎಲ್ಲ ಸಂದರ್ಭಗಳಲ್ಲಿ ಈ ತಂತ್ರವನ್ನು ಬಳಸಬಹುದು.
  5. ಸಂಶೋಧಕನು/ ಶಿಕ್ಷಕನು ಗುಂಪಿನಲ್ಲಿನ ವ್ಯಕ್ತಿಗಳ ಒಂದುನಿರ್ದಿಷ್ಟ ವರ್ತನತೆಯ ಮೇಲೆ ಗಮನವನ್ನು ಕೇಂದ್ರೀಕರಿಸಿ ಅದಕ್ಕೆ ತಕ್ಕುದಾದ ಮಾಹಿತಿ ಪಡೆದು ಅದರಲ್ಲಿ ಏನಾದರೂ ದೋಷಗಳು ಕಂಡುಬಂದಲ್ಲಿ ಅವುಗಳನ್ನು ಸ್ಥಳದಲ್ಲಿಯೇ ನಿವಾರಿಸಲು ಪ್ರಯತ್ನಿಸುವನು.
  6. ಸಂಶೋಧಕನು/ ಶಿಕ್ಷಕನು ತಾನು ಏನು ವೀಕ್ಷಣೆ ಮಾಡಿ ಮಾಹಿತಿ ಸಂಗ್ರಹಿಸಬೇಕೆಂದು ಬಯಸುವನೋ ಅದರಂತೆ ಮಾಹಿತಿ ಪಡೆಯಲು ಅನುಕೂಲವಾಗುವುದು.
  7. ಸಹಜ ಸನ್ನಿವೇಶದಲ್ಲಿ ವ್ಯಕ್ತಿಗಳು ತಮ್ಮ ವರ್ತನೆಯನ್ನು ಪ್ರಯತ್ನಿಸುವರು.

ಅನಾನುಕೂಲಗಳು

  1. ಸಂಶೋಧಕನ/ ಶಿಕ್ಷಕನ ದೃಷ್ಠಿಯಲ್ಲಿ ನಿರಂತರವಾಗಿ ವೀಕ್ಷಿಸುವುದು ತುಂಬಾ ಆಯಾಸವೆನಿಸುವುದು.
  2. ಇದು ಅಧಿಕ ಸಮಯವನ್ನು ವ್ಯರ್ಥ ಮಾಡುವುದು.
  3. ವೀಕ್ಷಿಸಿದ ಪ್ರತಿಯೊಂದು ಅಂಶಗಳನ್ನು ದಾಖಲಿಸಲು ಸಾಧ್ಯವಾಗದು.
  4. ಇದು ವೈಯಕ್ತಿಕ ಪಕ್ಷಪಾತಕ್ಕೆ ಅವಕಾಶ ಮಾಡಿಕೊಡುವುದು.
  5. ಇದರಿಂದ ಕೇವಲ ಬಾಹ್ಯ ವರ್ತನೆಯನ್ನು ಅಳೆಯಬಹುದೇ ವಿನಃ ಆಂತರಿಕ ವರ್ತನೆಯನ್ನು ಅಳೆಯಲಾಗದು.

ವೀಕ್ಷಣೆಯ ಹಂತಗಳು

            ಸಾಮಾನ್ಯವಾಗಿ ವೀಕ್ಷಣೆಯಲ್ಲಿ ಪ್ರಮುಖವಾಗಿ ಮೂರು ಹಂತಗಳನ್ನು ಕಾಣಬಹುದು, ಅವುಗಳೆಂದರೆ –

1. ವೀಕ್ಷಣೆಯ ಯೋಜನೆ: ಯೋಜನೆಯಲ್ಲಿ ನಿಖರವಾಗಿ ಗುರುತಿಸಬೇಕಾದ ಅಂಶಗಳೆಂದರೆ –

ü  ವೀಕ್ಷಿಸಬೇಕಾದ ನಿರ್ದಿಷ್ಟ ಗುಂಪನ್ನು ಗುರುತಿಸುವುದು.

ü  ವೀಕ್ಷಿಸಬಹುದಾದಾ ಚಟುವಟಿಕೆಗಳನ್ನು ಕುರಿತು ವ್ಯಾಖ್ಯಾನಿಸುವುದು.

ü  ವೀಕ್ಷಣೆಯ ವ್ಯಾಪ್ತಿಯನ್ನು ಖಚಿತ ಪಡಿಸಿಕೊಳ್ಳುವುದು ಉದಾ: ವೈಯಕ್ತಿಕ ಅಥವಾ ಸಾಮೂಹಿಕ.

ü  ಮಾಹಿತಿ ಸಂಗ್ರಹಿಸಲು ಅಗತ್ಯವಾಗಿ ಬೇಕಾದ ಸಾಧನಗಳ ತಯಾರಿ ಮತ್ತು ಅದನ್ನು ಪ್ರಮಾಣಿಕರಿಸುವುದು.

ü  ವೀಕ್ಷಣೆಗೆ ಬೇಕಾದ ಕಾಲಮಿತಿಯನ್ನು ನಿರ್ಧರಿಸುವುದು.

ü  ಇದಕ್ಕೆ ತಗಲುವ ವೆಚ್ಚವನ್ನು ನಿಭಾಯಿಸಲು ಬೇಕಾದ ಮೂಲವನ್ನು ಪತ್ತೆ ಹಚ್ಚುವುದು.

2. ವೀಕ್ಷಣೆಯ ಕಾರ್ಯಾಚರಣೆ: ಈ ಕೆಳಕಂಡ ಅಂಶಗಳ ಹಿನ್ನೆಲೆಯಲ್ಲಿ ಕಾರ್ಯರೂಪಕ್ಕೆ ತರುವ ಅಗತ್ಯವಿದೆ. ಅಂತಹ ಅಂಶಗಳೆಂದರೆ –

ü  ಯೋಜನೆಯಲ್ಲಿ ಹಾಕಿಕೊಂಡ ಎಲ್ಲ ಅಂಶಗಳನ್ನು ಕಾರ್ಯರೂಪಕ್ಕೆ ತರುವುದು.

ü  ಅಭ್ಯರ್ಥಿಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ವಾತಾವರಣವನ್ನು ಸೃಷ್ಠಿ ಮಾಡುವುದು.

ü  ಮಾಹಿತಿ ದಾಖಲಿಸಲು ಅನುಕೂಲವಾಗುವಂತೆ ಕ್ಯಾಮರಾ, ಟೇಪ್ ರೆಕಾರ್ಡರ್‌ ಗಳನ್ನು ಬಳಕೆ ಮಾಡುವುದು.

ü  ಗುಂಪನ್ನು ವೀಕ್ಷಿಸಲು ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ವೀಕ್ಷಕರನ್ನು ಬಳಕೆ ಮಾಡುವುದು.

3.  ವೀಕ್ಷಣೆಯ ದಾಖಲೆ: ವೀಕ್ಷಣೆ ಮಾಡುವಾಗಲೇ ಗಮನಿಸಿದ ಅಂಶಗಳನ್ನು ಕೂಡಲೇ ದಾಖಲೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಎಷ್ಟೋ ಅಂಶಗಳು ದಾಖಲೆಯಿಂದ ಹೊರಗೆ ಉಳಿಯುವ ಸಾಧ್ಯತೆ ಹೆಚ್ಚು. ಇದಕ್ಕೆಂದೇ ಹಲವು ಮಾಧ್ಯಮಗಳನ್ನು ಬಳಸಿ ಮಾಹಿತಿಯನ್ನು ವಸ್ತುನಿಷ್ಠವಾಗಿ ದಾಖಲೆ ಮಾಡಬಹುದು. ಅಂತಿಮವಾಗಿ ವೀಕ್ಷಣೆಯಿಂದ ಬಂದ ಫಲಿತಾಂಶಗಳನ್ನು ಅತ್ಯಂತ ಜಾಗರೂಕವಾಗಿ ವಿಶ್ಲೇಷಣೆ ಮಾಡುವುದು ಸಂಶೋಧಕ/ಶಿಕ್ಷಕನ ಆದ್ಯ ಕರ್ತವ್ಯವಾಗಿದೆ. ಮಾಹಿತಿ ಸಂಗ್ರಹಣೆಗೆಂದು ತಾಳೆಪಟ್ಟಿಗಳು, ದರ್ಜಾಮಾಪನಿ, ಅಂಕಗಳ ಕಾರ್ಡ್‌ ಮತ್ತುತಾಳೆ ಹಾಕಿಕೊಳ್ಳಲು ಖಾಲಿ ಹಾಳೆಯನ್ನು ಸಾಧನಗಳನ್ನಾಗಿ ಬಳಸಲಾಗುವುದು.

ವೀಕ್ಷಣೆಯ ಅನುಕೂಲಗಳು

  1. ವ್ಯಕ್ತಿಯ ವರ್ತನೆಯನ್ನು ನೇರವಾಗಿ ವೀಕ್ಷಿಸಲು ಅನುಕೂಲ ಮಾಡಿಕೊಡುವುದು.
  2. ವಸ್ತುನಿಷ್ಠ ಮಾಹಿತಿ ಸಂಗ್ರಹಣೆಗೆ ನೆರವಾಗುವುದು.
  3. ವೀಕ್ಷಣಕಾರ ಮತ್ತು ಅಭ್ಯರ್ಥಿಗಳ ನಡುವೆ ಉತ್ತಮ ಸಂಬಂಧವನ್ನು ಬೆಸೆಯುವುದು.
  4. ಸಿದ್ದಾಂತ ಮತ್ತು ಪ್ರಾಕಲ್ಪನೆಗಳ ರಚನೆಗೆ ಇಂಬು ಕೊಡುವುದು.
  5. ವೀಕ್ಷಣೆಯ ಮೂಲಕ ಹಲವು ಕಾರ್ಯಕ್ರಮಗಳ ಪ್ರಭಾವ ವ್ಯಕ್ತಿಯ ಮೇಲೆ ಹೇಗೆ ಬೀರಿದೆ ಎಂಬುದನ್ನು ಅಳೆದು ನೋಡಬಹುದು.
  6. ಆರ್ಥಿಕವಾಗಿ ಹೆಚ್ಚು ಹೊರೆ ಎನಿಸದು.
  7. ವ್ಯಕ್ತಿಗಳ ಅಧ್ಯಯನದ ಉದ್ದೇಶವನ್ನು ಹೇಳಲು ಸಂಶೋಧಕನಿಗೆ /ಶಿಕ್ಷಕನಿಗೆ ಅವಕಾಶ ಕಲ್ಪಿಸುವುದು.
  8. ಮಕ್ಕಳ ಅನೇಕ ಸಮಸ್ಯೆಗಳಿಗೆ ಇದು ಪರಿಹಾರವನ್ನು ನೀಡುವುದು.
  9. ವ್ಯಕ್ತಿಗಳು ಸಹಜ ಸನ್ನಿವೇಶದಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಕ್ರಯಿಸಲು ಒತ್ತು ನೀಡುವುದು.
  10. ಇದು ಅತ್ಯಂತ ವಿಶ್ವಾಸಾರ್ಹ ಮತ್ತು ನಮ್ಯತೆಯ ಸ್ವಭಾವವುಳ್ಳದ್ದಾಗಿರುವುದು.
  11. ಇತರೆ ಸಾಧನ / ತಂತ್ರಗಳ ಮೂಲಕ ಸಂಗ್ರಹಿಸಿದ ಮಾಹಿತಿಯ ಸತ್ಯಾಸತ್ಯತೆಯನ್ನು ವೀಕ್ಷಣೆಯ ಮೂಲಕ ಪರಿಶೀಲಿಸಬಹುದು.

ವೀಕ್ಷಣೆಯ ಅನಾನುಕೂಲಗಳು

  1. ಮಾಹಿತಿ ಸಂಗ್ರಹಣೆಯ ದೃಷ್ಠಿಯಿಂದ ಹೆಚ್ಚು ಸಮಯವನ್ನು ವ್ಯರ್ಥ ಮಾಡುವುದು.
  2. ಇದು ಕೇವಲ ಬಾಹ್ಯ ವರ್ತನೆಯನ್ನು ವೀಕ್ಷಿಸಿ ಆಂತರೀಕ ವರ್ತನೆಯನ್ನು ವೀಕ್ಷಿಸಲು ನೆರವಾಗದು.
  3. ಒಮ್ಮೆ ವ್ಯಕ್ತಿಯ ವರ್ತನೆಯನ್ನು ವೀಕ್ಷಿಸಿದ ನಂತರ ಅದನ್ನು ಪುನಃ ಪರಿಶೀಲನೆಗೆ ಒಳಪಡಿಸುವುದು ಕಷ್ಠವಾಗುವುದು.
  4. ಇದು ಹೆಚ್ಚು ವಿಶ್ವಾಸಾರ್ಹವಾದುದಲ್ಲ.
  5. ವೀಕ್ಷಣೆಗೆಂದು ತರಬೇತಿ ಹೊಂದಿದ ಮತ್ತು ಹೆಚ್ಚು ಅನುಭವಿ ವ್ಯಕ್ತಿಯ ಅವಶ್ಯಕತೆ ಇದೆ. ಆದರೆ ಇಂತಹ ವ್ಯಕ್ತಿಗಳು ದೊರಕುವುದು ದುರ್ಲಭವೆಂದೇ ಹೇಳಬಹುದು.
  6. ಇದು ಹೆಚ್ಚು ಜ್ಞಾಪಕಶಕ್ತಿಯನ್ನು ಅವಲಂಬಿಸಿರುವುದರಿಂದ ಎಷ್ಟೋ ಸಂದರ್ಭಗಳಲ್ಲಿ ದಾಖಲೆ ಮಾಡಿಕೊಳ್ಳುವ ಮುನ್ನವೇ ಅನೇಕ ಅಂಶಗಳು ಮರೆತು ಹೋಗುವುವು.
  7. ವೈಯಕ್ತಿಕವಾಗಿ ಪ್ರತಿ ವ್ಯಕ್ತಿಯನ್ನು ಭೇಟಿ ಮಾಡಿ ವೀಕ್ಷಿಸುವುದು ಕಷ್ಟವೆನಿಸುವುದು.
  8. ಕೆಲವೊಮ್ಮೆ ವೀಕ್ಷಕನು ವ್ಯಕ್ತಿ/ಗುಂಪಿನ ಮೇಲೆ ನಿಯಂತ್ರಣ ಸಾಧಿಸುವುದರಿಂದ ನಿರೀಕ್ಷಿತ ಮಾಹಿತಿಗಳು ದೊರಕಲಾರವು.

2. ಪ್ರಶ್ನಾವಳಿ

ಪ್ರಾಶ್ನಾವಳಿಯ ಅರ್ಥ:   

   ʼಪ್ರಶ್ನಾವಳಿʼ ಎಂದರೆ ʼಪ್ರಶ್ನೆಗಳ ಮಾಲಿಕೆʼ, ʼಪ್ರಶ್ನೆಗಳ ಪುಂಜʼ ಎಂದು ಕರೆಯುವರು. ಪ್ರಶ್ನಾವಳಿಯಲ್ಲಿ ಒಂದು ಶೀರ್ಷಿಕೆ/ಸಮಸ್ಯೆಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳಿರುವುವು. ಇಂತಹ ಪ್ರಶ್ನೆಗಳನ್ನೊಳಗೊಂಡ ಮುದ್ರಿತ ಪ್ರತಿಗಳನ್ನು ಸಂಶೋಧಕನು/ಶಿಕ್ಷಕನು ಆಯ್ಕೆ ಮಾಡಿಕೊಂಡ ನಿಗದಿತ ಪ್ರತಿದರ್ಶಕ್ಕೆ ವಿತರಿಸಿ ಮಾಹಿತಿ ಸಂಗ್ರಹಿಸುವನು. ಪ್ರಶ್ನಾವಳಿಯ ಸಫಲತೆ ಮತ್ತು ವಿಫಲತೆಯು ಪ್ರತಿದರ್ಶವು ನೀಡಿದ ಮಾಹಿತಿಯ ಸತ್ಯಾಸತ್ಯತೆಯ ಮೇಲೆ ಆಧಾರಿತವಾಗಿರುವುದು. ಪ್ರಶ್ನಾವಳಿಯಲ್ಲಿ ಪ್ರಶ್ನೆಗಳಿಗೆ ಆಯ್ಕೆ ಮಾಡಿಕೊಂಡ ವ್ಯಕ್ತಿಗಳು ಸಮರ್ಪಕವಾಗಿ ಉತ್ತರ ನೀಡದಿದ್ದಲ್ಲಿ ಅಂತಿಮವಾಗಿ ಸಂಶೋಧನಾ ವರದಿಯು ದೋಷಪೂರ್ಣದಿಂದ ಕೂಡಿರುವುದು. ಈ ದಿಶೆಯಲ್ಲಿ ಸಮರ್ಪಕ ಮಾಹಿತಿಯನ್ನು ಸಂಗ್ರಹಿಸುವ ದೃಷ್ಠಿಯಿಂದ ಆಯ್ಕೆ ಮಾಡಿಕೊಂಡ ಪ್ರತಿದರ್ಶದ ಸಂಪೂರ್ಣ ಸಹಕಾರ ಅತಿ ಅಗತ್ಯವಾಗಿ ಬೇಕಾಗುತ್ತದೆ.

ವ್ಯಾಖ್ಯಾನಗಳು:

  1. ಗುಡ್‌ ಮತ್ತು ಹಾಟ್‌ - “ವ್ಯಕ್ತಿಯ ಸ್ವತಃ ಪತ್ರಿಕೆಯಲ್ಲಿನ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಭರ್ತಿ ಮಾಡುವ ವಿಧಾನವೇ ಪ್ರಶ್ನಾವಳಿ.”
  2. ಬಾರ್‌ ಡೇವಿಸ್‌ ಮತ್ತು ಜಾನ್‌ ಸನ್‌ - “ಅಪೇಕ್ಷಿತ ಮಾಹಿತಿಯನ್ನು ಆಯ್ಕೆ ಮಾಡಿಕೊಂಡ ಪ್ರತಿದರ್ಶದ ಮುಖೇನ ಪ್ರಶ್ನೆಗಳಿಗೆ ತಕ್ಕುದಾದ ಉತ್ತರವನ್ನು ಕ್ರಮಬದ್ದವಾಗಿ ಪಡೆಯುವ ಸಾಧನವೇ ಪ್ರಶ್ನಾವಳಿ.”
  3. ಬೋಗಾರ್ಡಸ್‌ - “ಹಲವು ಜನರಿಂದ ಪ್ರತಿಕ್ರಿಯೆ ಪಡೆಯಲು ಕಳುಹಿಸಿದ ಪ್ರಶ್ನೆಗಳ ಮಾಲೆಯೇ ಪ್ರಶ್ನಾವಳಿ.”
  4. ಬೆಸ್ಟ್‌ ಮತ್ತು ಖಾನ್‌ - “ಪ್ರಶ್ನಾವಳಿಯು ಒಂದು ವಿಷಯಕ್ಕೆ ಸಂಬಂದಿಸಿದಂತೆ ಹಲವು ಪ್ರಶ್ನೆಗಳ ಮಾಲೆಯನ್ನು ಒಳಗೊಂಡಿದ್ದು, ಇವುಗಳನ್ನು ವೈಯಕ್ತಿಕವಾಗಿ ಕೇಳುವುದರ ಮೂಲಕ ಸಾಂಖ್ಯಿಕವಗಿ ಉಪಯುಕ್ತ ಮಾಹಿತಿಯನ್ನು ಪಡೆಯಲಾಗುವುದು.”

ಉತ್ತಮ ಪ್ರಶ್ನಾವಳಿಯ ಗುಣಲಕ್ಷಣಗಳು:

  1. ಇದು ನಿರ್ದಿಷ್ಠ ಶೀರ್ಷಿಕೆ/ಸಮಸ್ಯೆಗೆ ಸಂಬಂಧಿಸಿದಂತಿರಬೇಕು.
  2. ಪ್ರಶ್ನಾವಳಿಯ ಗಾತ್ರ ಆದಷ್ಟೂ ಚಿಕ್ಕದಾಗಿದ್ದು ಪ್ರತಿಯೊಬ್ಬ ವ್ಯಕ್ತಿಯೂ ಸುಲಭವಾಗಿ ಉತ್ತರಿಸುವಂತಿರಬೇಕು.
  3. ಬಳಕೆ ಮಾಡುವ ಭಾಷೆ ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗುವಂತಿರಬೇಕು.
  4. ರಚಿಸಿದ ಯಾವುದೇ ಹೇಳಿಕೆಯು ದ್ವಂದ್ವಾರ್ಥವನ್ನು ನೀಡಬಾರದು.
  5. ಮಾಹಿತಿಯ ಯಾದಿ ತಯಾರಿಸಲು ಸುಲಭವಾಗಿರಬೇಕು.
  6. ರಚಿಸುವ ಪ್ರಶ್ನೆಗಳು ಸ್ವಭಾವತಃ ವಸ್ತುನಿಷ್ಟವಾಗಿರಬೇಕು
  7. ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಪ್ರಶ್ನೆಗಳನ್ನು ರಚಿಸಿರಬೇಕು.
  8. ಪ್ರತಿ ಪ್ರಶ್ನೆಗೆ ಸೂಕ್ತವಾದ ಆಯ್ಕೆಗಳನ್ನು ನೀಡಬೇಕು.
  9. ರಚಿಸಿದ ಪ್ರಶ್ನಾವಳಿಯನ್ನು ನಿರ್ದಿಷ್ಟ ಪ್ರತಿದರ್ಶಕ್ಕೆ ಪರೀಕ್ಷಿಸಲು ನೀಡಬೇಕು.
  10. ಅಭ್ಯರ್ಥಿಗಳು ಪ್ರಶ್ನಾವಳಿಯಲ್ಲಿನ ಎಲ್ಲ ಹೇಳಿಕೆಗಳಿಗೆ ಸೂಕ್ತ ಉತ್ತರ ನೀಡಲು ಅನುಕೂಲವಾಗುವಂತೆ ಅಗತ್ಯ ಮಾರ್ಗಸೂಚಿಯನ್ನು ಒಳಗೊಂಡಿರಬೇಕು.
  11. ರಚಿಸುವ ಹೇಳಿಕೆಗಳು ಸಾಮಾನ್ಯದಿಂದ ಸಂಕೀರ್ಣತೆಯ ಕಡೆಗೆ ಸಾಗುವಂತಿರಬೇಕು.
  12. ಪ್ರತೀ ಹೇಳಿಕೆಯ ನಡುವೆ ಅನ್ಯೋನ್ಯ ಸಂಬಂಧವಿರಬೇಕು.
  13. ಪ್ರಶ್ನಾವಳಿಯು ನೋಡಲು ಆಕರ್ಷಕವಾಗಿದ್ದು, ಎಲ್ಲಿಯೂ ಮುದ್ರಣ ದೋಷಗಳಿರಬಾರದು.
  14. ಹೇಳಿಕೆಗಳಿಗೆ ಉತ್ತರಿಸಲು ಅಗತ್ಯವಾದ ಅಭಿಪ್ರಾಯ ಸೂಚಕಗಳನ್ನು ಹೊಂದಿರಬೇಕು. ಉದಾ: ಮೂರು ಅರ್ಥವಾ ಐದು ಅಂಶಗಳ ಮಾನಕ –
  15. ಪ್ರಶ್ನಾವಳಿಗೆ ಉತ್ತರಿಸುವ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಲು ಅಗತ್ಯವಾದ ಅಂಶಗಳನ್ನೊಳಗೊಂಡಿರಬೇಕು. ಉದಾ: ಹೆಸರು, ವಯಸ್ಸು, ಓದುವ ಶಾಲೆ, ವಿದ್ಯಾರ್ಹತೆ, ಧರ್ಮ, ವರ್ಗ, ಕುಟುಂಬದ ವಾರ್ಷಿಕ ವರಮಾನ, ವಾಸಸ್ಥಳ ಇತ್ಯಾದಿ.
  16. ಪ್ರಶ್ನಾವಳಿಯ ವಿಶ್ವಸನೀಯತೆ ಮತ್ತು ಸಿಂಧುತ್ವವನ್ನು ಲೆಕ್ಕ ಹಾಕಬೇಕು.

ಪ್ರಶ್ನಾವಳಿಯ ವಿಧಗಳು:

  1. ನಿರ್ಬಂಧಿತ ಪ್ರಶ್ನೆಗಳು: ನಿರ್ಬಂಧಿತ ಪ್ರಶ್ನೆಗಳು ವಸ್ತುನಿಷ್ಟ ರೂಪದ ಪ್ರಶ್ನೆಗಳಾಗಿರುತ್ತವೆ. ಈ ಬಗೆಯ ಪ್ರಶ್ನೆಗಳನ್ನು ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳುವಾಗ ಕೇಳಲಾಗುವುದು. ಇದರ ಹೆಸರೇ ಸೂಚಿಸುವಂತೆ ಆಯ್ಕೆ ಮಾಡಿಕೊಂಡ ಸಮಸ್ಯೆಗೆ ಪೂರಕವಾಗಿ ಹೇಳಿಕೆಗಳನ್ನು ನೀಡಲಾಗುವುದು. ಈ ನಾಲ್ಕರಲ್ಲಿ ಒಂದು ಉತ್ತರವನ್ನು ಕಂಡುಹಿಡಿದು ಸರಿ ಉತ್ತರದ ಎದುರು () ಈ ಚಿಹ್ನೆಯನ್ನು ಹಾಕುವುದರ ಮೂಲಕ ತನ್ನ ಅಭಿಪ್ರಾಯವನ್ನು ನೀಡುವನು. ಈ ನಾಲ್ಕು ಆಯ್ಕೆ ಉತ್ತರಗಳನ್ನು ಹೊರತುಪಡಿಸಿ ಬೇರೆ ಆಯ್ಕೆಗಳನ್ನು ಸೂಚಿಸಲು ಆತನಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಈ ಬಗೆಯ ಪ್ರಶ್ನೆಗಳನ್ನು ನಿರ್ಬಂಧಿತ ಪ್ರಶ್ನೆಗಳು ಎಂದು ಕರೆಯಲಾಗುವುದು.

ಉದಾ: 1. ಕರ್ನಾಟಕದ _____________ಸ್ಥಳವು ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದಿದೆ.

           ಎ. ತಲಕಾವೇರಿ     ಬಿ. ತಿರುಮಕೂಡಲು   ಸಿ. ತಲಕಾಡು     ಡಿ. ಶ್ರೀರಂಗಪಟ್ಟಣ

  ಇದರಲ್ಲಿ ತಿರುಮಕೂಡಲು ಎಂಬುದು ಸರಿಯಾದ ಉತ್ತರವಾಗಿದ್ದು, ಅದರಂತೆ ಪ್ರಶ್ನಾವಳಿಯಲ್ಲಿ ಪ್ರಶ್ನೆಗಳನ್ನು ರಚಿಸುವಾಗ ಪ್ರತಿ ಹೇಳಿಕೆಗೆ ನಾಲ್ಕು ಉತ್ತರಗಳನ್ನು ನೀಡುವ ಬದಲಾಗಿ ಹೌದು / ಇಲ್ಲ ಎಂಬ ಮಾದರಿಯ ಪ್ರಶ್ನೆಗಳನ್ನು ರಚಿಸಲಾಗುವುದು. ಇದು ನಿರ್ಬಂಧಿತ ಪ್ರಶ್ನೆಗಳಿಗೆ ಮತ್ತೊಂದು ಪ್ರಮುಖ ಉದಾಹರಣೆಯಾಗಿದೆ.

  ಉದಾ: 1. ನಿನಗೆ ಗಣಿತ ಬೋಧಿಸುವ ಶಿಕ್ಷಕರನ್ನು ಕಂಡರೆ ಭಯವೇ?                               ಹೌದು / ಇಲ್ಲ

              2. ನೀನು ಯಾವಾಗಲೂ ದೂರದರ್ಶನ ನೋಡಲು ಬಯಸುವೆಯಾ?                  ಹೌದು / ಇಲ್ಲ

             3.  ನಿನ್ನ ವೈಯಕ್ತಿಕ ಸಮಸ್ಯೆಗಳನ್ನು ಇತರರ ಮುಂದೆ ಹೇಳಿಕೊಳ್ಳಲು ನಾಚಿಕೆಯಾಗುವುದೇ?  

                                                                                                                                       ಹೌದು / ಇಲ್ಲ

ನಿರ್ಬಂಧಿತ ಪ್ರಶ್ನೆಗಳ ಅನುಕೂಲಗಳು:   

1.     ಪ್ರಶ್ನೆಗಳ ರಚನೆ ಅತಿ ಸುಲಭ ಮತ್ತು ಸರಳವಾಗಿರುವುದು.

2.     ಉತ್ತರಿಸಲು ಮತ್ತು ಮೌಲ್ಯಮಾಪನ ಮಾಡಲು ಅತಿ ಸುಲಭವೆನಿಸುವುದು.

3.     ಕಡಿಮೆ ಸಮಯದಲ್ಲಿ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಬಹುದು.

4.     ಇದು ಬರವಣಿಗೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದಿಲ್ಲ.

5.     ಅಂಚೆಯ ಮೂಲಕವೂ ಇಂತಹ ಪ್ರಶ್ನೆಗಳಿಗೆ ಶೀಘ್ರವಾಗಿ ಉತ್ತರವನ್ನು ಪಡೆಯಬಹುದು.

6.     ಅಭ್ಯರ್ಥಿಗಳ ಜ್ಞಾನವನ್ನು ಇದು ಪರೀಕ್ಷಿಸುವುದು.

ನಿರ್ಬಂಧಿತ ಪ್ರಶ್ನೆಗಳ ಅನಾನುಕೂಲಗಳು:   

1.     ಪ್ರತಿ ಪ್ರಶ್ನೆಗಳಿಗೆ ಆಯ್ಕೆಯ ಉತ್ತರಗಳನ್ನು ನೀಡಲು ಸಂಶೋಧಕನು ವಿಫಲನಾಗುವ ಸಾಧ್ಯತೆ ಹೆಚ್ಚು.

2.     ಈ ಬಗೆಯ ಪ್ರಶ್ನೆಗಳನ್ನು ರಚಿಸಲು ಹೆಚ್ಚು ಹಣ ಮತ್ತು ಶ್ರಮ ವ್ಯಯವಾಗುವುದು.

3.     ಕೆಲವೊಮ್ಮೆ ಹೇಳಿಕೆಗಳಿಗೆ ಹೌದು/ಇಲ್ಲ ಎಂಬ ಅಭಿಪ್ರಾಯ ಸೂಚಕಗಳನ್ನು ನೀಡಿದಲ್ಲಿ ಪ್ರತಿಕ್ರಯಿಸುವವರು ಸರಿಯಾಗಿ ಉತ್ತರ ನೀಡುವರೆಂದು ಹೇಳಲಾಗದು.

4.     ಕೆಲವೊಮ್ಮೆ ಅಭ್ಯರ್ಥಿಗಳು ಆಸಕ್ತಿರಹಿತರಾಗಿ ಕುರುಡು ವಿಧಾನದ ಮೂಲಕ ಉತ್ತರ ನೀಡುವರು ಇದರಿಂದ ಸಂಶೋಧನೆ ಯಾವುದೇ ರೀತಿಯಲ್ಲಿ ಫಲಪ್ರದವಾಗುವುದಿಲ್ಲ.

5.     ಇದರಿಂದ ಭಾಷಾ ಪಾಂಡಿತ್ಯವನ್ನು ಅಳೆಯಲಾಗದು.

2.  ಅನಿರ್ಬಂಧಿತ ಪ್ರಶ್ನೆಗಳು:   ನಿರ್ಬಂಧಿತ ಪ್ರಶ್ನಾವಳಿಯಲ್ಲಿ ಪ್ರಶ್ನೆಗಳು ವಸ್ತುನಿಷ್ಠ ರೂಪದವುಗಳಾಗಿದ್ದು ಅವುಗಳು ಒಂದು ಪದದ ಉತ್ತರ ಅಥವಾ ಹೌದು/ಇಲ್ಲ ರೂಪದಲ್ಲಿ ಉತ್ತರವನ್ನು ಬಯಸಿದರೆ, ಅನಿರ್ಬಂಧಿತ ಪ್ರಶ್ನಾವಳಿಯಲ್ಲಿನ ಪ್ರಶ್ನೆಗಳು ಸಂಕ್ಷಿಪ್ತ ಮತ್ತು ದೀರ್ಘ ಉತ್ತರವನ್ನು ಬಯಸುವುವು. ಈ ವಿಧವಾದ ಪ್ರಶ್ನೆಗಳಿಗೆ ಅಭ್ಯರ್ಥಿಯು ಉತ್ತರ ನೀಡಲು ಸ್ವತಂತ್ರನಾಗಿರುವನು. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಲು ಸಾಕಷ್ಟು ತಾರ್ಕಿಕವಗಿ ಯೋಚಿಸಿ ತನ್ನ ಸ್ವಂತ ಅಭಿಪ್ರಾಯವನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸುವನು.

 ಉದಾ: 1. ʼರಾಷ್ಟ್ರದ ಭವಿಷ್ಯತ್ತು ಇಂದಿನ ಯುವಕರ ಕೈಲಿದೆʼ ಈ ಹೇಳಿಕೆಯನ್ನು ನಿರೂಪಿಸಿ.

            2.  ಪ್ರಸ್ತುತ ಸಮಾಜದಲ್ಲಿ ತಲೆ ಎತ್ತಿರುವ ಭ್ರಷ್ಟಾಚಾರ ಮತ್ತು ಅರಾಜಕತೆಗೆ ಇಂದಿನ ರಾಜಕೀಯ  

                   ಪರಿಸ್ಥಿತಿಯೇ ಕಾರಣ ಎಂಬುದನ್ನು ನೀವು ಹೇಗೆ ಅರ್ಥೈಸುವಿರಿ?

        ಈ ರೀತಿಯ ಪ್ರಶ್ನೆಗಳನ್ನು ಸಂಶೋಧಕನು ಕೊಟ್ಟಲ್ಲಿ ಅಭ್ಯರ್ಥಿಗಳಿಂದ ನಿಖರವಾದ ಉತ್ತರವನ್ನು ಪಡೆಯಲಾರನು.  ಇದಲ್ಲದೆ ಅವರು ನೀಡಿದ ಅಭಿಪ್ರಾಯಗಳನ್ನು ವಿಶ್ಲೇಷಿಸುವುದು ಮತ್ತು ಅಂಕ ನಿರ್ಧರಿಸುವುದು ತೀರ ಕಷ್ಟವೆನಿಸುವುದು.

ಅನಿರ್ಬಂಧಿತ ಪ್ರಶ್ನೆಗಳ ಅನುಕೂಲಗಳು:   

  1. ಸಂಶೋಧನೆಯ ದೃಷ್ಟಿಯಿಂದ ಅಧಿಕ ಮಾಹಿತಿ ಸಂಗ್ರಹಿಸಲು ಇದು ನೆರವಾಗುವುದು.
  2. ಕೆಲವೊಮ್ಮೆ ಸಂಶೋಧಕನಿಗೆ ತಿಳಿಯದಿರುವ ಎಷ್ಟೋ ಮಾಹಿತಿಗಳನ್ನು ಅಭ್ಯರ್ಥಿಗಳಿಂದ ಪಡೆಯಲು ಇದು ಉಪಯೋಗವಾಗುವುದು.
  3. ಅಧಿಕ ಪಾಂಡಿತ್ಯವನ್ನು ಹೊಂದಿದ ಅಭ್ಯರ್ಥಿಗಳು ತಮ್ಮ ಬುದ್ದಿಮತ್ತೆಯನ್ನು ಪ್ರದರ್ಶಿಸಲು ಈ ವಿಧವಾದ ಪ್ರಶ್ನೆಗಳು ಅನುಕೂಲವಾಗುವುವು.
  4. ಇದು ಬರವಣಿಗೆಯ ಕೌಶಲ್ಯವನ್ನು ವೃದ್ದಿಸಿಕೊಳ್ಳಲು ಉತ್ತೇಜಿಸುವುದು.

ಅನಿರ್ಬಂಧಿತ ಪ್ರಶ್ನೆಗಳ ಅನಾನುಕೂಲಗಳು:   

  1. ನಿರ್ದಿಷ್ಟ ಉತ್ತರವನ್ನು ಇದರಿಂದ ಪಡೆಯಲಾಗದು.
  2. ಅಭ್ಯರ್ಥಿಗಳಿಂದ ಬಂದ ಉತ್ತರಗಳನ್ನು ಸರಿಯಾದ ಕ್ರಮದಲ್ಲಿ ವರ್ಗೀಕರಿಸಲು ಮತ್ತು ಮೌಲ್ಯಮಾಪನ ಮಾಡಲು ಕಷ್ಟವಾಗುವುದು.
  3. ಅವರು ತಮ್ಮ ಅಭಿಪ್ರಾಯ ತಿಳಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವರು.
  4. ಈ ಬಗೆಯ ಪ್ರಶ್ನಾವಳಿಗಳನ್ನು ಅಂಚೆಯ ಮೂಲಕ ಕಳುಹಿಸಿ ಅಭಿಪ್ರಾಯ ಸಂಗ್ರಹಿಸಲು ಹೊರಟಲ್ಲಿ ನಿರೀಕ್ಷಿತ ಪ್ರಮಾಣದ ಅಭ್ಯರ್ಥಿಗಳು ಅಭಿಪ್ರಾಯ ನೀಡಿ ಪ್ರಶ್ನಾವಳಿಯನ್ನು ಹಿಂತಿರುಗಿಸಲಾರರು.
  5. ನಿರೀಕ್ಷಿತ ಸಂಶೋಧನಾ ಫಲಿತಾಂಶಗಳನ್ನು ಇದರಿಂದ ಪಡೆಯಲು ಸಾಧ್ಯವಾಗದು.

ಪ್ರಶ್ನಾವಳಿಯ ಅನುಕೂಲಗಳು:

  1. ಪ್ರಶ್ನಾವಳಿಯನ್ನು ಏಕಕಾಲದಲ್ಲಿ ಆಯ್ಕೆ ಮಾಡಿಕೊಂಡ ಪೂರ್ಣ ಪ್ರತಿದರ್ಶಕ್ಕೆ ವಿತರಿಸುವುದರಿಂದ ಹಣ, ಶ್ರಮ ಮತ್ತು ಕಾಲದ ಉಳಿತಾಯವಾಗುತ್ತದೆ.
  2. ವಿಸ್ತಾರವಾದ ಕ್ಷೇತ್ರದಲ್ಲಿ ಇದರ ಬಳಕೆ ಮಾಡಲಾಗುವುದು.
  3. ಉತ್ತರಿಸಲು ಸಾಕಷ್ಟು ಸಮಯವನ್ನು ನೀಡಲಾಗುವುದು.
  4. ಅವರು ನೀಡುವ ಅಭಿಪ್ರಾಯಗಳನ್ನು ಸಂಶೋಧನೆ ಹೊರತುಪಡಿಸಿ ವೈಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳಲಾಗುವುದಿಲ್ಲವೆಂಬ ಭರವಸೆ ನೀಡುವುದರಿಂದ ಯಾವುದೇ ಪೂರ್ವಗ್ರಹಪೀಡಿತರಾಗದೆ ಎಲ್ಲ ಹೇಳಿಕೆಗೆ ಮುಕ್ತವಾಗಿ ಉತ್ತರಿಸುವರು.
  5. ಬೇರೆ ಎಲ್ಲಾ ಸಾಧನಗಳಿಗಿಂತಲೂ ಈ ಸಾಧನವು ಮಾಹಿತಿ ಸಂಗ್ರಹಿಸುವಲ್ಲಿ ಹೆಚ್ಚು ಉಪಯುಕ್ತವೆನಿಸುವುದು.
  6. ಪ್ರತಿದರ್ಶದ ಗಾತ್ರ ಹೆಚ್ಚಾದಷ್ಟು ಸಂಶೊಧನಾ ಫಲಿತಾಂಶ ಉತ್ತಮಗೊಳ್ಳುವುದು.
  7. ಇದರ ಮೌಲ್ಯಮಾಪನ ಮಾಡಲು ಯಾವುದೇ ಕಷ್ಟವೆನಿಸದು.
  8. ಪ್ರಶ್ನಾವಳಿ ಮೂಲಕ ಮಾಹಿತಿ ಸಂಗ್ರಹಿಸುವುದರಿಂದ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲು ನೆರವಾಗುವುದು.
  9. ಗುಣಾತ್ಮಕ ಮತ್ತು ಸಂಖ್ಯಾತ್ಮಕ ಮಾಹಿತಿಯನ್ನುಇದರಿಂದ ಪಡೆಯಬಹುದಾಗಿದೆ.
  10. ವಸ್ತುನಿಷ್ಟ ಮಾಹಿತಿ ಸಂಗ್ರಹಣೆಗೆ ಅನುಕೂಲವಾಗುವುದು.

ಪ್ರಶ್ನಾವಳಿಯ ಅನಾನುಕೂಲಗಳು:

  1. ಅನಕ್ಷರಸ್ಥರಿಗೆ ಇದನ್ನು ನೀಡಲು ಬಾರದು.
  2. ವಿತರಿಸಿದ ಪ್ರಶ್ನಾವಳಿಗಳಲ್ಲಿ ಎಲ್ಲವೂ ಮರಳಿ ಬರುತ್ತವೆಂದು ಹೇಳಲಾಗದು.
  3. ಅಭ್ಯರ್ಥಿಗಳು ಹೇಳಿಕೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ತಪ್ಪು ಉತ್ತರಗಳನ್ನು ನೀಡಲು ಇದು ಪ್ರೇರೇಪಿಸುವುದು.
  4. ಕೆಲವೊಮ್ಮೆ ಅಭ್ಯರ್ಥಿಗಳು ಕೆಲಸದ ಒತ್ತಡ, ಅಸಡ್ಡೆಯ ಕಾರಣಗಳಿಂದಾಗಿ ತಾವು ಪ್ರಶ್ನಾವಳಿಯನ್ನು ಓದಿ ಅಭಿಪ್ರಾಯಗಳನ್ನು ತಿಳಿಸುವ ಬದಲಾಗಿ ಬೇರೊಬ್ಬರಿಂದ ಮಾಹಿತಿಯನ್ನು ಭರ್ತಿ ಮಾಡಿಸಿ ಕಳುಹಿಸುವುದರಿಂದ ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಾಗದು.
  5. ಅಭಿಪ್ರಾಯ ತಿಳಿಸಲು ಸಾಕಷ್ಟು ಸಮಯ ನೀಡಿದ್ದರೂ ಅದರಲ್ಲಿ ಕೆಲವರು ಪೂರ್ಣವಾಗಿ ಉತ್ತರಿಸದೆ ಅಪೂರ್ಣವಾಗಿ ಉತ್ತರಿಸಿದ ಪ್ರಶ್ನಾವಳಿಯನ್ನು ಸಂಶೋಧಕನಿಗೆ ಮರಳಿ ಕಳುಹಿಸುವರು.
  6. ಕೆಲವು ಅಭ್ಯರ್ಥಿಗಳು ಪ್ರಶ್ನಾವಳಿಯಲ್ಲಿನ ಹೇಳಿಕೆಗೆ ಉತ್ತರಿಸುವುದರಿಂದ ನನಗೇನೋ ಅದರಿಂದ ವೈಯಕ್ತಿಕವಾಗಿ ಲಾಭವಾಗುವುದಿಲ್ಲವೆಂಬುದನ್ನು ಅರಿತು ಅದನ್ನು ವಾಪಸ್ಸು ಮಾಡದೇ ಇರಬಹುದು.
  7. ನಿರಿಕ್ಷಿತ ಪ್ರಮಾಣದಲ್ಲಿ ಉತ್ತರಿಸಿದ ಪ್ರಶ್ನಾವಳಿಗಳು ಮರಳಿ ಬಾರದಿದ್ದಾಗ ಸಂಶೋಧಕನು ಎಷ್ಟೇ ಒತ್ತಾಯಪಡಿಸಿದರೂ ಅವುಗಳನ್ನು ಕಳುಹಿಸದಿರುವವರೇ ಹೆಚ್ಚು.
  8. ವೈಯಕ್ತಿಕ ಭೇಟಿಯ ಕೊರತೆ ಎದ್ದು ಕಾಣುವುದು.

3. ತಾಳೆ ಪಟ್ಟಿ

       ʼತಾಳೆ ಪಟ್ಟಿʼ ಗೆ ಪರ್ಯಾಯವಾಗಿ ʼತನಿಖಾ ಪಟ್ಟಿʼ ʼತನಿಖಾ ಸೂಚಿʼ ಎಂಬ ಪದಗಳ ಬಳಕೆ ರೂಢಿಯಲ್ಲಿದೆ. ಸಂಶೋಧನೆಯಲ್ಲಿ ಮಾಹಿತಿ ಸಂಗ್ರಹಿಸಲು ಇತರೆ ಸಾಧನಗಳನ್ನು ಬಳಸುವಂತೆ ತಾಳೆ ಪಟ್ಟಿಯನ್ನು ಸಹ ಬಳಕೆ ಮಾಡಲಾಗುತ್ತದೆ. ತಾಳೇ ಪಟ್ಟಿಗಳ ರಚನೆ ಅತಿ ಸುಲಭ ಮತ್ತು ಸರಳವಾಗಿದ್ದು, ಸಂಶೋಧಕನು ಉದ್ದೇಶಪೂರಕವಾಗಿ ವೀಕ್ಷಿಸಬೇಕಾದ ಅಂಶಗಳನ್ನು ಮೊದಲೇ ಪ್ರತ್ಯೇಕವಾಗಿ ಹಾಳೆಯಲ್ಲಿ ಬರೆದುಕೊಂಡು ಅದರಂತೆ ವೀಕ್ಷಿಸುವನು. ಈ ಬಗೆಯ ತಾಳೆ ಪಟ್ಟಿಗಳನ್ನು ರಚಿಸಿ ಅವುಗಳನ್ನು ಪರೀಕ್ಷೆಗೆ ಒಳಪಡಿಸುವುದು ಸಂಶೋಧಕನಿಗೆ ಅಥವಾ ಶಿಕ್ಷಕನಿಗೆ ಅತಿ ಸುಲಭವೆನಿಸುವುದು.

ಅರ್ಥ:

       ʼಯಾವುದರ ತನಿಖೆ ನಡೆಸಬೇಕಾಗಿದೆಯೋ ಅದಕ್ಕೆ ಸಂಬಂಧಿಸಿದ ಪಟ್ಟಿಯಲ್ಲಿರುವ ಪ್ರತಿ ಅಂಶದ ಪಕ್ಕದಲ್ಲೂ ಅದು ಇರುವ ಅಥವಾ ಇಲ್ಲದಿರುವ ಬಗ್ಗೆ () ಚಿಹ್ನೆ ಅಥವಾ ʼ - ʼ ಅಥವಾ (x) ಈ ಚಿಹ್ನೆಯನ್ನು ಬಳಸಲಾಗುವುದು. ಅನಂತರ ಎಲ್ಲ ಅಂಶಗಳ ಬಗ್ಗೆ ಉಲ್ಲೇಖಿಸಿರುವ ಅಭಿಪ್ರಾಯವನ್ನು ಪರಿಗಣಿಸಿ ಅದರ ತನಿಖೆಗೆ ಸಂಬಂಧಿಸಿದಂತೆ ಸಮಗ್ರ ಮೌಲ್ಯವನ್ನು ನಿರ್ಧರಿಸಲು ಬಳಕೆ ಮಾಡುವ ಸಾಧನವೇ ತಾಳೆ ಪಟ್ಟಿ. ʼ

     ʼತಾಳೆ ಪಟ್ಟಿಯು ಮೂಲತಃ ಒಂದು ವಸ್ತು ಇದೆಯೇ ಅಥವಾ ಇಲ್ಲವೇ ಎಂಬುದನ್ನು ದಾಖಲು ಮಾಡಿಕೊಳ್ಳುವ ವಿಧಾನವಾಗಿದೆ. ʼ

ಶಿಕ್ಷಣದ ನಿಘಂಟು – “ತಾಳೆ ಪಟ್ಟಿಯು ಒಬ್ಬ ವ್ಯಕ್ತಿ ಒಂದು ಸಂಸ್ಥೆಗೆ ಸಂಬಂಧಿಸಿದಂತೆ ಕೆಲವೊಂದು ಹೇಳಿಕೆಗಳ ಪಟ್ಟಿಯನ್ನು ಒಳಗೊಂಡಿದ್ದು, ಆ ಪಟ್ಟಿಯಲ್ಲಿರುವ ಎಲ್ಲ ಅಂಶಗಳು ಇವೆಯೇ ಅಥವಾ ಇಲ್ಲವೇ ಎಂಬುದನ್ನು ಮೌಲ್ಯಮಾಪನ ಮಾಡುವ ಒಂದು ವಿಧನವಾಗಿದೆ.”

ತಾಳೆ ಪಟ್ಟಿಗಳ ರಚನೆ:   

* ಈ ಕೆಳಗೆ ಕಾಣಿಸಲಾದ ಹೇಳಿಕೆ/ಅಂಶಗಳು/ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಕೈಗೊಳ್ಳಲಾಗುವುದೇ? ಕೈಗೊಳ್ಳುವುದಾದರೆ ಹೇಳಿಕೆಯ ಎದುರು () ಗುರುತನ್ನು, ಕೈಗೊಳ್ಳದಿದ್ದರೆ ಹೇಳಿಕೆಯ ಎದುರು (x) ಗುರುತನ್ನು ಹಾಕುವುದರ ಮೂಲಕ ವ್ಯಕ್ತಿಯ ಅಭಿಪ್ರಾಯವನ್ನು ಸೂಚಿಸಲು ಕೇಳಲಾಗುವುದು.

ಉದಾ:   

ಕ್ರಮ ಸಂಖ್ಯೆ

ಕಾರ್ಯಕ್ರಮಗಳು

ಅಭಿಪ್ರಾಯ

01

ಆಟೋಟಗಳು

 

02

ರಾಷ್ಟ್ರೀಯ ಸೇವಾ ಯೋಜನೆ

 

03

ಶಾಲಾ ತೋಟ ನಿರ್ಮಾಣ

 

04

ಸಾಂಸ್ಕೃತಿಕ ಕಾರ್ಯಕ್ರಮ

 

05

ಶ್ರಮದಾನ

 

06

ಯೋಗ ಶಿಬಿರ

 

07

ಪ್ರತಿಭಾನ್ವೇಷಣೆ

 

08

ವಾರ್ಷಿಕ ಕ್ರೀಡಾಕೂಟ

 

 

ಅಭಿಪ್ರಾಯವನ್ನು ಸೂಚಿಸಲು ಹೌದು/ಇಲ್ಲ ಎಂವ ಅಂಶಗಳನ್ನು ಕೊಟ್ಟು, ಹೌದು ಎಂದಾದರೆ ʼ ಹೌದುʼ ಎಂಬುದರ ಮೇಲೆ ʼʼಎಂಬ ಗುರುತನ್ನು ಹಾಕಬೇಕು, ಒಪ್ಪುವುದಿಲ್ಲವಾದರೆ ʼಇಲ್ಲʼ ಎಂಬುದರ ಮೇಲೆ ʼʼ ಗುರುತನ್ನು ಹಾಕುವುದು.

ತಾಳೆ ಪಟ್ಟಿ ಉಪಯೋಗಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು:

  1. ಏನನ್ನು ವೀಕ್ಷಿಸ ಬಯಸುತ್ತೇವೆಯೋ ಅದನ್ನು ಮೊದಲೇ ಅರಿತು ಅದರಂತೆ ಸಂಶೋಧಕನು ತಾಳೆ ಪಟ್ಟಿಯನ್ನು ತಯಾರಿಸುವುದು.
  2. ಗಮನಿಸಿದ ಪ್ರತಿಯೊಂದು ಅಂಶಗಳನ್ನು ಚಾಚೂ ತಪ್ಪದೆ ದಾಖಲಿಸಿಕೊಳ್ಳುವುದು.
  3. ವ್ಯಕ್ತಿಗಳಿಗೆ ಪರೀಕ್ಷಿಸುವ ಮುನ್ನ ನಿಗದಿತ ದಿನ ಮತ್ತು ಸಮಯವನ್ನು ಮೊದಲೇ ನಿಗದಿ ಪಡಿಸಿಕೊಳ್ಳುವುದು.
  4. ಒಂದು ಸಲಕ್ಕೆ ಒಬ್ಬ ವ್ಯಕ್ತಿಯನ್ನು ಮಾತ್ರ ವೀಕ್ಷಿಸಲು ತೆಗೆದುಕೊಳ್ಳುವುದು.
  5. ಈ ಸಾಧನ ಬಳಕೆ ಮಾಡಲು ಸೂಕ್ತ ತರಬೇತಿಯ ಅವಶ್ಯಕತೆಯಿದ್ದು ಅದನ್ನು ಮೊದಲೇ ಪಡೆಯುವುದು.

ತಾಳೆ ಪಟ್ಟಿಯ ಅನುಕೂಲಗಳು:   

  1. ಇದರ ರಚನೆ ಮತ್ತು ಬಳಕೆ ಸರಳ ಮತ್ತು ಸುಲಭ.
  2. ಒಂದು ಅಥವಾ ಹಲವಾರು ಸಂಸ್ಥೆಯ ಗುಣಮಟ್ಟವನ್ನು ಅಳೆಯಬಹುದು.
  3. ವ್ಯಕ್ತಿಯ ವರ್ತನೆಯನ್ನು ತಿಳಿಯಲು ಸಹಾಯಕವಾಗುವುದು.
  4. ಮಕ್ಕಳಲ್ಲಿರುವ ದೌರ್ಬಲ್ಯಗಳನ್ನು ಇದರಿಂದ ಪತ್ತೆ ಹಚ್ಚಬಹುದು.
  5. ಮಾಹಿತಿ ಸಂಗ್ರಹಿಸಲು ಹೆಚ್ಚು ಆಯಾಸವೆನಿಸದು.
  6. ‍ಪಡೆದ ಮಾಹಿತಿ/ಅಭಿಪ್ರಾಯಗಳನ್ನು ಸುಲಭವಾಗಿ ದಾಖಲಿಸಿಕೊಳ್ಳಬಹುದು.
  7. ಸ್ವಮೌಲ್ಯಮಾಪನಕ್ಕೆ ದಾರಿ ಮಾಡಿಕೊಡುವುದು.

  ತಾಳೆ ಪಟ್ಟಿಯ ಅನಾನುಕೂಲಗಳು:   

1.     ವೈಯಕ್ತಿಕವಾಗಿ ಪ್ರತಿಯೊಬ್ಬರಿಂದ ಮಾಹಿತಿ ಸಂಗ್ರಹಿಸಲು ಅಧಿಕ ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತದೆ.

2.     ವ್ಯಕ್ತಿಯು ನೀಡಿದ ಅಭಿಪ್ರಾಯಗಳನ್ನು ವಸ್ತುನಿಷ್ಠವಾಗಿ ದಾಖಲು ಮಾಡಿಕೊಳ್ಳಲಾಗುವುದೆಂದು ಹೇಳಲಾಗದು.

3.     ಕೆಲ ಆಯ್ದ ಸಂದರ್ಭಗಳಲ್ಲಿ ಮಾತ್ರ ತಾಳೆ ಪಟ್ಟಿಗಳನ್ನು ಬಳಸಬಹುದಾಗಿದೆ.

4.     ಕೆಲವರಲ್ಲಿ ಈ ಪರೀಕ್ಷೆಯನ್ನು ಸಂಘಟಿಸಲು ಅನುಭವದ ಕೊರತೆ ಎದ್ದು ಕಾಣುವುದು.

5.     ವ್ಯಕ್ತಿಗಳು ಸಂದರ್ಶಕನು ಕೇಳಿದ ಎಲ್ಲ ಪ್ರಶ್ನೆಗಳಿಗೆ ನಿಖರ ಉತ್ತರ ನೀಡುವರೆಂದು ಹೇಳಲಾಗದು.

 

 

 

 

4. ದರ್ಜಾ ಮಾಪನ ಅಥವಾ ಗತಿ ಮಾಪನ

ಅರ್ಥ:

      ಸಾಮಾನ್ಯವಾಗಿ ವಸ್ತು, ವ್ಯಕ್ತಿ, ಘಟನೆಗಳ ಗುಣಲಕ್ಷಣಗಳನ್ನು ಅಳೆಯಲು ದರ್ಜಾಮಾಪನದ ಅಗತ್ಯವಿದೆ. ಉದಾ: ಒಂದು ಪುಸ್ತಕವನ್ನು ಮಾರುಕಟ್ಟೆಯಿಂದ ಕೊಂಡು ತಂದಲ್ಲಿ ಬೇರೆ ಬೇರೆಯವರು ಅದನ್ನು ಗಮನಿಸಿ ಅದರ ಗುಣಮಟ್ಟ ಚೆನ್ನಾಗಿದೆ / ಸಾಧಾರಣವಾಗಿದೆ / ಚೆನ್ನಾಗಿಲ್ಲ ಎಂಬ ಇತ್ಯಾದಿ ಅಭಿಪ್ರಾಯಗಳನ್ನು ಸೂಚಿಸುವರು. ಹೀಗೆ ಪದ, ಪದಪುಂಜ ಇಲ್ಲವೇ ಸಂಖ್ಯೆಗಳ ಮೂಲಕ ಒಂದು ವಸ್ತುವಿನ ಗುಣಮಟ್ಟವನ್ನು ಅಳೆಯಲು ಬಳಕೆ ಮಾಡುವ ಸಾಧನವೇ ದರ್ಜಾ ಮಾಪನ.

      ಒಂದು ತರಗತಿಯಲ್ಲಿ ಹಲವಾರು ವಿದ್ಯಾರ್ಥಿಗಳಿದ್ದು ಅವರೆಲ್ಲರೂ ಒಂದೇ ವೇಗದಲ್ಲಿ ಕಲಿಯಲಾರರು. ಅದರಲ್ಲಿ ಅತಿ ಬುದ್ದಿವಂತ ವಿದ್ಯಾರ್ಥಿ ಇದ್ದಲ್ಲಿ ಅವನ ಸಾಧನೆ ತೃಪ್ತಿಕರವಾಗಿದೆಯೆಂದೂ ತೀರಾ ದಡ್ಡನಿದ್ದಲ್ಲಿ ಆತನ ಸಾಧನೆ ತೃಪ್ತಿಕರವಾಗಿಲ್ಲವೆಂದೂ ಬಣ್ಣಿಸಲಾಗುವುದು. ಇಲ್ಲಿ ವಿದ್ಯಾರ್ಥಿಗಳು ತೋರುವ ಗುಣ, ನಡತೆ, ವರ್ತನೆ, ಜಾಣ್ಮೆ ಇತ್ಯಾದಿಗಳನ್ನು ಗಮನಿಸಿ ಇಂತಹ ತೀರ್ಮಾನಕ್ಕೆ ಬರಲಾಗುವುದು. ಹೀಗಗೆ ಅವಲೋಕನದ ಮೂಲಕ ಲಕ್ಷಣಗಳನ್ನು ಅರಿಯಲು ದರ್ಜಾಮಾಪನವು ನೆರವಾಗುವುದು.

ವ್ಯಾಖ್ಯಾನಗಳು:

  1. ಸಿ.ವಿ. ಗುಡ್‌ - “ದರ್ಜಾ ಮಾಪನವು ಒಂದು ವಿಧಾನವಾಗಿದ್ದು ಇದನ್ನು ಉತ್ಪನ್ನಗಳ ಮೌಲ್ಯಮಾಪನ/ ಗುಣಲಕ್ಷಣಗಳನ್ನು ಅಳೆಯಲು ಬಳಸಲಾಗುವುದು.”
  2. ರುಥ್‌ಸ್ಟ್ರಾಂಗ್‌ - “ನಿರ್ದೇಶಿಸಲ್ಪಟ್ಟ ಅವಲೋಕನವೇ ದರ್ಜಾಮಾಪನ.”
  3. ಡಾ. ಎನ್. ಎಸ್.ವೀರಪ್ಪನವರ ಶಿಕ್ಷಣಶಾಸ್ತ್ರದ ಪಾರಿಭಾಷಿಕ ನಿಘಂಟು – “ಬೋಧಕರ ಅಥವಾ ವಿದ್ಯಾರ್ಥಿಗಳ ದಕ್ಷತೆ, ಸಾಧನೆ, ಮನೋಭಾವ ಅಥವಾ ಇತರ ಗುಣಲಕ್ಷಣಗಳ ಮೌಲ್ಯ ನಿಷ್ಕರ್ಷಿಸಲು ಬಳಸುವ ಸಾಧನವೇ ದರ್ಜಾ ಮಾಪನ.”

ದರ್ಜಾಮಾಪನದ ವಿಧಗಳು:

  1. ಸಂಖ್ಯಾತ್ಮಕ ದರ್ಜಾ ಮಾಪನ: ಈ ಬಗೆಯ ಮಾಪನದ ರಚನೆ ಅತಿ ಸುಲಭ ಮತ್ತು ಸರಳವೂ ಆಗಿರುವುದು. ಸಂಶೋಧಕನು ಒಂದು ಸಮಸ್ಯೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಂಖ್ಯೆಯ ಹೇಳಿಕೆಗಳುಳ್ಳ ಪ್ರಶ್ನಾವಳಿ/ ತಪಶೀಲು ಪಟ್ಟಿಯನ್ನು ತಯಾರಿಸಿ ಪ್ರತಿ ಹೇಳಿಕೆ ಎದುರಿಗೆ ವ್ಯಕ್ತಿಯು ತನ್ನ ಅಭಿಪ್ರಾಯವನ್ನು ಸೂಚಿಸಲು 5   4   3  2  1 ಈ ರೀತಿಯಲ್ಲಿ ಸಂಖ್ಯೆಗಳನ್ನು ನೀಡುವನು. ಇವುಗಳನ್ನು ಸೂಚಿ ಪಟ್ಟಿ ಎಂದು ಕರೆಯುವರು. ವ್ಯಕ್ತಿಗಳು ಅಭಿಪ್ರಾಯ ಸೂಚಿಸಲು ಅನುಕೂಲವಾಗುವಂತೆ ಸಂಖ್ಯೆಗಳಿಗೆ ಅನುಗುಣವಾಗಿ ಶಾಬ್ದಿಕ ರೂಪದಲ್ಲಿ ವಿವರಣೆಯನ್ನು ಮಾಪನದ ಮೇಲ್ಬಾಗದಲ್ಲಿ ನೀಡಲಾಗುವುದು. ಅದರಂತೆ ವ್ಯಕ್ತಿ/ ಅಭ್ಯರ್ಥಿಯು ಪ್ರತಿ ಹೇಳಿಕೆಯನ್ನು ಓದಿ ತನಗೆ ಆ ಸಂಖ್ಯೆಗಳಲ್ಲಿ ಯಾವುದನ್ನು ಸೂಚಿಸಬೇಕೆಂದೆನಿಸುವುದೋ ಅದರ ಸುತ್ತ ವೃತ್ತಾಕಾರವನ್ನು ಹಾಕುವುದರ ಮೂಲಕ ತನ್ನ ಅಭಿಪ್ರಾಯವನ್ನು ಸೂಚಿಸುವನು, ಸಂಖ್ಯೆ ಮತ್ತುಅದಕ್ಕೆ ತಕ್ಕಂತಿರುವ ಶಾಬ್ಧಿಕ ಪದ ಪ್ರಂಜಗಳನ್ನು ಈ ಕೆಳಗೆ ನೀಡಲಾಗಿದೆ.

ಸಂಖ್ಯಾತ್ಮಕ                                              ವಿವರಣಾತ್ಮಕ

       5          ------à     ಸಂಪೂರ್ಣವಾಗಿ ಒಪ್ಪುತೇನೆ

       4       --------à     ಒಪ್ಪುತ್ತೇನೆ

       3       -------à      ಏನನ್ನೂ ಹೇಳಲಾಗದು

       2      -------->     ಒಪ್ಪುವುದಿಲ್ಲ

       1    ----------à   ಸಂಪೂರ್ಣವಾಗಿ ಒಪ್ಪುವುದಿಲ್ಲ

 ಈ ಬಗೆಯ ದರ್ಜೆ ನೀಡುವುದನ್ನು ಐದು ಅಂಶಗಳ ಮಾಪನಿ ಎಂದು ಕರೆಯುವರು. ಮೂರು ಅಂಶಗಳ ಮಾಪನದಿಂದ ಏಳು ಅಂಶಗಳ ಮಾಪನದವರೆಗೂ ದರ್ಜಾ ಮಾಪನವನ್ನು ತಯಾರಿಸಲಾಗುವುದು.

ಸಂಖ್ಯಾತ್ಮಕ ರೂಪ

 

ಹೇಳಿಕೆ

ಅಭಿಪ್ರಾಯ

  1. ಭಾರತದಂತಹ ರಾಷ್ಟ್ರಕ್ಕೆ ಅದ್ಯಕ್ಷೀಯ ಮಾದರಿ ಸರ್ಕಾರ ಉತ್ತಮವೆಂದು ಭಾವಿಸುವಿರಾ?
  2. ಪ್ರತಿಯೊಂದು ಮಗುವಿಗೂ ಶಿಕ್ಷಣದ ಸೌಲಭ್ಯ ಸರಿಯಾಗಿ ದೊರಕುತ್ತಿಲ್ಲವೆಂದು ನಿಮಗನಿಸಿದೆಯೇ?

     5   4   3   2   1

 

 

 

     5   4   3   2   1

2.  ರೇಖಾತ್ಮಕ ದರ್ಜಾ ಮಾಪನಿ: ಸಂಶೋಧನಾ ಕ್ಷೇತ್ರದಲ್ಲಿ ಈ ಮಾಪನಿಯು ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದರ ರಚನೆಯಲ್ಲಿ ಮೊದಲು ಸಮಾನಾಂತರವಾಗಿ ಒಂದು ಸರಳ ರೇಖೆಯನ್ನು ಎಳೆದು ಈ ರೇಖೆಯ ಮೇಲೆ ನಿರ್ದಿಷ್ಠ ಅಂತರದಲ್ಲಿ ಬಿಂದುಗಳನ್ನು ಗುರುತಿಸಲಾಗುವುದು. ಐದು ಅಂಶಗಳ ಮಾಪನಿಯಾದರೆ ಐದು ಬಿಂದುಗಳನ್ನು ಮಾತ್ರ ರಚಿಸಿಕೊಂಡು ಪ್ರತಿಯೊಂದರಡಿ ಶಾಬ್ದಿಕ ರೂಪದಲ್ಲಿ ವಿವರಣೆಯನ್ನು ನೀಡಲಾಗುವುದು. ಶಾಬ್ದಿಕ ರೂಪವು ಕೊಟ್ಟಿರುವ ಹೇಳಿಕೆಗೆ ಸಂಬಂಧಿಸಿದಂತೆ ವ್ಯಕ್ತಿಯ ಅಭಿಪ್ರಾಯ ತಿಳಿಸಲು ನೆರವಾಗುವುದು. ಆತನು ತನ್ನ ಅಭಿಪ್ರಾಯವನ್ನು ಕೊಟ್ಟಿರುವ ಐದು ಅಂಶಗಳಲ್ಲಿ ಯಾವುದಾದರೂಂದಕ್ಕೆ ʼʼ ಗುರುತು ಹಾಕುವುದರ ಮೂಲಕ ತಿಳಿಸುವನು.

ಉದಾ: ವೀಣಾ ಶಿಕ್ಷಕಿಯ ತರಗತಿ ಬೋಧನೆ ಹೇಗಿರುವುದು? 

                                                                                                                                                                                                                                    

 


‍   ತುಂಬಾ                         ವೇಗವಾಗಿರುವುದು         ಏನನ್ನೂ ಹೇಳಲು        ವೇಗವಾಗಿರುವುದಿಲ್ಲ                ತುಂಬಾ

ವೇಗವಾಗಿರುವುದು                                                      ಆಗದು                                                                ವೇಗವಾಗಿರುವುದಿಲ್ಲ      

       ಈ ಮಾಪನಿಯ ಅನುಕೂಲವೆಂದರೆ ಸುಲಭವಾಗಿ ಇದನ್ನು ಸಂಘಟಿಸಬಹುದು. ನೀಡುವ ಅಭಿಪ್ರಾಯವು ಸಂಖ್ಯಾತ್ಮಕವಾಗಿರದೆ (54321) ವಿವರಣಾತ್ಮಕವಾಗಿರುವುದು. ಇದರ ಅನಾನುಕೂಲವೆಂದರೆ ರಚನೆಗೆ ಮತ್ತು ಅಂಕ ನಿರ್ಧರಣೆಗೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದು.                                          

3.  ಶೇಕಡಾವಾರು ದರ್ಜಾಮಾಪಪಿನಿ:   ಸಂಶೋಧಕರು ತಮಗೆ ಬೇಕೆನಿಸಿದಾಗ ವ್ಯಕ್ತಿಗಳಿಂದ ಶೀಘ್ರವಾಗಿ ಮಾಹಿತಿಯನ್ನು ಕಲೆ ಹಾಕಲು ಈ ದರ್ಜಾ ಮಾಪಿನಿಯನ್ನು ಬಳಸುವನು. ಇದರಲ್ಲಿ ವ್ಯಕ್ತಿಯು ತನಗೆ ಕೊಟ್ಟಿರುವ ಶೇಖಡಾವಾರು ಪ್ರಮಾಣದ ಗುಂಪಿನಲ್ಲಿ ನಿಖರವಾದುದನ್ನು ಗುರುತಿಸಬೇಕು.

ಉದಾ: ಪ್ರಸ್ತುತ ಶಿಕ್ಷಣ ಪದ್ದತಿಯಿಂದ ಯಾವ ಪ್ರಮಾಣದಲ್ಲಿ ಗುಣಾತ್ಮಕ ಶಿಕ್ಷಣವನ್ನು ಪಡೆಯುತ್ತಿದ್ದೇವೆಂದು ನಿಮಗನಿಸುವುದು?

  1. ಶೇಕಡಾ 25 ರಷ್ಟು       2. ಶೇಕಡಾ 50 ರಷ್ಟು   3. ಶೇಕಡಾ 75 ರಷ್ಟು   4. ಶೇಕಡಾ 100 ರಷ್ಟು  

ವ್ಯಕ್ತಿಯು ಹೇಳಿಕೆಯನ್ನು ಓದಿ ತನ್ನ ಆಲೋಚನೆಯ ಆಧಾರದ ಹಿನ್ನೆಲೆಯಲ್ಲಿ ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸೂಕ್ತವಾದ ಆಯ್ಕೆಯ ಎದುರು   ʼʼ ಗುರುತು ಹಾಕುವುದರ ಮೂಲಕ ತನ್ನ ಅಭಿಪ್ರಾಯವನ್ನು ಸೂಚಿಸುವನು. ಈ ಬಗೆಯ ಮಾಪನಿಯನ್ನು ವಿದ್ಯಾರ್ಥಿಗಳ ಸಾಧನೆ ಮತ್ತು ಕೆಲಸದ ಪ್ರಗತಿಯನ್ನು ತಿಳಿಸುವಾಗ ಬಳಕೆ ಮಾಡಿಕೊಳ್ಳಲಾಗುವುದು.

4.  ವರ್ಣನಾತ್ಮಕ ದರ್ಜಾಮಾಪನಿ: ಪಟ್ಟಿಯಲ್ಲಿ ಸೂಚಿಸಿರುವ ಹಲವಾರು ನಿರ್ದಿಷ್ಟ ಗುಣಗಳಿಗೆ ಸಂಬಂಧಿಸಿದ ವಿವರಣಾತ್ಮಕ ನಿರೂಪಣೆಗಳಲ್ಲಿ ಯಾವುದಕ್ಕೆ ಸರಿ ಹೋಗುವುದೆಂದು ತೀರ್ಮಾನಿಸಿ ಗುರುತಿಸಿಕೊಂಡು, ಒಂದು ಕಟ್ಟಡ, ವ್ಯಕ್ತಿ ಮುಂತಾದವು ಯಾವ ಪ್ರಮಾಣದಲ್ಲಿ ಆ ನಿರ್ದಿಷ್ಟ ಅಂಶಗಳನ್ನು ಪಡೆದಿರುವುದೆಂಬುದನ್ನು ವೈಯಕ್ತಿಕ ರೀತಿಯಲ್ಲಿ ಮೌಲ್ಯ ನಿಷ್ಕರ್ಷಿಸಲು ಬಳಸುವ ಒಂದು ಸಾಧನ ಇದಾಗಿದೆ.

    ಈ ಬಗೆಯ ಮಾಪನಿಯಲ್ಲಿ ಒಂದು ಸಮಾನಾಂತರ ರೇಖೆಯನ್ನು ಎಳೆದು ಅದರಡಿ ವರ್ಣನಾತ್ಮಕ ನಿರೂಪಣೆ ನೀಡಲಾಗಿದ್ದು, ಕೊಟ್ಟಿರುವ ಹೇಳಿಕೆಗೆ ಅನುಗುಣವಾಗಿ ಯಾವ ನಿರೂಪಣೆ/ಅಂಶ/ಅಭಿಪ್ರಾಯ ಇಷ್ಟವಾಗುವುದೋ ಅದನ್ನು ʼʼ ಗುರುತು ಹಾಕುವುದರ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬೇಕು. ಅಂಶಗಳ ಪಕ್ಕದಲ್ಲಿ ಅದೇ ಅಭಿಪ್ರಾಯ ವ್ಯಕ್ತಪಡಿಸಬೇಕು. ಅಂಶಗಳ ಪಕ್ಕದಲ್ಲಿ ಅದೇ ಅಭಿಪ್ರಾಯ ನೀಡಲು ಕಾರಣವೇನೆಂಬುದನ್ನು ತಿಳಿಸಲು ನಿಗದಿಪಡಿಸಿದ ಜಾಗವನ್ನು ಬಿಡಲಾಗುವುದು. ಆ ಜಾಗದಲ್ಲಿ ವ್ಯಕ್ತಿಯು ತನ್ನ ಸ್ವಂತ ಅಭಿಪ್ರಾಯವನ್ನು ತಿಳಿಸಬಹುದು.

ಉದಾ: ಯಾವ ಮಟ್ಟಿಗೆ ನೀನು ಸಿನಿಮಾ ನೋಡುವೆ?

 

 


           

ಯಾವಾಗಲಾದರೂ ಒಮ್ಮೆ                       ನೋಡುವುದೇ ಇಲ್ಲ                    ಅಧಿಕವಾಗಿ ನೋಡುವೆ

ದರ್ಜಾಮಾಪನಿಯ ಅನುಕೂಲಗಳು:

  1. ವಿದ್ಯಾರ್ಥಿಗಳ ಅವಶ್ಯಕತೆಗಳೇನು ಎಂಬುದನ್ನು ಪತ್ತೆಹಚ್ಚುವುದು.
  2. ಏಕಕಾಲದಲ್ಲಿ ಬಹುಸಂಖ್ಯಾತ ವ್ಯಕ್ತಿಗಳು ತಮ್ಮ ನಿರ್ಣಯವನ್ನು ಸೂಚಿಸಲು ನೆರವಾಗುವುದು.
  3. ವಿದ್ಯಾರ್ಥಿಯು ತನ್ನನ್ನು ತಾನು ಮೌಲ್ಯಮಾಪನ ಮಾಡಿಕೊಳ್ಳಲು ನೆರವಾಗುವುದು.
  4. ಅಭಿಪ್ರಾಯವನ್ನು ತೀರಾ ಸರಳವಾಗಿ ನೀಡಲು ನೆರವಾಗುವುದು.
  5. ಕಡಿಮೆ ಸಮಯವನ್ನು ಇದು ನಿರೀಕ್ಷಿಸುವುದು.
  6. ಸಾಮಾಜಿಕ ಸಮೀಕ್ಷೆಯನ್ನು ಕೈಗೊಳ್ಳುವಾಗ, ಶಾಲಾ ಪ್ರಗತಿಯನ್ನು ಗಮನಿಸುವಾಗ, ವ್ಯಕ್ತಿತ್ವವನ್ನು ಅಳೆಯುವಾಗ, ಶಿಕ್ಷಕರ ಬೋಧನೆಯನ್ನು ಮೌಲ್ಯಮಾಪನ ಮಾಡುವಾಗ ದರ್ಜಾ ಮಾಪನಿಗಳನ್ನು ಬಳಸಲಾಗುವುದು.
  7. ಶಿಕ್ಷಣದ ಉದ್ದೇಶಗಳನ್ನು ನಿಖರವಾಗಿ ಅಳೆಯಲು ನೆರವಾಗುವುದು.
  8. ವೈಯಕ್ತಿಕ ಗುಣಮಟ್ಟವನ್ನುತಿಳಿಯಲು ಮತ್ತು ಜೋಡಿ ಹೊಂದಾಣಿಕೆ ಮಾಡುವಾಗ ಈ ಮಾಪನಿಯನ್ನು ಬಳಸಲಾಗುವುದು.
  9. ಉದ್ಯೋಗದಾತರಿಗೆ ಶಿಫಾರಸ್ಸುಗಳನ್ನು ನೀಡಲು ಅನುಕೂಲವಾಗುವುದು.

ದರ್ಜಾಮಾಪನಿಯ ಅನಾನುಕೂಲಗಳು:

1.     ದರ್ಜೆಯನ್ನು ನಿಗದಿಪಡಿಸುವ ಸಂದರ್ಭದಲ್ಲಿ ಉತ್ತರಿಸುವವನಿಗೆ ಯಾರು ನಿಕಟವಾಗಿರುವರೋ ಅಂತಹವರಿಗೆ ಉತ್ತಮ ದರ್ಜೆಯನ್ನು ನೀಡುವುದರಿಂದ ಉತ್ತಮ ಸಂಶೋಧನಾ ಫಲಿತಾಂಶವನ್ನು ಪಡೆಯಲು ಆಗದು.

2.     ಆತನು ಯಾವುದೇ ವ್ಯಕ್ತಿಗೆ ದರ್ಜೆ ನೀಡುವಾಗ ತೀರ ಕನಿಷ್ಠ ದರ್ಜೆಯನ್ನು ನೀಡಲು ಬಯಸುವುದಿಲ್ಲ

3.     ಕೆಲವೊಮ್ಮೆ ಗರಿಷ್ಠ ಅಥವಾ ಕನಿಷ್ಠ ಮಟ್ಟದ ದರ್ಜೆಯನ್ನು ನೀಡದೆ ಸರಾಸರಿ ದರ್ಜೆಯನ್ನು ನೀಡುವನು. ಇದೂ ಸಹ ಫಲಿತಾಂಶದ ಮೇಲೆ ಪರಿಣಾಮ ಬೀರುವುದು.

4.     ಕೆಲವೊಮ್ಮೆ ಲಕ್ಷಣಗಳಿಗೆ ದರ್ಜೆಯನ್ನು ನೀಡಲು ಕಷ್ಟವಾಗುವುದು.

5.     ದರ್ಜೆ ನೀಡುವಾಗ ವ್ಯಕ್ತಿನಿಷ್ಠತೆ ಎದ್ದು ಕಾಣುವುದು.

6.     ವಿದ್ಯಾರ್ಥಿಗಳು ದರ್ಜೆಗಳನ್ನು ಗುರುತಿಸಲು ಸಾಕಷ್ಟು ಅವಕಾಶದ ಕೊರತೆ ಕಂಡುಬರುವುದು.

5. ಸಂದರ್ಶನ

      ಈ ವಿಧಾನವನ್ನು ಸರ್ವೇ ಸಾಮಾನ್ಯವಾಗಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಹಲವಾರು ವಿಭಾಗಗಳಿಗೆ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಅಂತೆಯೇ ಸಂಶೋಧನಾ ಅಧ್ಯಯನವನ್ನು ಕೈಗೊಳ್ಳುವವರು ಮಾಹಿತಿ ಸಂಗ್ರಹಣೆಯ ದೃಷ್ಠಿಯಿಂದ ಸಂದರ್ಶನವನ್ನು ಒಂದು ಪ್ರಮುಖ ಸಾಧನವನ್ನಾಗಿ ಬಳಸಿಕೊಳ್ಳುವರು.

      ಸಂದರ್ಶನ ಇತರೆ ಎಲ್ಲ ಸಾಧನಗಳಿಗಿಂತ ಅತ್ಯಂತ ಜನಪ್ರಿಯ ಸಾಧನವೆಂದು ಹೇಳಿದರೆ ಅತಿಶಯೋಕ್ತಿಯೆನಿಸದು. ಸಂದರ್ಶನಕ್ಕೆ ಒಳಗಾಗುವವರ ಅಂತರಂಗದ ಭಾವನೆ, ತುಮುಲ, ಆಶಯ ಮತ್ತು ಅಭಿಪ್ರಾಯಗಳನ್ನು ತಿಳಿಯಲು ಇದು ಒಂದು ಪ್ರಮುಖ ಅಸ್ತ್ರವಾಗಿ ಪರಿಣಮಿಸುವುದು. ಸಂಶೋಧನಾ ಕ್ಷೇತ್ರದಲ್ಲಿ ಬೇರೆಲ್ಲಾ ಸಾಧನಗಳಿಗಿಂತ ಸಂದರ್ಶನದ ಮೂಲಕ ಪಡೆಯುವ ಮಾಹಿತಿಯು ಹೆಚ್ಚು ವಸ್ತುನಿಷ್ಠ ಮತ್ತು ಉತ್ಕೃಷ್ಠವಾದುದೆಂದು ಹೇಳಬಹುದು.

ಅರ್ಥ:

      ʼಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಮುಖಾಮುಖಿ ಸಂಭಾಷಣೆಯೇ ಸಂದರ್ಶನ. ʼ

      ʼಮಾರ್ಗದರ್ಶನ ಮಾಡುವಾಗ ನಿರ್ದೇಶಕರು ಸಲಹಾರ್ಥಿಯೊಡನೆ ಮುಖತಃ ಆಲೋಚನೆ ನಡೆಸಲು ಕೈಗೊಳ್ಳುವ ಕಾರ್ಯವೇ ಸಂದರ್ಶನ. ʼ

ವ್ಯಾಖ್ಯಾನಗಳು:

  1. ವೆಬ್‌ - “ಚತುರ ಪ್ರಶ್ನೆಗಳಿಂದ ಮನಸ್ಸಿನಲ್ಲಿ ಸುಪ್ತವಾಗಿ ಅಡಗಿರುವ ಮಾಹಿತಿಯನ್ನು ಹೊರ ಪ್ರಪಂಚಕ್ಕೆ ತರುವ ಪ್ರಯತ್ನವನ್ನು ಮಾಡುವ ಸಾಧನವೇ ಸಂದರ್ಶನ.”
  2. ವಿನಿಯನ್‌    ಪಾಮರ್‌ - “ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಪರಸ್ಪರ ಮಾತುಕತೆಯೇ ಸಂದರ್ಶನ.”
  3. ಥಿಯೋಡರ್‌ ಎಲ್. ‌ ಟಾರ್ಗೆರ್ಸನ್‌ - “ಸಂದರ್ಶನ ವಿಧಾನದ ಅಧ್ಯಯನವು ವೀಕ್ಷಣಾ ತಂತ್ರದ ಕೆಲವೊಂದು ಮುಖಗಳನ್ನು ವಿಸ್ತರಿಸುವುದು. “
  4. ಹ್ಯಾಟ್‌ ಪಿ.ಕೆ – “ಮೂಲಭೂತವಾಗಿ ಸಂದರ್ಶನವು ಒಂದು ಸಾಮಾಜಿಕ ಅನ್ಯೋನ್ಯ ಕ್ರಿಯೆಯ ಪ್ರಕ್ರಿಯೆಯಾಗಿದೆ. “

ಸಂದರ್ಶನದ ಸ್ವಭಾವ;

      ಸಂದರ್ಶನವೆಂಬುದು ಒಂದು ಕಲೆ. ಸಾಮಾನ್ಯವಾಗಿ ಸಂದರ್ಶನ ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಪರಸ್ಪರ ಸಂಭಾಷಣೆ ಅಥವಾ ಮಾತುಗಾರಿಕೆಯಾಗಿದೆ. ಇಲ್ಲಿ ಒಬ್ಬರು ಪ್ರಶ್ನೆ ಕೇಳಿದರೆ, ಅದಕ್ಕೆ ಮತ್ತೊಬ್ಬರು ಉತ್ತರ ನೀಡುವರು. ಪ್ರಶ್ನೆ ಕೇಳುವವನಿಗೆ ಸಂದರ್ಶನಕಾರನೆಂದೂ, ಉತ್ತರಿಸುವವನಿಗೆ ಸಂದರ್ಶಿತನೆಂದೂ ಕರೆಯುವರು. ಇಬ್ಬರ ನಡುವೆ ಸೌಹಾರ್ದಯುತವಾಗಿ ಔಪಚಾರಿಕ ಹಿನ್ನೆಲೆಯಲ್ಲಿ ಸಂದರ್ಶನ ನಡೆಯುವುದು. ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಈ ಸಾಧನವು ಅತ್ಯಂತ ಪರಿಣಾಮಕಾರಿಯೆನಿಸುವುದು. ಸಂದರ್ಶನಕಾರನು ಪ್ರಶ್ನಗಳನ್ನು ಕೇಳುವ ಅಥವಾ ವಿಚಾರ ವಿನಿಮಯವನ್ನು ನಡೆಸುವ ಮೊದಲು ಸಂದರ್ಶಿತನನ್ನು ತನ್ನೆಡೆಗೆ ಆಕರ್ಷಿಸುವ ದೃಷ್ಟಿಯಿಂದ ತನ್ನ ಉತ್ತಮ ವ್ಯಕ್ತಿತ್ವ ಮತ್ತು ನಡೆ ನುಡಿಗಳನ್ನು ಆತನ ಎದುರಿಗೆ ತಾನು ಅವರಲೊಬ್ಬನೆಂಬ ಭಾವನೆಯನ್ನು ಮೂಡಿಸಬೇಕು.

ಸಂದರ್ಶನದ ವಿಧಗಳು:

  1. ಸಂರಚಿತ ಸಂದರ್ಶನ: ಸಂರಚಿತ ಸಂದರ್ಶನವನ್ನು ಮತೊಂದು ಹೆಸರಿನಲ್ಲಿ ಔಪಚಾರಿಕ ಸಂದರ್ಶನವೆಂದು ಕರೆಯುವರು. ಇತರೆ ಎಲ್ಲ ಸಂದರ್ಶನಗಳಿಗಿಂತ ಈ ಸಂದರ್ಶನವು ಇಂದು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಇದು ಒಂದು ಕ್ರಮಬದ್ದ ಮತ್ತು ಪೂರ್ವಯೋಜಿತವಾಗಿ ನಡೆಯುವ ಸಂದರ್ಶನವಾಗಿದೆ. ಸಂದರ್ಶಕನು ಸಂದರ್ಶನವನ್ನು ಪ್ರಾರಂಭಿಸುವ ಮುನ್ನ ಸಂದರ್ಶಿತರಿಗೆ ಕೇಳಬೇಕಾದ ಎಲ್ಲ ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಳ್ಳುವನು. ಸಂದರ್ಶಿತರೆಲ್ಲರಿಗೂ ಮುಂಚಿತವಾಗಿ ಸ್ಥಳ ಮತ್ತು ಸಮಯವನ್ನು ತಿಳಿಸಿ, ನಿಗದಿಪಡಿಸಿದ ಸಮಯಾನುಸಾರವಾಗಿ ಸಂದರ್ಶನವನ್ನು ಏರ್ಪಡಿಸುವನು. ಈ ಬಗೆಯ ಸಂದರ್ಶನವು ತೀರಾ ಔಪಚಾರಿಕವಾಗಿ ನಡೆಯುವುದು. ಸಂದರ್ಶನಕಾರನು ಈಗಾಗಲೇ ರಚಿಸಿಕೊಂಡ ಪ್ರಶ್ನೆಗಳನ್ನು ಸಂದರ್ಶಿತರಿಗೆ ಕೇಳುತ್ತಾ ಅವರು ನೀಡುವ ಉತ್ತರಗಳನ್ನು ದಾಖಲಿಸಿಕೊಳ್ಳುವನು. ಸಾಮಾನ್ಯವಾಗಿ ನೀಡುವ ಉತ್ತರಗಳು ನಿರ್ಬಂಧಿತ ರೂಪದಲ್ಲಿರುವುವು. ಕೇಳಬೇಕೆಂದುಕೊಂಡ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಪಡೆದ ನಂತರ ಸಂದರ್ಶನ ಮುಕ್ತಾಯಗೊಳ್ಳುತ್ತದೆ. ಇದರ ಪ್ರಮುಖ ಅನಾನುಕೂಲವೆಂದರೆ ಇದು ಸಮಯ ಮತ್ತು ಹಣದ ದೃಷ್ಠಿಯಿಂದ ತುಂಬಾ ವೆಚ್ಚದಾಯಕವಾದುದು ಹಾಗೂ ಇತರೆ ವಿಧಾನಗಳಿಗೆ ಹೋಲಿಸಿದರೆ ಈ ವಿಧಾನದ ಸಿಂಧುತ್ವ ಕನಿಷ್ಠವಾಗಿರುವುದು.
  2. ಸಂರಚಿತವಲ್ಲದ ಸಂದರ್ಶನ: ಸಂರಚಿತ ಸಂದರ್ಶನದಂತೆ ಸಂರಚಿತವಲ್ಲದ ಸಂದರ್ಶನವು ತೀರಾ ಬಿಗಿಯಾಗಿರುವುದಿಲ್ಲ. ಸಮಯಕ್ಕೆ ತಕ್ಕಂತೆ ಕೆಲವು ಬದಲವಣೆಗಳನ್ನು ಮಾಡಿಕೊಳ್ಳಲು ಇದರಲ್ಲಿ ಅವಕಾಶವಿರುವುದು. ಈ ವಿಧವಾದ ಸಂದರ್ಶನದಲ್ಲಿ ಪ್ರಶ್ನೆಗಳನ್ನು ಮೊದಲೇ ರಚಿಸಿಕೊಂಡರೂ ಸಮಯಕ್ಕೆ ತಕ್ಕಂತೆ ಅವುಗಳಲ್ಲಿ ಕೆಲ ಮಾರ್ಪಾಟುಗಳನ್ನು ಮಾಡಿಕೊಳ್ಳಲು ಅವಕಾಶವಿರುವುದು. ಅಂತಹ ಸನಿವೇಶದಲ್ಲಿ ಸಂದರ್ಶನಕಾರನು ಸಂದರ್ಶಿತರ ಸ್ವಭಾವ, ವ್ಯಕ್ತಿತ್ವ, ಜಾಣ್ಮೆ ಮುಂತಾದವುಗಳನ್ನು ಗಮನಿಸಿ ಸ್ಥಳದಲ್ಲಿಯೇ ಪ್ರಶ್ನೆಗಳ ಸ್ವಭಾವವನ್ನು ಬದಲಾಯಿಸಿ ಕೇಳಿ ಉತ್ತರವನ್ನು ಪಡೆದುಕೊಳ್ಳಬೇಕು. ಇಲ್ಲವೇ ಸ್ವಲ್ಪ ಅಂತರವನ್ನು ಕೊಟ್ಟು ಮತ್ತೆ ಅವರನ್ನು ಸಂದರ್ಶನಕಾರನು ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು. ಇದರ ಪ್ರಮುಖ ಅನಾನುಕೂಲವೆಂದರೆ –

1.     ಸಂದರ್ಶಕನ ವೈಯಕ್ತಿಕ ಪ್ರಭಾವವು ಜಾಸ್ತಿಯಾಗಿರುವುದು.

2.     ಇಂತಹ ಸಂದರ್ಶನವನ್ನು ಸಂಘಟಿಸಲು ಸಂದರ್ಶಕರಿಗೆ ಅಪಾರ ಜ್ಞಾನ, ಚತುರತೆ, ಕೌಶಲ್ಯವಿರಬೇಕು. ಆದರೆ ಇದು ಎಲ್ಲರಲ್ಲೂ ಇರುತ್ತದೆಂದು ಹೇಳಲಾಗದು.

3.     ಸಂದರ್ಶಿತರು ಉತ್ತರಿಸಿದ ಅಂಶಗಳನ್ನು ಕ್ರಮಬದ್ದವಾಗಿ ವಿಶ್ಲೇಷಿಸಲು ಆಗದು.

ಸಂದರ್ಶನವನ್ನು ಸಂಘಟಿಸುವಾಗ ಗಮನದಲ್ಲಿಡಬೇಕಾದ ಅಂಶಗಳು

1.     ಸಂದರ್ಶನಕ್ಕೆ ಅಗತ್ಯವಾದ ಉತ್ತಮ ಪರಿಸರವನ್ನು ನಿರ್ಮಾಣ ಮಾಡುವುದು.

2.     ಸಂದರ್ಶನಕ್ಕೆ ಬೇಕಾದ ಸ್ಥಳ ಮತ್ತು ದಿನವನ್ನು ಮೊದಲೇ ನಿಗದಿಪಡಿಸಿಕೊಳ್ಳುವುದು.

3.     ಸಂದರ್ಶನಕಾರನು ತನಗೆ ಅಗತ್ಯವಾಗಿ ಬೇಕಾದ ಪ್ರತಿದರ್ಶವನ್ನು ನಿರ್ದಿಷ್ಟಪಡಿಸಿಕೊಳ್ಳುವುದು.

4.     ಸಂಗ್ರಹಿಸುವ ಮಾಹಿತಿಗೆ ಪೂರಕವಾಗಿ ಪ್ರಶ್ನೆಗಳನ್ನು ಮೊದಲೇ ಸಿದ್ದಪಡಿಸಿಟ್ಟುಕೊಳ್ಳಬೇಕು.

5.     ಸಂದರ್ಶನಕಾರನು ಸಂದರ್ಶನ ನಡೆಸುವ ಬಗೆಯನ್ನು ಕೂಲಂಕುಷವಾಗಿ ಬಲ್ಲವನಾಗಿರಬೇಕು.

6.     ಆಯ್ಕೆ ಮಾಡಿಕೊಂಡ ಪ್ರತಿದರ್ಶ ಸೂಕ್ತ ಸಮಯದಲ್ಲಿ ಲಭ್ಯವಿಲ್ಲದಿದ್ದಲ್ಲಿ ಅದಕ್ಕೆ ಪೂರಕವಾಗಿ ವ್ಯವಸ್ಥೆಯನ್ನು ಮಾಡಿಕೊಳ್ಳುವುದು.

7.     ಸಂದರ್ಶನ ಮಾಡುವಾಗ ಸಂದರ್ಶಿತರು ಅನಾವಶ್ಯಕ ಪ್ರಶ್ನೆಗಳನ್ನು ಕೇಳಿದಲ್ಲಿ ಎದೆಗುಂದದೆ ಅದಕ್ಕೆ ತಕ್ಕುದಾದ ರೀತಿಯಲ್ಲಿ ಉತ್ತರಿಸುವುದು.

8.     ಸಂಗ್ರಹಿಸಿದ ಮಾಹಿತಿಯನ್ನು ಸಂಶೋಧನೆ ಹೊರತುಪಡಿಸಿ ಮತ್ತಾವುದೇ ಕಾರ್ಯಕ್ಕೆ ಬಳಸುವುದಿಲ್ಲವೆಂದು ಭರವಸೆಯನ್ನು ಸಂದರ್ಶಿತರಿಗೆ ನೀಡಬೇಕು.

9.     ಒಮ್ಮೆ ಒಂದೇ ಪ್ರಶ್ನೆಯನ್ನು ಕೇಳಿ ಉತ್ತರ ಪಡೆಯುವುದು.

10.   ಸಂದರ್ಶಿತನು ನೀಡುವ ಉತ್ತರವನ್ನು ಗಮನವಿಟ್ಟು ಕೇಳುವುದು.

11.   ಸಂದರ್ಶಿತನು ಉತ್ತರ ನೀಡಲು ಸಾಕಷ್ಟು ಸಮಯವನ್ನು ನೀಡಬೇಕು.

12.   ಕೇಳಿದ ಪ್ರಶ್ನೆಗೆ ಉತ್ತರ ಬಾರದಿದ್ದಲ್ಲಿ ಸುಳಿವನ್ನು ನೀಡಿ ಉತ್ತರ ಪಡೆಯುವುದು.

13.   ಸಂದರ್ಶಿತರು ಉತ್ತರಿಸುವಾಗ ಮುದ್ರಿಸಲೆಂದು ಟೇಪ್‌ ರೆಕಾರ್ಡರ್ ಅಥವಾ ವೀಡಿಯೊ ಬಳಸುವುದು. ಇದರಿಂದ ವಿಷಯ ಮರೆಮಾಚುವುದು ತಪ್ಪುವುದು.

14.   ಅವಶ್ಯಬಿದ್ದಲ್ಲಿ ನೋಟ್‌ ಪುಸ್ತಕದಲ್ಲಿ ವರದಿಯನ್ನು ದಾಖಲಿಕೊಳ್ಳುವುದು.

ಸಂದರ್ಶನದ ಅನುಕೂಲಗಳು:

1.     ಪ್ರಶ್ನೆ ಕೇಳುವಾಗ ಸಾಕಷ್ಟು ಬದಲಾವಣೆಗೆ ಅವಕಾಶವಿರುವುದು. ಆದ್ದರಿಂದ ಇದನ್ನು ಸಮ್ಯತೆಯಿಂದ ಕೂಡಿದ ವಿಧಾನವೆಂದು ಕರೆಯುವರು.

2.     ಮಾಹಿತಿಯನ್ನು ನೇರವಾಗಿ ಮತ್ತು ತಕ್ಷಣದಲ್ಲಿಯೇ ಪಡೆಯಬಹುದು.

3.     ಪ್ರಶ್ನೆಗಳನ್ನು ನೇರವಾಗಿ ಕೇಳುವುದರಿಂದ ಸಂದರ್ಶಿತರಿಗೆ ಏನಾದರೂ ಗೊಂದಲ ಉಂಟಾದಲ್ಲಿ ತಕ್ಷಣವೇ ಬಗೆಹರ್ಸಿಕೊಳ್ಳಬಹುದು.

4.     ಸಂದರ್ಶಕ ಮತ್ತು ಸಂದರ್ಶಿತನ ನಡುವೆ ಪರಸ್ಪರ ಸ್ನೇಹಪೂರ್ವಕ ವಾತಾವರಣವಿರುವುದರಿಂದ ಇದು ವಸ್ತುನಿಷ್ಠ ಮಾಹಿತಿ ಸಂಗ್ರಹಣೆಗೆ ನೆರವಾಗುವುದು.

5.     ನಿಗದಿಪಡಿಸಿದ ಪ್ರತಿದರ್ಶದಿಂದ ಮಾಹಿತಿ ಸಂಗ್ರಹಣೆಗೆ ಯಾವುದೇ ಧಕ್ಕೆ ಬಾರದು.

6.     ಸಂದರ್ಶಕನು ಸಂದರ್ಶಿತರಿಂದ ಸಂಶೋಧನೆಗೆ ಹೊರತಾದ ಮಾಹಿತಿಯನ್ನು ಸಂಗ್ರಹಿಸಲು ಇದು ನೆರವಾಗುವುದು.

7.     ಲಿಖಿತವಾಗಿ ಉತ್ತರ ನೀಡಲು ಬಯಸದೇ ಇರುವವರಿಗೆ ಈ ಮಾದರಿ ಹೆಚ್ಚು ಅನುಕೂಲವಾಗುವುದು.

8.     ಸಂದರ್ಶಕನು ಬುದ್ದಿವಂತನೂ, ಚತುರನೂ ಆಗಿದಲ್ಲಿ ಸಂದರ್ಶಿತನ ಮುಖಚರ್ಯೆಯನ್ನು ಗಮನಿಸುವುದರ ಮೂಲಕ ಆತನು ನೀಡಿದ ಉತ್ತರಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸಬಹುದು.

9.     ವ್ಯಕ್ತಿ- ವ್ಯಕ್ತಿಗಳ ನಡುವೆ ಇರುವ ಅಡ್ಡ ಗೋಡೆಗಳನ್ನು ಇದು ದೂರ ಮಾಡುವುದು.

10.   ಒಂದು ನಿರ್ದಿಷ್ಠ ಮಟ್ಟದಲ್ಲಿ ಸಂದರ್ಶನ ನಡುಯುವ ಸನ್ನಿವೇಶವನ್ನು ಸಂದರ್ಶಕನು ನಿಯಂತ್ರಿಸಬಹುದು.

11.   ಸಂಶೋಧಕನು ಸಂದರ್ಶಿತರಿಂದ ಭಾವನೆಗಳು ಮತ್ತು ಮನೋಭಾವಗಳಿಗೆ ಸಂಬಂಧಿಸಿದಂತೆ ನೇರವಾಗಿ ಮಾಹಿತಿ ಸಂಗ್ರಹಿಸಬಹುದು.

 

 

ಸಂದರ್ಶನದ ಅನಾನುಕೂಲಗಳು:

  1. ಅಭ್ಯರ್ಥಿಯಿಂದ   ಪಡೆದ ಮಾಹಿತಿಯನ್ನು ದುರ್ಬಳಕೆ ಮಾಡುವ ಸಾಧ್ಯತೆ ಇರುವುದು.
  2. ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ಸಂದರ್ಶಿಸುವುದರಿಂದ ಇದು ಅಧಿಕ ಸಮಯವನ್ನು ನಿರೀಕ್ಷಿಸುವುದು.
  3. ಸಂದರ್ಶಿತರು ನೀಡುವ ಮಾಹಿತಿಯನ್ನು ಪೂರ್ಣವಾಗಿ ಇಲ್ಲವೇ ಆಂಶಿಕವಾಗಿ ವರದಿ ಮಾಡಿಕೊಳ್ಳಬೇಕೇ ಎಂಬ ಗೊದಲವಿರುವುದು.
  4. ಸಮದರ್ಶಕನು ಗಡಸು ಸ್ವಭಾವದವನಾಗಿದ್ದಲ್ಲಿ ನಿರೀಕ್ಷಿತ ಮಾಹಿತಿಯನ್ನು ಪಡೆಯಲು ಆಗದು.
  5. ಇದಕ್ಕೆ ಹೆಚ್ಚು ಅನುಭವ ಮತ್ತು ತರಬೇತಿ ಹೊಂದಿದ ವ್ಯಕ್ತಿಗಳ ಅವಶ್ಯಕತೆ ಇದ್ದು, ಅದು ದೊರಕುವುದು ದುರ್ಲಭವೆಂದೇ ಹೇಳಬಹುದು.   
  6. ಸಂದರ್ಶಕನು ಕೇಳಿದ ಎಲ್ಲ ಪ್ರಶ್ನೆಗಳಿಗೂ ನೈಜವಾದ ಉತ್ತರ ಸಿಗಲಾರದು. ಅದು ಕೆಲವೊಮ್ಮೆ ಅಪರಿಪೂರ್ಣ ಮತ್ತು ಅಸತ್ಯತೆಯಿಂದ ಕೂಡಿರುವುದು.
  7. ಸಂದರ್ಶನಕ್ಕೆ ಆಯ್ಕೆ ಮಾಡಿಕೊಂಡ ಪ್ರತಿಯೊಬ್ಬರೂ ಸಂದರ್ಶನಕಾರನಿಗೆ ಸಹಕರಿಸುತ್ತಾರೆಂದು ಹೇಳುವುದು ಕಷ್ಟವಾಗುವುದು.
  8. ಕೆಲವೊಮ್ಮೆ ಸಂದರ್ಶಕ ಮತ್ತು ಸಂದರ್ಶಿತನ ನಡುವೆ ಅತಿಯಾದ ಸ್ನೇಹ ಉಂಟಾದಲ್ಲಿ ಅದು ಮಾಹಿತಿಯನ್ನು ಪಡೆಯಲು ತೊಂದರೆಯನ್ನುಂಟು ಮಾಡುವುದು.
  9. ಈ ವಿಧಾನದ ಮೂಲಕ ಅತಿ ಸೂಕ್ಷ್ಮ ಮತ್ತು ವೈಯಕ್ತಿಕ ವಿಚಾರಗಳನ್ನು ಪಡೆಯಲು ಆಗದು.
  10. ಸಂದರ್ಶಕನು ಸಂದರ್ಶಿತರಿಂದ ಪಡೆದ ಪೂರ್ಣ ಮಾಹಿತಿಯನ್ನು ವರದಿ ಮಾಡಿಕೊಳ್ಳಲು ಸಾಧ್ಯವಾಗದು.
  11. ಕೆಲವೊಮ್ಮೆ ಸಂದರ್ಶಿತರು ನೀಡದೆ ಇರುವ ಮಾಹಿತಿಯನ್ನು ಸಂದರ್ಶಕನು ವರದಿ ಮಾಡಿಕೊಳ್ಳಬಹುದು. ಆದ್ದರಿಂದ ಇದು ವ್ಯಕ್ತಿನಿಷ್ಠತೆಗೆ ಪ್ರಾಧಾನ್ಯತೆ ನೀಡಿದಂತಾಗುವುದು.

2.3: ‌ ರುಬ್ರಿಕ್ಸ್

‌        ಒಂದು ರಬ್ರಿಕ್ಸ್ ಒಂದು ರೀತಿಯ ಸ್ಕೋರಿಂಗ್ ಮಾರ್ಗದರ್ಶಿಯಾಗಿದ್ದು ಅದು ನಿಯೋಜನೆಗಾಗಿ ನಿರ್ದಿಷ್ಟ ಘಟಕಗಳು ಮತ್ತು ನಿರೀಕ್ಷೆಗಳನ್ನು ನಿರ್ಣಯಿಸುತ್ತದೆ ಮತ್ತು ವ್ಯಕ್ತಪಡಿಸುತ್ತದೆ. ವಿವಿಧ ಕಾರ್ಯಯೋಜನೆಗಳಿಗಾಗಿ ರೂಬ್ರಿಕ್ಸ್ ಅನ್ನು ಬಳಸಬಹುದು: ಸಂಶೋಧನಾ ಪ್ರಬಂಧಗಳು, ಗುಂಪು ಯೋಜನೆಗಳು, ಪೋರ್ಟ್ಫೋಲಿಯೊಗಳು ಮತ್ತು ಪ್ರಸ್ತುತಿಗಳು.

      ಹೈಡಿ ಗುಡ್ರಿಚ್ ಆಂಡ್ರೇಡ್, ರಬ್ರಿಕ್ಸ್ ಪರಿಣಿತರು, ರಬ್ರಿಕ್ ಅನ್ನು "ಒಂದು ಕೆಲಸದ ಮಾನದಂಡವನ್ನು ಪಟ್ಟಿ ಮಾಡುವ ಸ್ಕೋರಿಂಗ್ ಸಾಧನ ಅಥವಾ 'ಏನು ಎಣಿಕೆ ಮಾಡುತ್ತದೆ.' "ಉದಾಹರಣೆಗೆ, ಪ್ರಬಂಧಕ್ಕಾಗಿ ರಬ್ರಿಕ್ ವಿದ್ಯಾರ್ಥಿಗಳಿಗೆ ಅವರ ಕೆಲಸವನ್ನು ನಿರ್ಣಯಿಸಲಾಗುತ್ತದೆ ಎಂದು ಹೇಳಬಹುದು. ಉದ್ದೇಶ, ಸಂಘಟನೆ, ವಿವರಗಳು, ಧ್ವನಿ ಮತ್ತು ಯಂತ್ರಶಾಸ್ತ್ರ.

        ರಬ್ರಿಕ್ ಎನ್ನುವುದು ಮೌಲ್ಯಮಾಪನ ಸಾಧನವಾಗಿದ್ದು ಅದು ಯಾವುದೇ ರೀತಿಯ ವಿದ್ಯಾರ್ಥಿ ಕೆಲಸದ ಎಲ್ಲಾ ಘಟಕಗಳಲ್ಲಿ ಸಾಧನೆಯ ಮಾನದಂಡಗಳನ್ನು ಸ್ಪಷ್ಟವಾಗಿ ಸೂಚಿಸುತ್ತದೆ, ಬರವಣಿಗೆಯಿಂದ ಮೌಖಿಕವಾಗಿ ದೃಶ್ಯದವರೆಗೆ. ಕಾರ್ಯಯೋಜನೆಗಳು, ವರ್ಗ ಭಾಗವಹಿಸುವಿಕೆ ಅಥವಾ ಒಟ್ಟಾರೆ ಶ್ರೇಣಿಗಳನ್ನು ಗುರುತಿಸಲು ಇದನ್ನು ಬಳಸಬಹುದು.

ರೂಬ್ರಿಕ್ಸ್ ವಿಧಗಳು

  • ವಿಶ್ಲೇಷಣಾತ್ಮಕ ರೂಬ್ರಿಕ್ಸ್.
  • ಅಭಿವೃದ್ಧಿ ರೂಬ್ರಿಕ್ಸ್.
  • ಹೋಲಿಸ್ಟಿಕ್ ರೂಬ್ರಿಕ್ಸ್.
  • ಪರಿಶೀಲನಾಪಟ್ಟಿಗಳು

ರೂಬ್ರಿಕ್ಸ್ ಉದ್ದೇಶ

   ಯಾವುದೇ ಇತರ ಮೌಲ್ಯಮಾಪನ ಸಾಧನದಂತೆ, ರಬ್ರಿಕ್ಸ್ ಕೆಲವು ಉದ್ದೇಶಗಳಿಗಾಗಿ ಉಪಯುಕ್ತವಾಗಿದೆ ಮತ್ತು ಇತರರಿಗೆ ಅಲ್ಲ. ಪ್ರದರ್ಶನಗಳನ್ನು ನಿರ್ಣಯಿಸುವುದು ರಬ್ರಿಕ್ಸ್‌ನ ಮುಖ್ಯ ಉದ್ದೇಶವಾಗಿದೆ. ಕೆಲವು ಪ್ರದರ್ಶನಗಳಿಗಾಗಿ, ಎಲೆಕ್ಟ್ರಿಕ್ ಡ್ರಿಲ್ ಅನ್ನು ಬಳಸುವುದು ಅಥವಾ ಸಮಸ್ಯೆಯನ್ನು ಚರ್ಚಿಸುವಂತಹ ಏನನ್ನಾದರೂ ಮಾಡುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಯನ್ನು ನೀವು ಗಮನಿಸುತ್ತೀರಿ. ಇತರ ಪ್ರದರ್ಶನಗಳಿಗಾಗಿ, ಸಿದ್ಧಪಡಿಸಿದ ಪುಸ್ತಕದ ಕಪಾಟು ಅಥವಾ ಲಿಖಿತ ವರದಿಯಂತಹ ವಿದ್ಯಾರ್ಥಿಯ ಕೆಲಸದ ಫಲಿತಾಂಶದ ಉತ್ಪನ್ನವನ್ನು ನೀವು ವೀಕ್ಷಿಸುತ್ತೀರಿ. ಕೆಲವು ಸಾಮಾನ್ಯ ರೀತಿಯ ಶಾಲಾ ಪ್ರದರ್ಶನಗಳನ್ನು ರೂಬ್ರಿಕ್ಸ್‌ನೊಂದಿಗೆ ಮೌಲ್ಯಮಾಪನ ಮಾಡಬಹುದು. ಇದು ಯಾವುದೇ ಸಂಭಾವ್ಯ ಶಾಲೆಯ ಕಾರ್ಯಕ್ಷಮತೆಯನ್ನು ಒಳಗೊಳ್ಳುವುದಿಲ್ಲ. ರಬ್ರಿಕ್ಸ್‌ನೊಂದಿಗೆ ನೀವು ನಿರ್ಣಯಿಸಬಹುದಾದ ಪ್ರದರ್ಶನಗಳ ಪ್ರಕಾರಗಳನ್ನು ಯೋಚಿಸಲು ನಿಮಗೆ ಸಹಾಯ ಮಾಡಲು ಇದು ಕೇವಲ ಉದ್ದೇಶವಾಗಿದೆ.

ರುಬ್ರಿಕ್ಸನ ಪ್ರಾಮುಖ್ಯತೆ:

1.      ರೂಬ್ರಿಕ್ಸ್ ನಿಮ್ಮ ನಿರೀಕ್ಷೆಗಳನ್ನು ಸ್ಪಷ್ಟಪಡಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ಹೇಗೆ ಪೂರೈಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತೋರಿಸುತ್ತದೆ, ಸುಲಭವಾಗಿ ಅನುಸರಿಸಬಹುದಾದ ಸ್ವರೂಪದಲ್ಲಿ ಅವರ ಕಾರ್ಯಕ್ಷಮತೆಗೆ ವಿದ್ಯಾರ್ಥಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತದೆ.

2.      ಗ್ರೇಡಿಂಗ್ ರೂಬ್ರಿಕ್ ಮೂಲಕ ವಿದ್ಯಾರ್ಥಿಗಳು ಸ್ವೀಕರಿಸುವ ಪ್ರತಿಕ್ರಿಯೆಯು ಪರಿಷ್ಕೃತ ಅಥವಾ ನಂತರದ ಕೆಲಸದಲ್ಲಿ ಅವರ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

3.      ರೂಬ್ರಿಕ್ಸ್ ವಿದ್ಯಾರ್ಥಿಗಳಿಗೆ ಸ್ಪಷ್ಟ ಮತ್ತು ವ್ಯಾಖ್ಯಾನಿತ ಗುರಿಯನ್ನು ಸಾಧಿಸಲು ಹೆಚ್ಚಿನ ಅವಕಾಶವನ್ನು ನೀಡುತ್ತದೆ. ಅವರು ಪಠ್ಯಕ್ರಮದ ಯೋಜನೆಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಸಮಗ್ರತೆಯೊಂದಿಗೆ ನಿಖರವಾದ ಮೌಲ್ಯಮಾಪನಗಳನ್ನು ಎತ್ತಿಹಿಡಿಯುತ್ತಾರೆ.

4.      ಪರಿಣಾಮಕಾರಿ ರಬ್ರಿಕ್ಸ್ ಸ್ವಯಂ-ಮೌಲ್ಯಮಾಪನ ಮತ್ತು ಸ್ವಯಂ-ನಿರ್ದೇಶಿತ ವಿದ್ಯಾರ್ಥಿಗಳ ಕಲಿಕೆಯನ್ನು ಸಕ್ರಿಯಗೊಳಿಸುತ್ತದೆ.

ಮೌಲ್ಯಮಾಪನಕ್ಕಾಗಿ ರಬ್ರಿಕ್ ಅನ್ನು ಬಳಸುವುದರ ಪ್ರಯೋಜನಗಳು ಯಾವುವು?

1. ಬೋಧಕರಿಗೆ ದೀರ್ಘವಾದ ಕಾಮೆಂಟ್‌ಗಳನ್ನು ಬರೆಯದೆಯೇ ವಸ್ತುನಿಷ್ಠ ವಿವರಣೆಯನ್ನು ಉಲ್ಲೇಖಿಸಲು  

   ಅವಕಾಶ ನೀಡುವ ಮೂಲಕ ರೂಬ್ರಿಕ್ಸ್‌ಗಳು ಶ್ರೇಣೀಕರಣದ ಸಮಯವನ್ನು ಕಡಿಮೆ ಮಾಡಬಹುದು.

2. ರೂಬ್ರಿಕ್ಸ್ ಬೋಧಕರಿಗೆ ಸಂಪೂರ್ಣ ವರ್ಗದಾದ್ಯಂತ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಹೆಚ್ಚು ಸ್ಪಷ್ಟವಾಗಿ

    ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಅವರ ಸೂಚನೆಯನ್ನು ಸೂಕ್ತವಾಗಿ ಹೊಂದಿಸುತ್ತದೆ. ರೂಬ್ರಿಕ್ಸ್     

    ನಿಷ್ಪಕ್ಷಪಾತವಾಗಿರಬಹುದು.

3.  ಅಧಿಕೃತ ಮೌಲ್ಯಮಾಪನಗಳು ಮತ್ತು ಕಾರ್ಯಕ್ಷಮತೆಯ ಕಾರ್ಯಗಳ ಮೌಲ್ಯಮಾಪನವನ್ನು ಹೆಚ್ಚಿಸಲು

    ರೂಬ್ರಿಕ್ಸ್ ಮತ್ತು ಪೋರ್ಟ್ಫೋಲಿಯೊಗಳನ್ನು ಒಟ್ಟಿಗೆ ಬಳಸಬಹುದು.

4.  ರೂಬ್ರಿಕ್ಸ್ ಪೋರ್ಟ್‌ಫೋಲಿಯೊದಲ್ಲಿನ ಪ್ರತಿ ಕಲಾಕೃತಿಗೆ ನಿರ್ದಿಷ್ಟ ಮತ್ತು ಸ್ಥಿರವಾದ ಪ್ರತಿಕ್ರಿಯೆ ಮತ್ತು

    ಶ್ರೇಣೀಕರಣವನ್ನು ಒದಗಿಸುತ್ತದೆ, ಆದರೆ ಪೋರ್ಟ್‌ಫೋಲಿಯೊಗಳು ವಿದ್ಯಾರ್ಥಿಗಳ ಕಲಿಕೆಯ ಪ್ರಯಾಣ

     ಮತ್ತು ಫಲಿತಾಂಶಗಳ ಸಮಗ್ರ ಮತ್ತು ಸಮಗ್ರ ನೋಟವನ್ನು ನೀಡುತ್ತವೆ.

 

ಉತ್ತಮ ರಬ್ರಿಕ್ಸ್‌ನ ಪ್ರಮುಖ ಗುಣಲಕ್ಷಣಗಳು ಯಾವುವು?

      ರೂಬ್ರಿಕ್ ಗುರುತು ಮಾಡುವ ಮಾನದಂಡಗಳು ಮೌಲ್ಯಮಾಪನದ ಕಲಿಕೆಯ ಫಲಿತಾಂಶಗಳೊಂದಿಗೆ ಹೊಂದಿಕೆಯಾಗಬೇಕು. ಕಾರ್ಯಕ್ಷಮತೆಯ ವಿವರಣೆಗಳು ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ಬಗ್ಗೆ ಮಾಹಿತಿ ನೀಡಬೇಕು. ಕಾರ್ಯಕ್ಷಮತೆಯ ವಿವರಣೆಯನ್ನು ಸಂಕ್ಷಿಪ್ತವಾಗಿ ಹೇಳಬೇಕು. ಕಾರ್ಯಕ್ಷಮತೆಯ ವಿವರಣೆಗಳು ಗುಣಮಟ್ಟದ ಸ್ಪಷ್ಟ ಹಂತಗಳನ್ನು ಪ್ರತಿಬಿಂಬಿಸಬೇಕು.

Comments

Popular posts from this blog

ಮೌಲ್ಯಮಾಪನದ ವಿಧಗಳು

ಕಲಿಕಾ ಮಾಪನದ ಅರ್ಥ,ವ್ಯಾಖ್ಯಾನ,ಮಾಪನದ ಉದ್ದೇಶಗಳು

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ (ಸಿಸಿಇ)