ಸಾಧನಾ ಪರೀಕ್ಷೆಗಳು

 

ಸಾಧನಾ ಪರೀಕ್ಷೆಗಳು

    ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಸಮಸ್ಯೆಗಳನ್ನು ಪರಿಹರಿಸಲು ತಿಳಿಸಿ ಅಥವಾ ನಿರ್ದಿಷ್ಟ ಕಾರ್ಯ ನಿರ್ವಹಿಸಲು ತಿಳಿಸಿ ಇದರ ಮೂಲಕ ವಿದ್ಯಾರ್ಥಿಯು ಗುರಿ / ಉದ್ದೇಶಗಳನ್ನು ಎಷ್ಟರ ಮಟ್ಟಿಗೆ ಸಾಧಿಸಿದ್ದಾನೆ ಎಂಬುದನ್ನು ನಿರ್ಧರಿಸುವುದಕ್ಕೆ ಸಾಧನಾ ಪರೀಕ್ಷೆ ಎನ್ನುವರು.

ವ್ಯಾಖ್ಯಾನಗಳು:

     “ಸಾಧನೆಯ ಪರೀಕ್ಷೆಯೆಂದರೆ ವಿದ್ಯಾರ್ಥಿಯು ನಿರ್ದಿಷ್ಟ ಕ್ಷೇತ್ರದಲ್ಲಿ ಹೊಂದಿರುವ ಜ್ಞಾನ ಅಥವಾ ನಿರ್ದಿಷ್ಟ ಕೌಶಲ್ಯಗಳಲ್ಲಿ ಹೊಂದಿರುವ ಸಾಮರ್ಥ್ಯವನ್ನು ಅಳೆಯಲು ರೂಪಿಸಿರುವ ಪರೀಕ್ಷೆ.” ---ಇಬೆಲ್

     “ಶೈಕ್ಷಣಿಕ ಸಾಧನೆಯ ಪರೀಕ್ಷೆಯೆಂದರೆ ನಿರ್ದಿಷ್ಟ ವಿದ್ಯಾರ್ಥಿ ಅಥವಾ ಒಂದು ಗುಂಪಿನ ವಿದ್ಯಾರ್ಥಿಗಳ ಜ್ಞಾನ, ಗ್ರಹಿಕೆ ಹಾಗೂ ಕೌಶಲ್ಯಗಳನ್ನು ಅಳೆಯಲು ರೂಪಿಸಿರುವ ಪರೀಕ್ಷೆಯಾಗಿದೆ.”  -------ಫ್ರೀಮನ್

‌ಸಾಧನೆಯ ಪರೀಕ್ಷೆಯ ಉಪಯೋಗಗಳು

  1. ವಿದ್ಯಾರ್ಥಿಗಳ ಕಾರ್ಯ ಸಾಧನಾ ಸಾಮರ್ಥ್ಯವನ್ನು ಪರೀಕ್ಷಿಸಲು ಬಳಸಲಾಗುವುದು.
  2. ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ, ಇವುಗಳ ಸಹಾಯದಿಂದ ವಿದ್ಯಾರ್ಥಿಗಳ ಸ್ಥಾನ ನಿಗದಿಗೊಳಿಸಲು ಮತ್ತು ವರ್ಗೀಕರಿಸಲು ಸಾಧ್ಯವಾಗುತ್ತದೆ.
  3. ಸಾಧನೆಯ ಪರೀಕ್ಷೆಗಳು ಸಲಹೆ ನೀಡಲು ಉತ್ತಮ ಸಾಧನಗಳಾಗಿವೆ, ಶ್ರೇಣಿಗಳನ್ನು ನೀಡಲು ಸಹಾಯಕವಾಗಿವೆ.
  4. ಪರಿಹಾರ ಬೋಧನೆ ಕೈಗೊಳ್ಳಲು ಅಗತ್ಯವಾದ ಸೂಕ್ತ ಮಾಹಿತಿ ನೀಡುತ್ತವೆ.
  5. ಬೋಧನಾ ತಂತ್ರಗಳನ್ನು ಸುಧಾರಿಸಲು ಹಾಗೂ ಪಠ್ಯಕ್ರಮವನ್ನು ಪರಿಷ್ಕರಿಸಲು ಸಾದನೆಯ ಪರೀಕ್ಷೆಗಳನ್ನು ಸಾಧನಗಳನ್ನಾಗಿ ಬಳಸಲಾಗುವುದು.
  6. ಕಲಿಕೆಯ ಬಗ್ಗೆ ಆಸಕ್ತಿ ಮೂಡಿಲು ಮತ್ತು ಪ್ರೇರೇಪಿಸಲು ಉತ್ತಮವಾದ ರಚಿತವಾದ ಮತ್ತು ಅಯ್ದ ಸಾಧನೆಯ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಮೇಲೆ ಬಳಸಲಾಗುವುದು.

 

         ಪರೀಕ್ಷೆಗಳನ್ನು ಮೌಖಿಕ, ಲಿಖಿತ ಹಾಗೂ ಕಾರ್ಯ ನಿರ್ವಹಣಾ ಪರೀಕ್ಷೆಗಳೆಂದು ಮೂರು ವಿಧಗಳಾಗಿ ವಿಂಗಡಿಸುವರು.

1.  ಮೌಖಿಕ ಪರೀಕ್ಷೆ:

             ಮೌಖಿಕ ಪರೀಕ್ಷೆಗಳಿಗಿಂತ ಮೌಖಿಕ ವಿಧಾನ ತರಗತಿ ಶಿಕ್ಷಕನಿಂದ ಹೆಚ್ಚು ಬಳಕೆಯಾಗುತ್ತದೆ. ಪ್ರತಿದಿನ ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಪ್ರಶ್ನಿಸುತ್ತಿರುತ್ತಾರೆ. ಕೆಲವೊಮ್ಮೆ ವಿದ್ಯಾರ್ಥಿಗಳು ನೀಡುವ ಉತ್ತರಗಳು ಪಾಠದ ಬೆಳವಣಿಗೆಗೆ ಸಹಾಯಕವಾಗುತ್ತವೆ. ಮೌಖಿಕ ಪರೀಕ್ಷಿಸುವಿಕೆಯನ್ನು ಬೋಧನಾ-ಕಲಿಕಾ ಸನ್ನಿವೇಶವನ್ನು ಪರಿಣಾಮಕಾರಿಯಾಗಿಸಲು ಬಳಸಿಕೊಳ್ಳಬಹುದು. ವಿದ್ಯಾರ್ಥಿಯನ್ನು ಮೌಖಿಕವಾಗಿ ಪ್ರಶ್ನಿಸಿ ಅವರು ನೀಡುವ ಉತ್ತರಗಳನ್ನಾಧರಿಸಿ ಮೌಲ್ಯ ನಿರ್ಧಾರ ಕೈಗೊಳ್ಳಲು ನಡೆಸುವ ಪರೀಕ್ಷೆಯನ್ನು ಮೌಖಿಕ ಪರೀಕ್ಷೆ ಎನ್ನುವರು.

ಮೌಖಿಕ ಪರೀಕ್ಷೆಯ ಗುಣಗಳು:

  1. ವಿದ್ಯಾರ್ಥಿಯು ಎಷ್ಟರ ಮಟ್ಟಿಗೆ ಜ್ಞಾನ ಹೊಂದಿದ್ದಾನೆ ಎಂಬುದನ್ನು ತಿಳಿಯಲು ಶಿಕ್ಷಕರಿಗೆ ನೆರವಾಗುತ್ತದೆ.
  2. ಮೌಲ್ಯಮಾಪನವನ್ನು ನಿರಂತರಗೊಳಿಸಲು ನೆರವಾಗುತ್ತದೆ.
  3. ಮೌಖಿಕ ಅಭಿವ್ಯಕ್ತಿ, ಉಚ್ಚಾರಣೆ, ಪದ್ಯವನ್ನು ಹಾಡುವುದು, ಮುಂತಾದವುಗಳನ್ನು ಪರೀಕ್ಷಿಸಲು ಸೂಕ್ತ ವಿಧಾನವಾಗಿದೆ.
  4. ವಿದ್ಯಾರ್ಥಿಯು ಎಷ್ಟರ ಮಟ್ಟಿಗೆ ವಿಷಯವನ್ನು ಸಂಶ್ಲೇಷಿಸಬಲ್ಲ, ಸಮನ್ವಯಗೊಳಿಸಬಲ್ಲ ಮತ್ತು ವ್ಯವಸ್ತೆಗೊಳಿಸಬಲ್ಲ ಹಾಗೂ ಅಭಿವ್ಯಕ್ತಿಸಬಲ್ಲ ಎಂಬುದನ್ನು ತಿಳಿಯಲು ಸಹಾಯಕ.
  5. ಇದು ವಿದ್ಯಾರ್ಥಿಗಳು ಮುಕ್ತವಾಗಿ ಉತ್ತರಿಸಲು ನೆರವಾಗುತ್ತದೆ.
  6. ಓದು-ಬರಹ ಸ್ಪಷ್ಟವಾಗಿ ಬರದ ವಿದ್ಯಾರ್ಥಿಗಳಿಗೆ ಸೂಕ್ತ ಮೌಲ್ಯಮಾಪನ ವಿಧಾನವಾಗಿದೆ.
  7. ವಿವರವಾಗಿ ವಿದ್ಯಾರ್ಥಿಯಿಂದ ಮಾಹಿತಿ ಸಂಗ್ರಹಿಸಲು ಸೂಕ್ತವಾದ ವಿಧಾನವಾಗಿರುವುದರಿಂದ ನೈದಾನಿಕ ಉದ್ದೇಶಕ್ಕೆ ಸೂಕ್ತವಾದ ಪರೀಕ್ಷೆಯಾಗಿದೆ.
  8. ವಿದ್ಯಾರ್ಥಿಯು ಸ್ಪಷ್ಟೀಕರಣಕ್ಕಾಗಿ ಮೌಖಿಕ ಪ್ರಶ್ನೆಗಳನ್ನು ಬಳಸಬಹುದು.
  9. ಬರವಣಿಗೆ ಪರೀಕ್ಷೆಯಲ್ಲಿ ಸಾಧ್ಯವಾಗದ ಅಂಗವಿಕಲ ಮಕ್ಕಳಿಗೆ ಸೂಕ್ತ ಪರೀಕ್ಷೆ. ಲಿಖಿತ ಪರೀಕ್ಷೆಗಳಿಗೆ ಹೋಲಿಸಿದಲ್ಲಿ ಹಣದ ದೃಷ್ಠಿಯಿಂದ ಮಿತವ್ಯಯಕರ ವಿಧಾನ.
  10. ಪರೀಕ್ಷಕ ಅನೌಪಚಾರಿಕ ವಾತಾವರಣ ಸೃಷ್ಠಿಸಿ ವಿದ್ಯಾರ್ಥಿಯು ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಮಾಡಲು ಸೂಕ್ತವಾದ ಪರೀಕ್ಷಾ ವಿಧಾನವಾಗಿದೆ.

ಮೌಖಿಕ ಪರೀಕ್ಷೆಯ ಮಿತಿಗಳು:

  1. ಮೌಖಿಕ ಪರೀಕ್ಷೆಯಲ್ಲಿ ಸೀಮಿತ ವ್ಯಾಪ್ತಿಯ ವಿಷಯವನ್ನು ಮಾತ್ರ ಪರೀಕ್ಷಿಸಲು ಸಾಧ್ಯ.
  2. ವಿಶ್ವಸನೀಯತೆ ಕಡಿಮೆಯಾಗಿರುತ್ತದೆ, ಏಕೆಂದರೆ ಶಿಕ್ಷಕನು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅವನು ನೀಡುವ ಸೀಮಿತ ಉತ್ತರಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕಾಗಿರುವುದರಿಂದ.
  3. ಇದು ವ್ಯಕ್ತಿನಿಷ್ಠವಾಗಿರುತ್ತದೆ. ಶಿಕ್ಷಕ ವಿವಿಧ ವಿದ್ಯಾರ್ಥಿಗಳಿಗೆ ಭಿನ್ನ ಪ್ರಶ್ನೆಗಳನ್ನು ಕೇಳುವುದರಿಂದ ಎಲ್ಲರಿಗೂ ಒಂದೇ ಮಟ್ಟದ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗುವುದಿಲ್ಲ, ಕೆಲವೊಮ್ಮೆ ಶಿಕ್ಷಕರು ಪಕ್ಷಪಾತಧೋರಣೆ ಪಾಲಿಸಬಹುದು.
  4. ಇತರ ಮೌಲ್ಯಮಾಪಕರು ವಿದ್ಯಾರ್ಥಿಗಳು ನೀಡುವ ಉತ್ತರಗಳನ್ನು ತಾಳೆನೋಡಲು ಸಾಧ್ಯವಿಲ್ಲ.
  5. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪ್ರತ್ಯೇಕವಾಗಿ ಪ್ರರೀಕ್ಷಿಸಬೇಕಾಗಿರುವುದರಿಂದ ಕಾಲ ಮತ್ತು ಹಣದ ದೃಷ್ಠಿಯಿಂದ ವೆಚ್ಚದಾಯಕ.
  6. ಕೆಲವೊಮ್ಮೆ ಸ್ಪಷ್ಠಯೋಜನೆಯಿಲ್ಲದೆ ಶಿಕ್ಷಕರು ಮೌಖಿಕ ಪ್ರರೀಕ್ಷೆ ನಡೆಸಲು ಮುಂದಾಗಬಹುದು.
  7. ಇದರಿಂದ ವಿದ್ಯಾರ್ಥಿಯ ಸಂಪೂರ್ಣ ಸಾಮರ್ಥ್ಯದ ಚಿತ್ರಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
  8. ಇದರಿಂದ ವಿದ್ಯಾರ್ಥಿಯನ್ನು ವಿವರವಾಗಿ ಅಥವಾ ಪರಿಣಾಮಕಾರಿಯಾಗಿ ಪರೀಕ್ಷಿಸಲು ಸಾಧ್ಯವಿಲ್ಲ.

ಮೌಖಿಕ ಪರೀಕ್ಷೆಯನ್ನು ಉತ್ತಮಗೊಳಿಸಲು ಸಲಹೆಗಳು:

  1. ಪರೀಕ್ಷೆಯ ಉದ್ದೇಶಗಳನ್ನು ಮತ್ತು ವಿಷಯ ವ್ಯಾಪ್ತಿಯನ್ನು ಮೊದಲು ನಿರ್ಧರಿಸಿರಿ.
  2. ಲಿಖಿತ ಪರೀಕ್ಷೆಯಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಾಗದ ಉದ್ದೇಶಗಳನ್ನು ಮಾತ್ರ ಮೌಖಿಕ ಪರೀಕ್ಷೆಯಿಂದ ಮೌಲ್ಯಮಾಪನ ಮಾಡಿರಿ.
  3. ಪರೀಕ್ಷೆಯಲ್ಲಿ ಬಳಸುವ ಪ್ರಶ್ನೆಗಳನ್ನು ಯೋಜಿಸಿಕೊಳ್ಳಿ ಮತ್ತು ಸೂಕ್ತ ಉತ್ತರಗಳನ್ನು ರೂಪಿಸಿಕೊಂಡಿರಬೇಕು.
  4. ಶ್ರೇಣಿಗಳನ್ನು ನೀಡುವ ವಿಧಾನವನ್ನು ಮೊದಲೇ ನಿರ್ಧರಿಸಿಕೊಂಡಿರಬೇಕು.
  5. ಎಲ್ಲಾ ವಿದ್ಯಾರ್ಥಿಗಳಿಗೂ ಸಾಧ್ಯವಾದಷ್ಟು ಸಮಾನ ಕ್ಲಿಷ್ಟತೆಯ ಪ್ರಶ್ನೆಗಳನ್ನು ಕೇಳಬೇಕು.

 

2.  ಲಿಖಿತ ಪರೀಕ್ಷೆ:

         ವಿದ್ಯಾರ್ಥಿಗಳು ಬರವಣಿಗೆ ರೂಪದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಅಥವಾ ಉತ್ತರಗಳನ್ನು ನೀಡುವಂತೆ ಮಾಡುವ ಪರೀಕ್ಷೆಯೇ ಲಿಖಿತ ಪರೀಕ್ಷೆ.

ಲಿಖಿತ ಪರೀಕ್ಷೆಯ ಗುಣಗಳು:

  1. ಲಿಖಿತ ಪರೀಕ್ಷೆಯು ಹೆಚ್ಚು ಸ್ಥಿರವಾದ, ವಿಶ್ವಸನೀಯವಾದ ಹಾಗೂ ಸಮಂಜಸವಾದ ಮೌಲ್ಯಮಾಪನ ವಿಧವಾಗಿದೆ.
  2. ಉದ್ದೇಶಗಳು, ವಿಷಯ ಹಾಗೂ ಕಲಿಕೆಯ ಅನುಭವಗಳನ್ನು ಗಮನದಲ್ಲಿರಿಸಿಕೊಂಡು ಲಿಖಿತ ಪರೀಕ್ಷೆಯನ್ನು ಯೋಜಿಸಬಹುದಾಗಿದೆ.
  3. ವಿದ್ಯಾರ್ಥಿಗಳ ಉತ್ತರಗಳನ್ನು ವಸ್ತುನಿಷ್ಠವಾಗಿ, ಅಂಕಸೂಚಿಯ ಸಹಾಯದೊಂದಿಗೆ ಮೌಲ್ಯಮಾಪನ ಮಾಡಬಹುದಾಗಿದೆ.
  4. ಉತ್ತರ ಪತ್ರಿಕೆಯನ್ನು ಬಹಳ ಕಾಲ ಸಂರಕ್ಷಿಸಬಹುದು ಮತ್ತು ಅಗತ್ಯವಾದಾಗ ಮೌಲ್ಯಮಾಪನ ಮಾಡಬಹುದು.
  5. ಲಿಖಿತ ಪರೀಕ್ಷೆಯ ಮೂಲಕ ಬಹಳ ವಿದ್ಯಾರ್ಥಿಗಳನ್ನು ಒಂದೇ ಸಮಯದಲ್ಲಿ ವಿವಿಧ ಸ್ಥಳಗಳಲ್ಲಿ ಮೌಲ್ಯಮಾಪನ ಮಾಡಬಹುದು.
  6. ಶೈಕ್ಷಣಿಕ ಕಾರ್ಯಕ್ರಮವನ್ನು ಯೋಜಿಸಲು ಮತ್ತು ಮಾರ್ಗದರ್ಶನ ಮಾಡಲು ಶಿಕ್ಷಕರಿಗೆ ನೆರವಾಗುತ್ತದೆ.
  7. ಪ್ರಶ್ನೆ ಪತ್ರಿಕೆಗಳನ್ನು ಮಾರ್ಪಡಿಸಲು ಲಿಖಿತ ಪರೀಕ್ಷೆಗಳು ನೆರವಾಗುತ್ತವೆ.

ಲಿಖಿತ ಪರೀಕ್ಷೆಯ ಮಿತಿಗಳು:

  1. ಮನೋಜನ್ಯ ಚಲನಾವಲಯದ ಎಲ್ಲಾ ಉದ್ದೇಶಗಳನ್ನು ಲಿಖಿತ ಪರೀಕ್ಷೆಯ ಮೂಲಕ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಉದಾ: ಕಾರ್ಯನಿರ್ವಹಣಾ ಕೌಶಲ್ಯ.
  2. ಲಿಖಿತ ಪರೀಕ್ಷೆಯಲ್ಲಿ ವಿದ್ಯಾರ್ಥಿ ನೀಡಿರುವ ಉತ್ತರಗಳು ಅರ್ಥಮಾಡಿಕೊಂಡಿರುವಂತಹವುಗಳೋ ಅಥವಾ ಕಂಠಪಾಠ ವಿಧಾನದ ಮೂಲಕ ಪುನರುತ್ಪಾದಿಸಿರುವುದೋ ಎಂಬುದನ್ನು ನಿರ್ಣಯಿಸುವುದು ಕಷ್ಟ.
  3. ಲಿಖಿತ ಪರೀಕ್ಷೆಯ ಸಿದ್ಧತೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ, ತರಗತಿಯ ನಿರಂತರ ಮೌಲ್ಯಮಾಪನಕ್ಕೆ ಸೂಕ್ತವಾದ ವಿಧಾನವಲ್ಲ.
  4. ಲಿಖಿತ ಪರೀಕ್ಷೆಗಳು ಹೆಚ್ಚು ವೆಚ್ಚದಾಯಕವಾಗಿವೆ.

 

3.  ಕಾರ್ಯವಿರ್ವಹಣಾ ಪರೀಕ್ಷೆ:

         ಮನೋಜನ್ಯ ಚಲನಾವಲಯಕ್ಕೆ ಸೇರಿದ ಉದ್ದೇಶಗಳ ಸಾಧನೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ಪರೀಕ್ಷಿಸಲು ಕಾರ್ಯನಿರ್ವಹಣಾ ಪರೀಕ್ಷೆಗಳು ಸೂಕ್ತವಾಗಿವೆ. ವಿದ್ಯಾರ್ಥಿಗೆ ನಿರ್ದಿಷ್ಟ ಕಾರ್ಯನಿರ್ವಹಿಸುವಂತೆ ಸೂಚಿಸಿ, ಅವನ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಉದಾ: ಪ್ರಯೋಗಶಾಲೆಯಲ್ಲಿ ವಿದ್ಯಾರ್ಥಿ ಪ್ರಯೋಗವೊಂದಕ್ಕೆ ಸಿದ್ದಪಡಿಸಬೇಕಾದ ಉಪಕರಣಗಳ ಜೋಡಣಾಕ್ರಮ, ಉಪಕರಣಗಳನ್ನು ಬಳಸುವ ಕೌಶಲ, ಚಿತ್ರಕಲಾ ಕೌಶಲಗಳನ್ನು ಅಳೆಯುವುದು ಅವನು ಬರೆಯುವ ಉತ್ತರಗಳಿಂದ ಸಾಧ್ಯವಿಲ್ಲ. ವಿದ್ಯಾರ್ಥಿಗಳ ಬುದ್ದಿಶಕ್ತಿ ಮತ್ತು ಅಭಿಕ್ಷಮತೆಗಳನ್ನು ಪರೀಕ್ಷಿಸಲು ಕಾರ್ಯನಿರ್ವಹಣಾ ಪರೀಕ್ಷೆಗಳನ್ನು ಬಳಸಲಾಗುತ್ತಿದೆ. ಕಾರ್ಯನಿರ್ವಹಣಾ ಪರೀಕ್ಷೆಯಲ್ಲಿ 3 ವಿಧಗಳನ್ನು ಕಾಣುತ್ತೇವೆ.

  1. ವಸ್ತು ಪರೀಕ್ಷೆ: ವೀಕ್ಷಣಾ ಕೌಶಲವನ್ನು ಪರೀಕ್ಷಿಸುವ ಸಂದರ್ಭದಲ್ಲಿ ವಸ್ತು ಪರೀಕ್ಷೆಯನ್ನು ಬಳಸಲಾಗುವುದು. ಒಂದು ನಿಜವಾದ ವಸ್ತು, ವಸ್ತುವಿನ ಮಾದರಿ ಅಥವಾ ವಸ್ತುವಿನ ಚಿತ್ರ ಇವುಗಳನ್ನು ಹೆಸರಿಸುವಂತೆ ಹೇಳುವುದು ಅಥವಾ ದತ್ತ ವಸ್ತುಗಳ ಸಮೂಹದಲ್ಲಿ ಯಾವುದೇ ನಿರ್ದಿಷ್ಟ ವಸ್ತುವನ್ನು ಗುರ್ತಿಸುವಂತೆ ಹೇಳುವುದು ಈ ವರ್ಗಕ್ಕೆ ಸೇರುತ್ತದೆ. ಸ್ಮರಿಸುವಿಕೆ ಮತ್ತು ಗುರ್ತಿಸುವಿಕೆಗೆ ಸಂಬಂಧಿಸಿದ ಕಲಿಕೆಯ ಮೌಲ್ಯ ನಿರ್ಧಾರಕ್ಕೆ ಈ ಪರೀಕ್ಷೆ ಉಪಯುಕ್ತ.

    ಉದಾ: ಪ್ರಯೋಗಶಾಲೆಯಲ್ಲಿ ಅಥವಾ ತರಗತಿಯಲ್ಲಿ ವಿವಿಧ ಸಸ್ಯಗಳು ಅಥವಾ ಪ್ರಾಣಿಗಳ ನಮೂನೆಗಳನ್ನು ನೀಡಿ ಅವುಗಳನ್ನು ವೀಕ್ಷಿಸಿ ಗುರ್ತಿಸಲು ತಿಳಿಸುವುದು.

  1. ಕಾರ್ಯನಿರ್ವಹಣೆಯ ಅಳತೆ: ನಿದ್ಯಾರ್ಥಿಗಳಿಗೆ ನಿರ್ದಿಷ್ಟ ಕಾರ್ಯನಿರ್ವಹಿಸಲು ಸೂಚಿಸಿ ಅವನು ಕಾರ್ಯನಿರ್ವಹಿಸುತ್ತಿರುವಾಗ ಅವನು ಅನುಸರಿಸುವ ವಿಧಾನ ವೀಕ್ಷಿಸಿ, ವಿಧಾನದ ಸಮರ್ಪಕತೆ, ಕಾರ್ಯಕ್ಷಮತೆ, ಕಾರ್ಯನಿರ್ವಹಣೆಯ ವೇಗ ಇವುಗಳ ಮೌಲ್ಯ ನಿರ್ಧಾರ ಮಾಡುವ ಪರೀಕ್ಷೆಗಳನ್ನು ಕಾರ್ಯನಿರ್ವಹಣಾ ಪರೀಕ್ಷೆಗಳೆನ್ನುವರು. ವಿಜ್ಞಾನದ ಪ್ರಾಯೋಗಿಕ ಪರೀಕ್ಷೆಗಳು ಮತ್ತು ಬುದ್ದಿಶಕ್ತಿಯ ಕಾರ್ಯಸಾಧನಾ ಪರೀಕ್ಷೆಗಳು ಈ ವರ್ಗಕ್ಕೆ ಸೇರುತ್ತವೆ. ವೀಕ್ಷಣೆಗಳನ್ನು ದಾಖಲು ಮಾಡಲು ವೀಕ್ಷಣಾವಹಿ, ತಾಳೆ ಪಟ್ಟಿ ಹಾಗೂ ದರ್ಜಾಮಾಪನಗಳನ್ನು ಬಳಸಲಾಗುವುದು. ಕಾರ್ಯನಿರ್ವಹಣೆಯಲ್ಲಿರುವ ದೋಷಗಳನ್ನು ಇದರಿಂದ ಪತ್ತೆ ಹಚ್ಚಬಹುದು. ನೈದಾನಿಕ ಉದ್ದೇಶಗಳಿಗೂ ಸಹ ಈ ಪರೀಕ್ಷೆಗಳನ್ನು ಬಳಸಬಹುದು.
  2. ಉತ್ಪಾದನೆಯ ಮೌಲ್ಯ ನಿರ್ಧಾರ; ನಿರ್ದಿಷ್ಟ ಅವಧಿಯ ಅಂತ್ಯದಲ್ಲಿ ವಿದ್ಯಾರ್ಥಿ ಉತ್ಪಾದಿಸಿದ ವಸ್ತುಗಳ ಅಥವಾ ಕಾರ್ಯಗಳ ಪರಿಮಾಣ ಹಾಗೂ ಗುಣಮಟ್ಟವನ್ನು ಯುಕ್ತ ಸಾಧನಗಳಿಂದ ನಿರ್ಧರಿಸಿ ಅವನ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಪರೀಕ್ಷಿಸುವುದು ಇದರ ಗುರಿ. ಕಾರ್ಯವಿಧಾನಕ್ಕಿಂತ ಅಂತಿಮವಾಗಿ ಉತ್ಪಾದಿಸಿದ ಉತ್ಪನ್ನಕ್ಕೆ ಹೆಚ್ಚು ಒತ್ತುಕೊಡಲಾಗುವುದು.

ಉದಾ: ವಿದ್ಯಾರ್ಥಿ ರೂಪಿಸಿದ ಒಂದು ವೈಜ್ಞಾನಿಕ ಮಾದರಿಯನ್ನು ಮೌಲ್ಯಮಾಪನ ಮಾಡುವುದು.

ಕಾರ್ಯ ನಿರ್ವಹಣಾ ಪರೀಕ್ಷೆಯ ಗುಣಗಳು:

  1. ಮನೋಜನ್ಯ ಚಲನಾ ವಲಯದ ಉದ್ದೇಶಗಳು (ಕೌಶಲಗಳು) ಎಷ್ಟರಮಟ್ಟಿಗೆ ಸಾಧಿಸಲ್ಪಟ್ಟಿವೆ ಎಂಬುದನ್ನು ನಿರ್ಧರಿಸಲು ಸೂಕ್ತವಾದ ವಿಧಾನ.
  2. ಪ್ರಮಾಣಬದ್ದಗೊಳಿಸಿದ ಕಾರ್ಯನಿರ್ವಹಣಾ ಪರೀಕ್ಷೆಗಳು ಶಾಬ್ದಿಕ ಸಾಮರ್ಥ್ಯ ಹೊಂದಿರದ ವ್ಯಕ್ತಿಗಳ ಬುದ್ದಿಶಕ್ತಿ ಅಳೆಯಲು ಸೂಕ್ತವಾಗಿವೆ.
  3. ಇತರೆ ಪರೀಕ್ಷೆಗಳೊಂದಿಗೆ ಉಪಯೋಗಿಸಿ ವಿದ್ಯಾರ್ಥಿಗಳು ಸಾಮರ್ಥ್ಯ ಪೂರ್ಣ ಚಿತ್ರ ಪಡೆಯಲು ಕೂಡ ಉಪಯೋಗಿಸಬಹುದು.

ಕಾರ್ಯ ನಿರ್ವಹಣಾ ಪರೀಕ್ಷೆಯ ಮಿತಿಗಳು:

  1. ಜ್ಞಾನವಲಯ ಹಾಗೂ ಭಾವನಾ ವಲಯದ ಉದ್ದೇಶಗಳ ಸಾಧನೆಯನ್ನು ಪರೀಕ್ಷಿಸಲು ಸೂಕ್ತ ವಿಧಾನವಲ್ಲ.
  2. ಎಲ್ಲಾ ರೀತಿಯ ಕಲಿಕೆಗಳ ಗುಣ ನಿರ್ಧರಿಸಲು ಸಾಧ್ಯವಿಲ್ಲ.
  3. ಕಾರ್ಯ ನಿರ್ವಹಣಾ ಪರೀಕ್ಷೆ ನೀಡಲು ಹೆಚ್ಚು ಸಮಯ ಬೇಕಾಗುತ್ತದೆ.
  4. ಕಾರ್ಯನಿರ್ವಹಣೆಯ ಮೌಲ್ಯ ನಿರ್ಧರಿಸಬೇಕಾದರೆ ಒಮ್ಮೆಗೆ ಒಬ್ಬ ವಿದ್ಯಾರ್ಥಿಯನ್ನು ಮಾತ್ರ ಪರೀಕ್ಷಿಸಬಹುದು.

2.4.1: ಲಿಖಿತ ಪರೀಕ್ಷೆಗಳು

1. ಪ್ರಬಂಧ ಮಾದರಿ ಪರೀಕ್ಷೆ:

        ಲಿಖಿತ ಪರೀಕ್ಷೆಗಳಲ್ಲಿ ಬಳಸಲಾಗುತ್ತರುವ ಹೆಚ್ಚು ಪ್ರಚಲಿತವಾದ ಪರೀಕ್ಷೆ ಪ್ರಬಂಧ ಮಾದರಿ ಪರೀಕ್ಷೆ. ಈ ಮಾದರಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಕೆಲವು ವಾಕ್ಯಗಳು, ಪ್ಯಾರಾ ಅಥವಾ ಪ್ರಬಂಧ ರೂಪದಲ್ಲಿ ಉತ್ತರ ಬರಯಬೇಕು. ಈ ಪರೀಕ್ಷೆಯ ಮೌಲ್ಯಮಾಪನದಲ್ಲಿ ಉತ್ತರಗಳ ಗುಣಮಟ್ಟದ ವ್ಯಕ್ತಿನಿಷ್ಠ ನಿರ್ಣಯ ಕಂಡುಬರುತ್ತದೆ.

ಪ್ರಬಂಧ ಮಾದರಿ ಪರೀಕ್ಷೆಯ ಲಕ್ಷಣಗಳು:

  1. ಬಹಳ ಜನಪ್ರಿಯವಾದ ಹಾಗೂ ಹೆಚ್ಚು ಬಳಕೆಯಾಗುತ್ತಿರುವ ಪರೀಕ್ಷೆ.
  2. ಇಲ್ಲಿ ನಿರೀಕ್ಷಿಸುವ ಉತ್ತರ ಕೆಲವು ವಾಕ್ಯಗಳಿಂದ ದೊಡ್ಡ ಪ್ರಬಂಧಗಳವರೆಗೆ ಇರುತ್ತದೆ. ಈ ಪ್ರಬಂಧ ರಚನೆ ಕೆಲವು ಗಂಟೆಗಳಿಂದ ಕೆಲವು ದಿನಗಳವರೆಗೆ ಇರಬಹುದು (ಉದಾ: ಎಂ. ಇಡಿ. ಕಿರುಪ್ರಬಂಧ ಅಥವಾ        ಪಿ. ಹೆಚ್ ಡಿ ಮಹಾ ಪ್ರಬಂಧ)
  3. ವ್ಯಕ್ತಿನಿಷ್ಠ ನಿರ್ಣಯವನ್ನು ಒಳಗೊಳ್ಳುತ್ತದೆ.

ಪ್ರಬಂಧ ವಿಧದ ಪ್ರಶ್ನೆಗಳ ವಿಶಿಷ್ಠ ಲಕ್ಷಣಗಳೆಂದರೆ,

  1. ಒಂದೇ ಉತ್ತರ ಪರಿಪೂರ್ಣ ಮತ್ತು ಸರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ.
  2. ಪರೀಕ್ಷಾರ್ಥಿಯು ತನ್ನಿಷ್ಟದಂತೆ ಮುಕ್ತವಾಗಿ ಉತ್ತರಿಸಲು ಅವಕಾಶವಿದೆ.
  3. ಉತ್ತರಗಳ ಗುಣಮಟ್ಟ ಹಾಗೂ ನಿಖರತೆಯಲ್ಲಿ ವ್ಯತ್ಯಾಸ ಕಾಣಬಹುದು.

ಪ್ರಬಂಧ ವಿಧದ ಪ್ರಶ್ನೆಗಳ ವರ್ಗೀಕರಣ

  1. ನಿರ್ಬಂಧಿತ ಉತ್ತರದ ಪ್ರಶ್ನೆಗಳು: ಈ ಮಾದರಿ ಪ್ರಶ್ನೆಗಳಿಗೆ ವಿದ್ಯಾರ್ಥಿಯು ಮಿತವಾದ ಹಾಗೂ ಸೀಮಿತ ವ್ಯಾಪ್ತಿಯ ಉತ್ತರ ನೀಡುತ್ತಾನೆ. ನಿರ್ದಿಷ್ಠ ಸನ್ನಿವೇಶವನ್ನು ಆಧರಿಸಿ ವಿದ್ಯಾರ್ಥಿ ಉತ್ತರಿಸುತ್ತಾನೆ.

ಉದಾ: ಸಸ್ಯಗಳ ಎಲೆಗಳಲ್ಲಿ ನಡೆಯುವ ದ್ಯುತಿ ಸಂಶ್ಲೇಷಣಾ ಕ್ರಿಯೆಯನ್ನು 5-6 ವಾಕ್ಯಗಳಲ್ಲಿ ವಿವರಿಸಿ.

  1. ವಿವರವಾದ ಉತ್ತರದ ಪ್ರಶ್ನೆಗಳು: ಈ ಮಾದರಿಯ ಪ್ರಶ್ನೆಗಳನ್ನು ನೀಡಿದಾಗ ಉತ್ತರಿಸಲು ವಿದ್ಯಾರ್ಥಿಯ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ. ಅವನು ತನಗೆ ಮುಖ್ಯವೆನಿಸಿದ, ಸುಸಂಬದ್ಧವೆನಿಸಿದ ಅಂಶಗಳನ್ನು ಆಯ್ದುಕೊಂಡು ತನಗೆ ಇಷ್ಟವಾದ ರೀತಿಯಲ್ಲಿ ವ್ಯವಸ್ಥೆಗೊಳಿಸಿ ಉತ್ತರಿಸಬಹುದು.

ಉದಾ: ಇಂದಿನ ಪರೀಕ್ಷಾ ಪದ್ದತಿಯಲ್ಲಿರುವ ದೋಷಗಳನ್ನು ವಿವರಿಸಿ ಮತ್ತು ಪರೀಕ್ಷಾ ಪದ್ದತಿಯನ್ನು ಸುಧಾರಿಸಲು ಸೂಕ್ತ ಮಾರ್ಗೋಪಾಯಗಳನ್ನು ಸೂಚಿಸಿರಿ.

ಪ್ರಬಂಧ ವಿಧದ ಪ್ರಶ್ನೆಗಳ ಗುಣಗಳು:

  1. ಪ್ರಬಂಧ ವಿಧದ ಪರೀಕ್ಷೆ ರಚಿಸಲು ಹಾಗೂ ಬಳಸಲು ಸುಲಭವಾದುದು.
  2. ಪರೀಕ್ಷಾರ್ಥಿಯು ವಿಷಯವನ್ನು ವ್ಯವಸ್ಥೆಗೊಳಿಸುವ ಮತ್ತು ತರ್ಕಬದ್ದವಾಗಿ ವಿಷಯ ಮಂಡಿಸುವ ಸಾಮರ್ಥ್ಯವನ್ನು ಅಳೆಯುತ್ತದೆ.
  3. ಎಲ್ಲಾ ಶಾಲಾ ವಿಷಯಗಳಲ್ಲಿ ಪ್ರಾಯೋಗಿಕವಾಗಿ ಬಳಸಲು ಸೂಕ್ತವಾದ ಪರೀಕ್ಷಾ ವಿಧಾನವಾಗಿದೆ.
  4. ತಾರ್ಕಿಕ ಚಿಂತನೆ, ವಿಮರ್ಶಾತ್ಮಕ ಚಿಂತನೆ, ಕ್ರಮಬದ್ದ ವಿಷಯ ಮಂಡನೆ ಮುಂತಾದ ಸಾಮರ್ಥ್ಯಗಳನ್ನು ಪ್ರಬಂಧ ಮಾದರಿ ಪ್ರಶ್ನೆಗಳ ಮೂಲಕ ಬೆಳೆಸಬಹುದು.
  5. ಉತ್ತಮ ಓದುವ ಹವ್ಯಾಸಗಳನ್ನು ಬೆಳೆಸಲು ನೆರವಾಗುತ್ತದೆ.
  6. ವಿದ್ಯಾರ್ಥಿಗಳು ಸೃಜನಾತ್ಮಕವಾಗಿ ತಮ್ಮ ವಿಚಾರಗಳನ್ನು ಮಂಡಿಸಲು ಸಾಧ್ಯವಾಗುತ್ತದೆ.
  7. ಊಹಿಸುವ ಮೂಲಕ ಉತ್ತರಿಸಲು ಇದರಲ್ಲಿ ಅವಕಾಶವಿರುವುದಿಲ್ಲ. ಆಗದ,
  8. ಇತರ ಸಾಧನಗಳಿಂದ ಪರೀಕ್ಷಿಸಲು ಆಗದ, ಆದರೆ ಸುಸಂಗತವಾದ ಶೈಕ್ಷಣಿಕ ಗುರಿಗಳ ಸಾಧನೆಯನ್ನು ಪರೀಕ್ಷಿಸಬಹುದು.

ಪ್ರಬಂಧ ವಿಧದ ಪ್ರಶ್ನೆಗಳ ಮಿತಿಗಳು:

  1. ವಿವರವಾದ ಉತ್ತರ ಮಾದರಿ ಪ್ರಶ್ನೆಗಳನ್ನು ಕೇಳಿದಾಗ ಪಠ್ಯವಿಷಯದ ಎಲ್ಲಾ ಭಾಗಗಳಿಗೆ ಪ್ರಾತಿನಿಧ್ಯ ನೀಡಲು ಸಾಧ್ಯವಾಗುವುದಿಲ್ಲ. ಪರೀಕ್ಷಕನಿಗೆ ಯಾವ ವಿಷಯ ಭಾಗಗಳು ಮುಖ್ಯ ಎನಿಸುತ್ತದೆಯೋ ಅವುಗಳು ಮಾತ್ರ ಪ್ರಶ್ನೆ ಪತ್ರಿಕೆಯಲ್ಲಿ ಕಂಡುಬರುತ್ತದೆ.
  2. ಪ್ರಬಂಧ ಮಾದರಿ ಪರೀಕ್ಷೆ ಕಡಿಮೆ ಸಮಂಜಸತೆ ಹಾಗೂ ವಿಶ್ವಸನೀಯತೆ ಹೊಂದಿರುವುದು ಕಂಡುಬರುತ್ತದೆ. ಏಕೆಂದರೆ,

Ø  ಪಠ್ಯ ವಿಷಯದ ಸೀಮಿತ ವಿಷಯ ಒಳಗೊಂಡಿರುವುದು.

Ø  ಅಂಕ ನೀಡುವಲ್ಲಿ ವ್ಯಕ್ತಿನಿಷ್ಠತೆ.

Ø  ಉತ್ತರದ ಉದ್ದ, ವ್ಯಾಕರಣ, ಕೈಬರಹ, ಕಾಗುಣಿತ, ಅಂದವಾಗಿ ಬರೆದಿರುವುದು ಇಂತಹ ಅಂಶಗಳುಇ ಮೌಲ್ಯಮಾಪನದ ಮೇಲೆ ಪ್ರಭಾವ ಬೀರುತ್ತವೆ.

Ø  ಕೆಲವೊಮ್ಮೆ ಉತ್ತಮ ಪಠ್ಯವಿಷಯದ ಅಂಶಗಳಿರದೆ ಉತ್ತಮ ಶಾಬ್ಧಿಕ ಸಾಮರ್ಥ್ಯ ಉತ್ತರಗಳಲ್ಲಿ ಕಂಡುಬರುತ್ತದೆ.

Ø  ವಿವಿಧ ವಿದ್ಯಾರ್ಥಿಗಳ ಉತ್ತರಗಳ ಹೋಲಿಕೆ ನಡೆಯುತ್ತದೆ. ಉದಾ: ಪ್ರತಿಭಾನ್ವಿತರು ಹಾಗೂ ಮಂದಗತಿಯಲ್ಲಿ ಕಲಿಯುವವರ ಉತ್ತರಗಳು.

Ø  ಮೌಲ್ಯಮಾಪಕರ ಪೂರ್ವಗ್ರಹ ಪೀಡಿತ ನಿರ್ಣಯ.

Ø  ಪರೀಕ್ಷಕರ ಚಿತ್ತ.

Ø  ಪ್ರಶ್ನೆಗಳಲ್ಲಿ ಅಸ್ಪಷ್ಟ ಪದಗಳ ಬಳಕೆಯಿಂದ ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳಬಹುದು. ಇದರಿಂದ ಭಿನ್ನ ರೀತಿಯ ಉತ್ತರಗಳು ಬರುವ ಸಾಧ್ಯತೆಯಿದೆ.

  1. ವಿದ್ಯಾರ್ಥಿಗಳಿಗೆ ಬರೆಯಲು ಹಾಗೂ ಮೌಲ್ಯಮಾಪಕರಿಗೆ ಮೌಲ್ಯಮಾಪನ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ ಹಾಗೂ ವೆಚ್ಚದಾಯಕ ಪರೀಕ್ಷಾ ವಿಧಾನ.
  2. ಪರಿಣಿತ ವಿಷಯ ಶಿಕ್ಷಕರು ಮಾತ್ರ ಮೌಲ್ಯಮಾಪನ ಮಾಡಬಹುದು.

ಪ್ರಬಂಧ ವಿಧದ ಪ್ರಶ್ನೆಗಳ ಸುಧಾರಣೆಗೆ ಸಲಹೆಗಳು:

  1. ಪ್ರಬಂಧ ಪ್ರಶ್ನೆಗಳನ್ನು ರೂಪಿಸುವಾಗ ಹೆಚ್ಚು ಆಲೋಚನೆ ಮಾಡಿ ಸಾಕಷ್ಟು ಸಮಯ ತೆಗೆದುಕೊಂಡು ರೂಪಿಸಬೇಕು. ರೂಪಿಸಿದ ನಂತರ ಅವುಗಳನ್ನು ಮರುಪರೀಕ್ಷಿಸಿ ಪರಿಷ್ಕರಿಸಬೇಕು. ಆಗ ಮಾತ್ರ ಈ ಪ್ರಶ್ನೆಗಳ ಸಮಂಜಸತೆಯನ್ನು ಹೆಚ್ಚಿಸಲು ಸಾಧ್ಯ.
  2. ನಾವು ವಿದ್ಯಾರ್ಥಿಗಳಲ್ಲಿ ಏನನ್ನು ನಿಖರವಾಗಿ ಬಯಸುತ್ತಿದ್ದೇವೆಯೋ ಅದನ್ನೇ ನಾವು ನೀಡುವ ಪ್ರಶ್ನೆ ಅಳೆಯುವಂತಿರಬೇಕು.
  3. ಉತ್ತಮವಾಗಿ ರೂಪಿತವಾಗಿರುವ ಪ್ರಬಂಧ ಮಾದರಿ ಪ್ರಶ್ನೆಗಳನ್ನು ಕೇಳಿದಾಗ ಅದರಲ್ಲಿ

Ø  ಉತ್ತರದ ವ್ಯಾಪ್ತಿ ಸ್ಪಷ್ಟವಾಗಿರಬೇಕು.

Ø  ದ್ವಂದ್ವಾರ್ಥವಿರುವ, ಅಸ್ಪಷ್ಟ ಅರ್ಥದ ಪದಗಳನ್ನು ಬಳಸಕೂಡದು.

Ø  ಸ್ಪಷ್ಟ ನಿರ್ದೇಶನಗಳನ್ನೊಳಗೊಂಡಿರಬೇಕು.

Ø  ನಿಗದಿತ ಸಮಯದಲ್ಲಿ ಉತ್ತರಿಸಲು ಸಾಧ್ಯವಾಗುವಂತಿರಬೇಕು.

  1. ಪ್ರಬಂಧ ಮಾದರಿ ಪ್ರಶ್ನೆಗಳಲ್ಲಿ ಪರ್ಯಾಯ ಪ್ರಶ್ನೆಗಳ ಆಯ್ಕೆಗೆ ಅವಕಾಶ ನೀಡಬಾರದು. ಎಲ್ಲಾ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಉತ್ತರಿಸುವಂತಿರಬೇಕು ಏಕೆಂದರೆ ಸಮಾನ ಕ್ಲಿಷ್ಟತೆಯ ಮಟ್ಟವನ್ನು ಹೊಂದಿರುವ ಎರಡು ಪ್ರಬಂಧ ವಿಧ ಪ್ರಶ್ನೆಗಳನ್ನು ರೂಪಿಸುವುದು ಕಷ್ಟ. ಅಲ್ಲದೆ ಎರಡು ಭಿನ್ನ ಪ್ರಶ್ನೆಗಳ ಉತ್ತರಗಳ ತುಲನೆ ಅಸಾಧ್ಯ. ಆದ್ದರಿಂದ ಪರ್ಯಾಯ ಪ್ರಶ್ನೆಗಳನ್ನು ಆಯ್ದು ಉತ್ತರಿಸಲು ಅವಕಾಶ ನೀಡಬಾರದು.
  2. ಇದು ಸಾಮರ್ಥ್ಯದ ಪರೀಕ್ಷೆಯಾಗಬೇಕೆ ಹೊರತು ವೇಗದಲ್ಲಿ ಉತ್ತರಿಸುವ ಪರೀಕ್ಷೆಯಾಗಬಾರದು.
  3. ಸಾಮರ್ಥ್ಯದ ವಿವಿಧ ಸ್ತರಗಳಲ್ಲಿ ಇರುವ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಪ್ರಕಟಿಸಲು ಅನುಕೂಲ ಆಗುವಂತೆ ಕ್ಲಿಷ್ಟತೆಯ ವಿವಿಧ ಮಟ್ಟಗಳಲ್ಲಿ ಇರುವ ಪ್ರಶ್ನೆಗಳನ್ನು ಪ್ರಶ್ನೆ ಪತ್ರಿಕೆ ಒಳಗೊಂಡಿರಬೇಕು.
  4. ಮೌಲ್ಯ ನಿರ್ಧಾರಕ್ಕಾಗಿ ಅಂಕ ಸೂಚಿಯನ್ನು ರೂಪಿಸಿಕೊಂಡು ಮೌಲ್ಯಮಾಪನ ಮಾಡುವುದರಿಂದ ವ್ಯಕ್ತಿನಿಷ್ಠತೆ ಕಡಿಮೆಯಾಗುತ್ತದೆ.
  5. ಪ್ರಬಂಧ ಮಾದರಿ ಪ್ರಶ್ನೆಗಳನ್ನು ಉತ್ತರಿಸಲು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಬೇಕು.
  6. ಪ್ರಬಂಧ ಮಾದರಿ ಉತ್ತರಗಳನ್ನು ಇಬ್ಬರು ಮೌಲ್ಯಮಾಪಕರಿಂದ ಮೌಲ್ಯ ನಿರ್ಧಾರ ಮಾಡಿಸಿ, ಆ ಅಂಕಗಳ ಸರಾಸರಿಯನ್ನು ಪರಿಗಣಿಸುವುದು ಸೂಕ್ತ.

2. ಲಘು ಉತ್ತರ ಮಾದರಿ ಪರೀಕ್ಷೆ:

             ಈ ಮಾದರಿ ಪರೀಕ್ಷೆ ಈಗ ಹೆಚ್ಚು ಹೆಚ್ಚಾಗಿ ಶಿಕ್ಷಣ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಈ ಮಾದರಿಯ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು 2 ಅಥವಾ 3 ವಾಕ್ಯಗಳಲ್ಲಿ ಅಥವಾ ಕೆಲವೇ ಪದಗಳಲ್ಲಿ ಉತ್ತರಿಸಬೇಕಾಗುತ್ತದೆ. ಇಂತಹ ಪ್ರಶ್ನೆಗಳಿಗೆ ವಿದ್ಯಾರ್ಥಿಯು ಯೋಚಿಸಿ ಸಮಂಜಸವಾದ ಉತ್ತರಗಳನ್ನು ಸಂಕ್ಷಿಪ್ತವಾಗಿ ಬರೆಯುತ್ತಾನೆ. ಇಂತಹ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಬರೆದ ಉತ್ತರಗಳು ನಿಖರತೆಗೆ ಹತ್ತಿರವಾಗಿರುತ್ತವೆ.  ಶಿಕ್ಷಕರು ಉತ್ತರಗಳನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ. ಈ ಪರೀಕ್ಷೆಯಲ್ಲಿನ ಪ್ರಶ್ನೆಗಳು ನೇರವಾದ, ಸ್ಪಷ್ಟ, ನಿರ್ದಿಷ್ಟ ಹಾಗೂ ಸಂಕ್ಷಿಪ್ತ ಉತ್ತರಗಳನ್ನು ಬಯಸುತ್ತವೆ.

     ಉದಾ: ಉಸಿರಾಟ ಎಂದರೇನು? ಗುಣವಾಚಕ ಎಂದರೇನು? ಸಾಂದ್ರತೆ ಎಂದರೇನು? ದ್ಯುತಿಸಂಶ್ಲೇಷಣೆ ಎಂದರೇನು? ರಾಸಾಯನಿಕ ಕ್ರಿಯೆ ಎಂದರೇನು? ಇತ್ಯಾದಿ.

ಲಘು ಉತ್ತರ ಮಾದರಿ ಪರೀಕ್ಷೆಯ ಗುಣಗಳು:

  1. ಪಠ್ಯ ವಿಷಯದ ಎಲ್ಲಾ ಭಾಗಗಳಿಗೂ ಪ್ರಾತಿನಿಧ್ಯ ನೀಡಲು ಸಾಧ್ಯವಾಗುತ್ತದೆ.
  2. ಪ್ರತಿ ಪ್ರಶ್ನೆಗೂ ನಿರ್ದಿಷ್ಟ ಉತ್ತರವಿರುವುದರಿಂದ ಮೌಲ್ಯಮಾಪನ ವಸ್ತುನಿಷ್ಟವಾಗಿರುತ್ತದೆ.
  3. ಈ ಪ್ರಶ್ನೆಗಳ ರಚನೆ ಸುಲಭವಾದುದು.
  4. ಜ್ಞಾನ, ಗ್ರಹಿಕೆ, ಅನ್ವಯ ಮತ್ತು ಸಮಸ್ಯೆ ಪರಿಹಾರ ಕೌಶಲಗಳನ್ನು ಲಘು ಉತ್ತರ ಮಾದರಿ ಪ್ರಶ್ನೆಗಳಿಂದ ಅಳೆಯಬಹುದು. 
  5. ಪ್ರಶ್ನೆಗಳಿಗೆ ಉತ್ತರವು ಸಂಕ್ಷಿಪ್ರವಾಗಿರುವುದರಿಂದ ಅನವಶ್ಯಕವಾಗಿ ಬರೆಯಲು ಅವಕಾಶವಿರುವುದಿಲ್ಲ.
  6. ಪ್ರಬಂಧ ಮಾದರಿ ಪ್ರಶ್ನೆಗಳಿಗಿಂತ ವಿದ್ಯಾರ್ಥಿಗಳು ಸುಲಭವಾಗಿ ಉತ್ತರಿಸಬಹುದಾದ ಪರೀಕ್ಷೆ.

ಲಘು ಉತ್ತರ ಮಾದರಿ ಪರೀಕ್ಷೆಯ ಮಿತಿಗಳು:

  1. ವಿದ್ಯಾರ್ಥಿಗಳಲ್ಲಿ ಭಾಷಾ ಸಾಮರ್ಥ್ಯ, ಸೃಜನಶೀಲ ಬರವಣಿಗೆ ಮತ್ತು ವಿಮರ್ಶಾ ಶಕ್ತಿ ಬೆಳೆಸಲು ಈ ಮಾದರಿ ಪರೀಕ್ಷೆ ಸೂಕ್ತವಲ್ಲ.
  2. ಕಂಠಪಾಠವನ್ನು ಪ್ರೋತ್ಸಾಹಿಸುತ್ತದೆ. ವಿವಿಧ ಘಟನಾವಳಿಗಳು, ದಿನಾಂಕಗಳು, ಸ್ಥಳ, ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಕಂಠಪಾಠ ಮಾಡುತ್ತಾರೆ.
  3. ಅನುಭವಿ ಮತ್ತು ಪರಿಣಿತ ಶಿಕ್ಷಕರು ಮಾತ್ರ ಉತ್ತಮ ಪ್ರಶ್ನೆಗಳನ್ನು ರೂಪಿಸಬಲ್ಲರು.
  4. ಪ್ರಶ್ನೆಪತ್ರಿಕೆ ರಚನೆ ಮತ್ತು ಮುದ್ರಣಕ್ಕೆ ಹೆಚ್ಚು ಕಾಲ, ಹಣ ಹಾಗೂ ಶ್ರಮದ ಅವಶ್ಯಕತೆಯಿದೆ.

3. ವಸ್ತುನಿಷ್ಠ ಪರೀಕ್ಷೆ:

      “ವಸ್ತುನಿಷ್ಠ ಪರೀಕ್ಷೆಯು ಒಂದು ಲಿಖಿತ ಮಾದರಿ ಪರೀಕ್ಷೆಯಾಗಿದ್ದು, ಇಲ್ಲಿ ಪರೀಕ್ಷಾರ್ಥಿಯು ಒಂದು ಅಥವಾ ಹೆಚ್ಚಿನ ಪರ್ಯಾಯ ಉತ್ತರಗಳಿಂದ ಒಂದು ಸರಿಯಾದ ಉತ್ತರಗಳನ್ನು ಆಯ್ಕೆ ಮಾಡುವ ಮೂಲಕ ಅಥವಾ ಒಂದು ಅಥವಾ ಎರಡು ಪದಗಳನ್ನು ಪೂರೈಸುವ ಮೂಲಕ ಉತ್ತರಿಸುವ ಮತ್ತು ಮೌಲ್ಯಮಾಪನ ಮಾಡುವಾಗ ವಸ್ತುನಿಷ್ಠ ನಿರ್ಣಯ ಕೈಗೊಳ್ಳಬೇಕಾದ ಪರೀಕ್ಷೆಯಾಗಿದೆ.”

ವಸ್ತುನಿಷ್ಠತೆ ಮಾದರಿ ಪ್ರಶ್ನೆಗಳು:

        ವಿದ್ಯಾರ್ಥಿಯ ಜ್ಞಾನ, ಗ್ರಹಿಕೆ, ಅನ್ವಯ ಹಾಗೂ ಅವನು ಸಾಧಿಸಿರುವ ಪ್ರಗತಿಯನ್ನುಅಳೆಯುವ ಸಾಧನಗಳಾಗಿವೆ. ಇವು ಪ್ರಬಂಧ ಪರೀಕ್ಷೆಗಳಿಗಿಂತಲೂ ಹೆಚ್ಚು ವಿಶ್ವಸನೀಯ, ವ್ಯಾಪಕ ಹಾಗೂ ಸಂಜಸವಾಗಿದ್ದು ಸಮಯದ ದೃಷ್ಠಿಯಿಂದ ಮಿತವ್ಯಯಕರ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ವಿಷಯದ ಎಲ್ಲಾ ಭಾಗಗಳಿಂದಲೂ ಪ್ರಶ್ನೆಗಳನ್ನು ಕೇಳಲು ಅವಕಾಶವಿದೆ ಮತ್ತು ಕಂಠಪಾಠಕ್ಕೆ ಅವಕಾಶವಿರುವುದಿಲ್ಲ.  

2.4.2: ವಸ್ತುನಿಷ್ಠ ಪರೀಕ್ಷೆಯ ವಿಧಗಳು

ಬಹು ಆಯ್ಕೆ ಮಾದರಿ ಪ್ರಶ್ನೆಗಳು

     ಬಹು ಆಯ್ಕೆ ಮಾದರಿ ಪ್ರಶ್ನೆಯಲ್ಲಿ ಎರಡು ಭಾಗಗಳಿರುತ್ತವೆ.

     ಅ) ಸಮಸ್ಯಾ ಹೇಳಿಕೆಯನ್ನೊಳಗೊಂಡ ಕಾಂಡ ಮತ್ತು

     ಆ) ಸೂಚಿತ ಉತ್ತರಗಳನ್ನೊಳಗೊಂಡ ಅನುಕ್ರಿಯೆಗಳು ಅಥವಾ ಆಯ್ಕೆಗಳು

     ಈ ಪರ್ಯಾಯ ಉತ್ತರಗಳಲ್ಲಿ ಒಂದು ಮಾತ್ರ ಸರಿಯಾದ ಉತ್ತರವಾಗಿರುತ್ತದೆ. ಉಳಿದವುಗಳನ್ನು ವಿಚಲಿತಗೊಳಿಸುವ ಉತ್ತರಗಳು ಎನ್ನುವರು. ಕಾಂಡವನ್ನು ಒಂದು ನೇರವಾದ ಪ್ರಶ್ನೆಯ ರೂಪದಲ್ಲಿ ಅಥವಾ ಒಂದು ಅಪೂರ್ಣ ವಾಕ್ಯದ ರೂಪದಲ್ಲಿ ನೀಡಲಾಗುವುದು. ಕೊಟ್ಟಿರುವ ಪರ್ಯಾಯ ಉತ್ತರಗಳ ಪಟ್ಟಿಯಿಂದ ವಿದ್ಯಾರ್ಥಿಯು ಸೂಕ್ತವಾದ ಒಂದು ಉತ್ತರವನ್ನು ಆಯ್ದು ಸೂಚಿಸಬೇಕಾಗುತ್ತದೆ.

  1. ನೇರ ಪ್ರಶ್ನೆ ಮಾದರಿ ಪರೀಕ್ಷೆ:

ಕಾಂಡದ ರೂಪದಲ್ಲಿ ಒಂದು ನಿರ್ದಿಷ್ಟ ಪ್ರಶ್ನೆಯನ್ನು ಕೇಳಿ ಕೊಟ್ಟಿರುವ ಪರ್ಯಾಯಗಳಲ್ಲಿ ಒಂದು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ ಉತ್ತರಿಸಲು ಸೂಚಿಸಲಾಗುವುದು.

ಕಾಂಡ: 1) ಸಿಡುಬಿಗೆ ಚುಚ್ಚುಮದ್ದು ಕಂಡುಹಿಡಿದ ವಿಜ್ಞಾನಿ ಯಾರು?

ಅನುಕ್ರಿಯೆಗಳು: (ಅ) ಜೊಸೆಫ್‌ ಲಿಸ್ಟರ್‌ ‌   (ಆ) ಎಡ್ವರ್ಡ ಜನ್ನರ್   (ಇ) ಅಲೆಗ್ಸಾಂಡರ್‌ ಪ್ಲೆಮಿಂಗ್‌

‌                         (ಈ) ಲೂಯಿಸ್‌ ಪ್ಯಾಶ್ಚರ್

  1. ಅಪೂರ್ಣ ವಾಕ್ಯ ಮಾದರಿ ಪರೀಕ್ಷೆ:

(1)   ಎರೆಹುಳು ಕಂಡುಬರುವ ಅಕಶೇರುಕಗಳ ಗುಂಪು ______________________

  (ಅ) ಪೋರಿಫೆರಾ ‌   (ಆ) ಮೃದ್ವಂಗಿಗಳು   (ಇ) ವಲಯ ವಂತಕಗಳು ‌  (ಈ) ಸಂದಿಪದಿಗಳು

(2) ಇತಿಹಾಸ ಪ್ರಸಿದ್ದ ತಾಜ್‌ ಮಹಲ್‌ ಇರುವ ಸ್ಥಳ _____________________

      (ಅ) ದೆಹಲಿ   (ಆ) ಆಗ್ರ   (ಇ) ಗ್ವಾಲಿಯರ್ ‌  (ಈ) ಮಥುರಾ

     3. ಸಾದೃಶ್ಯ ಮಾದರಿ ಪರೀಕ್ಷೆ:

           ಈ ಮಾದರಿ ಪರೀಕ್ಷೆಯಲ್ಲಿ ಮೊದಲನೆ ಎರಡು ಪದಗಳಲ್ಲಿರುವ ಸಂಬಂಧವನ್ನು ಕಂಡುಕೊಂಡು, ಅದನ್ನು ಅನ್ವಯಿಸಿ ಮೂರು ಮತ್ತು ನಾಲ್ಕನೇ ಪದಗಳಲ್ಲಿರುವ ಸಂಬಂಧ ಗ್ರಹಿಸಿ ಕೊಟ್ಟಿರುವ ಪರ್ಯಾಯ ಉತ್ತರಗಳಲ್ಲಿ ನಾಲ್ಕನೇ ಪದವನ್ನು ಆಯ್ಕೆ ಮಾಡಬೇಕು.

(1)    ದೂರದರ್ಶಕ: ಗೆಲಿಲಿಯೋ : : ದೂರವಾಣಿ:

        (ಅ) ಮಾರ್ಕೋನಿ     (ಆ) ಎಡಿಸನ್     (ಇ) ಗ್ರಾಹಂಬೆಲ್     (ಈ) ಫ್ಯಾರಡೆ

ಬಹು ಆಯ್ಕೆ ಪ್ರಶ್ನೆಗಳ ಗುಣಗಳು:

  1. ಈ ಪ್ರಶ್ನೆಗಳ ಸಹಾಯದಿಂದ ವಿದ್ಯಾರ್ಥಿಗಳ ಸ್ಮರಣೆ, ಗ್ರಹಿಕೆ, ಅನ್ವಯ, ಸಾಮರ್ಥ್ಯ, ತಾರ್ಕಿದ ಸಾಮರ್ಥ್ಯ, ನಿರ್ಣಯ ಕೈಗೊಳ್ಳುವ ಸಾಮರ್ಥ್ಯ ಮುಂತಾದವುಗಳನ್ನು ಸೂಕ್ತ ಕಲಿಕೆಯ ಫಲಗಳ ರೂಪದಲ್ಲಿ ಅಳೆಯಲು ಸಾಧ್ಯವಾಗುತ್ತದೆ.
  2. ವಸ್ತುನಿಷ್ಠವಾಗಿ ಮತ್ತು ವೇಗವಾಗಿ ಮೌಲ್ಯಮಾಪನ ಮಾಡಬಹುದು. ಯಂತ್ರಗಳ ಸಹಾಯದಿಂದಲೇ ಮೌಲ್ಯಮಾಪನ ಮಾಡಬಹುದು (OMR ಶೀಟ್‌ ಬಳಸಿ ಇತ್ತೀಚೆಗೆ ಯಂತ್ರಗಳ ಸಹಾಯದಿಂದ ಮೌಲ್ಯಮಾಪನ ಮಾಡಲಾಗುತ್ತಿದೆ.)
  3. ಪರ್ಯಾಯ ಉತ್ತರಗಳನ್ನು ಮಾರ್ಪಡಿಸುವ ಮೂಲಕ ಪರೀಕ್ಷೆಯ ಕಠಿಣತೆಯ ಮಟ್ಟವನ್ನು ಬದಲಾಯಿಸಬಹುದು.
  4. ಈ ಪ್ರಶ್ನೆಗಳು ಹೆಚ್ಚಿನ ಮಟ್ಟದ ವಿಶ್ವಸನೀಯತೆ ಹೊಂದಿರುತ್ತವೆ.
  5. ಉತ್ತರಿಸಲು ಸುಲಭ, ಅತ್ಪಷ್ಟತೆಗೆ ಹೆಚ್ಚಿನ ಅವಕಾಶವಿರುವುದಿಲ್ಲ ಮತ್ತು ವಿದ್ಯಾರ್ಥಿಗಳು ಹೆಚ್ಚಾಗಿ ಇಚ್ಚಿಸುವ ಪರೀಕ್ಷೆಯಾಗಿದೆ.
  6. 4 ಅಥವಾ 5 ಪರ್ಯಾಯ ಉತ್ತರಗಳನ್ನು ನೀಡಿ ಉತ್ತರ ಊಹಿಸುವುದನ್ನು ಕಡಿಮೆ ಮಾಡಬಹುದು.
  7. ಹಲವಾರು ವಿಷಯಗಳಿಗೆ ಬಳಸಬಹುದಾದ ಪರೀಕ್ಷಾ ವಿಧಾನವಾಗಿದೆ.
  8. ಜೊಡಣೆಯ   ಪರೀಕ್ಷೆಗಳಂತೆ ಹಲವಾರು ಪರ್ಯಾಯ ಸಂಬಂಧಗಳನ್ನು ಕಂಡುಕೊಳುವ ಅವಶ್ಯಕತೆಯಿಲ್ಲ.

ಬಹು ಆಯ್ಕೆ ಪ್ರಶ್ನೆಗಳ ಮಿತಿಗಳು

  1. ಈ ಪ್ರಶ್ನೆಗಳನ್ನು ರೂಪಿಸುವುದು ಕಷ್ಟದಾಯಕ, ಶಿಕ್ಷಕರು ಪರ್ಯಾಯ ಉತ್ತರಗಳನ್ನು ಹುಡುಕುವುದು ಸುಲಭದ ಕೆಲಸವಲ್ಲ, ಇದಕ್ಕೆ ಹೆಚ್ಚಿನ ಕೌಶಲ್ಯ ಹಾಗೂ ಸಮಯ ಬೇಕಾಗುತ್ತದೆ.
  2. ಹೆಚ್ಚಿನ ಶಿಕ್ಷಕರು ರೂಪಿಸುವ ಬಹು ಆಯ್ಕೆ ಪ್ರಶ್ನೆಗಳು ಕೇವಲ ಸ್ಮರಣೆಯನ್ನು ಪರೀಕ್ಷಿಸುವಂತಿರುತ್ತವೆ.
  3. ವಿಷಯ ನಿರೂಪಣಾ ಸಾಮರ್ಥ್ಯ ಮತ್ತು ಅಭಿವ್ಯಕ್ತಿ ಸಾಮರ್ಥ್ಯ ಅಳೆಯಲು ಇವುಗಳಿಂದ ಸಾಧ್ಯವಿಲ್ಲ.
  4. ಇವುಗಳನ್ನು ಮುದ್ರಿಸಲು ಹೆಚ್ಚು ಜಾಗ ಬೇಕಾಗುತ್ತದೆ ಮತ್ತು ಮುದ್ರಣ ವೆಚ್ಚ ಹೆಚ್ಚಾಗುತ್ತದೆ.

ಬಹು ಆಯ್ಕೆಯ ಪ್ರಶ್ನೆಗಳನ್ನು ರಚಿಸಲು ಸಲಹೆಗಳು

  1. ಕಾಂಡದ ಭಾಗ ಸಮಸ್ಯೆಯ ಮುಖ್ಯಾಂಶಗಳನ್ನೊಳಗೊಂಡಿರಬೇಕು. ಕಾಂಡ ಭಾಗದಲ್ಲಿರುವ ಸಮಸ್ಯೆಯ ಹೇಳಿಕೆ ಕ್ರಿಯಾ ಪದವನ್ನೊಳಗೊಂಡಿರಬೇಕು.

 ಉದಾ:

ಅಸಮರ್ಪಕ ಕಾಂಡ: ಸಸ್ಯಗಳಲ್ಲಿ ಸಂತಾನೋತ್ಪತ್ತಿ ___________________

ಉತ್ತಮ ಕಾಂಡ; ಸಸ್ಯಗಳಲ್ಲಿ ಸಂತಾನೊತ್ಪತ್ತಿಯ ಪ್ರಮುಖ ಭಾಗ __________________

  1. ಕೊಟ್ಟಿರುವ ಪರ್ಯಾಯ ಉತ್ತರಗಳಲ್ಲಿ ಪದಗಳ ಪುನರಾವರ್ತನೆ ತಡೆಯಿರಿ. ಇದರಿಂದ ಅವುಗಳನ್ನು ಓದುವ ಸಮಯ ಮತ್ತು ಜಾಗ ಉಳಿಯುತ್ತದೆ.

ಅಸಮರ್ಪಕ ಉದಾ: ಕಾಡು ನಾಶವಾಗುತ್ತಿರುವುದು _________________________

                              ಎ) ಜನಗಳು ಮರಗಳನ್ನು ಕಡಿಯುತ್ತಿರುವುದರಿಂದ

                              ಬಿ) ಮಳೆ ಸರಿಯಾದ ಕಾಲಕ್ಕೆ ಬಾರದೇ ಇರುವುದರಿಂದ

                              ಸಿ) ವನ್ಯಜೀವಿಗಳು ನಶಿಸುತ್ತಿರುವುದರಿಂದ

                              ಡಿ) ಜಾಗತಿಕ ಉಷ್ಣತೆ ಹೆಚ್ಚಾಗುತ್ತಿರುವುದರಿಂದ

         ಉತ್ತಮ ಹೇಳಿಕೆ ಪ್ರಶ್ನೆ: ಕಾಡು ನಾಶವಾಗಲು ಪ್ರಮುಖ ಕಾರಣವೇನೆಂದರೆ,

                            ಎ) ಮರಗಳ ಕಡಿಯುವಿಕೆ

                            ಬಿ) ಮಳೆಯ ಕೊರತೆ

                            ಸಿ) ವನ್ಯ ಜೀವಿಗಳ ನಾಶ

                           ಡಿ) ಜಾಗತಿಕ ಉಷ್ಣತೆಯಲ್ಲಿ ಹೆಚ್ಚಳ

  1. ಅಪೂರ್ಣ ಹೇಳಿಕೆ ಮಾದರಿ ಬಹು ಆಯ್ಕೆ ಪ್ರಶ್ನೆ ಬಳಸಿದಾಗ, ಆಯ್ಕೆಯ ಉತ್ತರ ಹೇಳಿಕೆಯ ಕೊನೆಯಲ್ಲಿ ಬರುವಂತಿರಬೇಕು.

ಉದಾ: ಸಂಖ್ಯಾಕ್ಷೀಣ ವಿಭಜನೆ ಎಂದು ಕರೆಯುವ ಕೋಶ ವಿಭಜನೆ _________________

          ಎ) ಮಿಯಾಸಿಸ್‌‌     ಬಿ) ಮೈಟಾಸಿಸ್‌      ಸಿ) ಇಂಟರ್‌ ಫೇಸ್‌      ಡಿ) ಟಿಲೋಫೇಸ್

    4.   ಕಾಂಡದಲ್ಲಿರುವ ಪ್ರಶ್ನೆಗೆ ಒಂದೇ ಒಂದು ಖಚಿತವಾದ ಉತ್ತರವಿರಬೇಕು.

         ಅಸಮರ್ಪಕ ಉದಾ: ವಾಯು ಮಾಲಿನ್ಯಕ್ಕೆ ಕಾರಣ

                             ಎ) ಕಾರ್ಖಾನೆಗಳು   ಬಿ) ವಾಹನಗಳು   ಸಿ) ಧೂಳು   ಡಿ) ಮನೆಗಳಿಂದ ಬರುವ ಹೊಗೆ

        ಉತ್ತಮ ಹೇಳಿಕೆ: ಆಮ್ಲ ಮಳೆಗೆ ಕಾರಣವಾಗುವ ಕಾರ್ಖಾನೆಗಳಿಂದ ಹೊರಹೊಮ್ಮುವ ಪ್ರಮುಖ   

                                 ರಾಸಾಯನಿಕವೆಂದರೆ,

                     ಎ) ನೈಟ್ರಸ್‌ ಆಕ್ಸೈಡ್‌         ‌          ಬಿ) ಹೈಡ್ರೋ ಕ್ಲೋರಿಕ್‌ ಆಮ್ಲ

                     ಸಿ) ಸೋಡಿಯಂ ಹೈಡ್ರಾಕ್ಸೈಡ್‌    ಡಿ) ಅಮೋನಿಯಂ ಹೈಡ್ರಾಕ್ಸೈಡ್

  5. ಪರ್ಯಾಯ ಉತ್ತರಗಳಲ್ಲಿ ತುಂಬಾ ತಾಂತ್ರಿಕವಾದ ಪದಗಳನ್ನು ಬಳಸಬೇಡಿ.

  6.  ಆಯ್ಕೆ ಪಟ್ಟಿಯಲ್ಲಿರುವ ಸರಿ ಉತ್ತರವನ್ನು ಸುಲಭವಾಗಿ ಗುರುತಿಸುವಂತೆ ಇರಬಾರದು.

      ಉದಾ: ಭಾರತದ ಉತ್ತರಭಾಗದಲ್ಲಿರುವ ಯಾವ ರಾಜ್ಯ “ಗೋಧಿ ಖಣಜ” ಎಂದು ಪ್ರಸಿದ್ದಿಯಾಗಿದೆ.

                 ಎ) ತಮಿಳುನಾಡು   ಬಿ) ಆಂಧ್ರ ಪ್ರದೇಶ   ಸಿ) ಪಂಜಾಬ್‌   ಡಿ) ಪಶ್ಚಿಮ ಬಂಗಾಳ

     ಇಲ್ಲಿ ಪಂಜಾಬ್‌ ಎಂಬುದನ್ನು ವಿದ್ಯಾರ್ಥಿ ಸುಲಭವಾಗಿ ಗುರುತಿಸಬಹುದಾಗಿದೆ.

 

  1. ವಿದ್ಯಾರ್ಥಿಗಳ ಭಾಷಾ ಮಟ್ಟಕ್ಕೆ ಸೂಕ್ತವಾದ ಪದಗಳನ್ನು ಬಳಸಿ ಪ್ರಶ್ನೆ ರೂಪಿಸಬೇಕು.
  2. ಆಯ್ಕೆಗಳಲ್ಲಿ ʼಮೇಲಿನ ಎಲ್ಲವೂʼ ಎಂಬ ಉತ್ತರವನ್ನು ಸಾಧ್ಯವಾದಷ್ಟು ಬಳಸಬಾರದು. ʼಮೇಲಿನ ಯಾವುದೂ ಅಲ್ಲʼ ಎಂಬ ಉತ್ತರವನ್ನು ಕೆಲವೊಮ್ಮೆ ಮಾತ್ರ ಬಳಸಬಹುದು. ಗೊಂದಲಕ್ಕೆ ಅವಕಾಶವಿಲ್ಲದಂತೆ ಎಚ್ಚರ ವಹಿಸಿರಿ.
  3. ಕನಿಷ್ಠ 4 ರಿಂದ 5 ಆಯ್ಕೆಗಳನ್ನು ಬಳಸಬೇಕು. ಹೆಚ್ಚು ಪರ್ಯಾಯ ಉತ್ತರಗಳಿದ್ದಷ್ಟೂ ಪ್ರಶ್ನೆಯ ವಿಶ್ವಸನೀಯತೆ ಹೆಚ್ಚಾಗುತ್ತದೆ. ಹೆಚ್ಚು ಆಯ್ಕೆಗಳನ್ನು ಬಳಸುವಾಗ ಪರೀಕ್ಷಿಸುವ ವಿದ್ಯಾರ್ಥಿಗಳ ವಯೋಮಾನ, ಪರೀಕ್ಷಿಸುವ ವಿಷಯದ ಸ್ವರೂಪ ಮತ್ತು ಪರೀಕ್ಷೆಗೆ ದೊರೆಯುವ ಸಮಯವನ್ನು ಗಮನದಲ್ಲಿಟ್ಟುಕೊಂಡಿರಬೇಕು.
  4. ಆಯ್ಕೆಗಳ ಪಟ್ಟಿಯಲ್ಲಿ ಸರಿಯಾದ ಉತ್ತರದ ಸ್ಥಾನ ಪ್ರಶ್ನೆಯಿಂದ ಪ್ರಶ್ನೆಗೆ ಯಾದೃಚ್ಛಿಕ ರೀತಿಯಲ್ಲಿ ಬದಲಾಗುತ್ತಿರಬೇಕು.

ಪೂರೈಕೆ ಮಾದರಿ /ಭರ್ತಿ ಮಾಡುವ ವಿಧದ ಪ್ರಶ್ನೆಗಳು

         ಈ ಮಾದರಿ ಪ್ರಶ್ನೆಗಳಲ್ಲಿ ವಿದ್ಯಾರ್ಥಿಗಳಿಗೆ ಅಪೂರ್ಣ ವಾಕ್ಯಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಯು ಸೂಕ್ತ ಪದ, ಚಿಹ್ನೆ ಮುಂತಾದವುಗಳನ್ನು ಬಳಸಿ ಖಾಲಿ ಜಾಗವನ್ನು ಭರ್ತಿ ಮಾಡುವ ಮೂಲಕ ಅಪೂರ್ಣವಾದ ವಾಕ್ಯಗಳನ್ನು ಪೂರ್ಣಗೊಳಿಸಬೇಕು.

       ಭರ್ತಿ ಮಾಡುವಿಕೆ ಮಾದರಿ ಪ್ರಶ್ನೆಗಳನ್ನು ರೂಪಿಸಲು ಸಲಹೆಗಳು

  1. ಪ್ರತಿ ಹೇಳಿಕೆಯು ಪಠ್ಯ ಭಾಗದ ಒಂದು ಮುಖಾಂಶವನ್ನು ಒಳಗೊಂಡಿರಬೇಕು.
  2. ಪಠ್ಯ ಪುಸ್ತಕದ ವಾಕ್ಯಗಳನ್ನು ಯಥಾವತ್ತಾಗಿ ಬಳಸಿಕೊಂಡು ಹೇಳಿಕೆ ನೀಡಬೇಡಿ.
  3. ‍‍ಹೇಳಿಕೆಯಲ್ಲಿ ಬಿಟ್ಟಿರುವ ಪದ ಮುಖ್ಯವಾದ ಅಂಶವಿರಬೇಕು.
  4. ಒಂದು ಹೇಳಿಕೆಯು ಅನೇಕ ಮುಖ್ಯ ಪದಗಳನ್ನು ತೆಗೆಯುವುದರ ಮೂಲಕ ಪ್ರಶ್ನೆಯನ್ನು ಅರ್ಥಹೀನವಾಗಿಸಬಾರದು.

            ಉದಾ: 1. _________________ರೋಗವು ___________ಜೀವಸತ್ವದ _____________ಯಿಂದ ಬರುತ್ತದೆ.

                 (ಈ ಪ್ರಶ್ನೆಯಲ್ಲಿ ಅನೇಕ ಪದಗಳನ್ನು ಬಿಟ್ಟಿರುವುದರಿಂದ ಇದು ಅರ್ಥಹೀನವಾಗುತ್ತದೆ. )

           ಉದಾ: 2. ಫೋಟೋ ಫೋಬಿಯಾ ರೋಗವು _______________ ಜೀವಸತ್ವದ ನ್ಯೂನತೆಯಿಂದ  

                          ಬರುತ್ತದೆ.

                    (ಈ ಪ್ರಶ್ನೆ ನಿರ್ದಿಷ್ಟ ಉತ್ತರವನ್ನು ಬಯಸುತ್ತದೆ)

  1. ಪ್ರಶ್ನೆಯಲ್ಲಿ ಖಾಲಿ ಜಾಗವನ್ನು ಸಾದ್ಯವಾದಷ್ಟು ಹೇಳಿಕೆಯ ಕೊನೆಯಲ್ಲಿ ಬಿಡುವುದು ಉತ್ತಮ.

ಉದಾ:1. ____________ ಜೀವಸತ್ವವನ್ನು ಸೂರ್ಯರಶ್ಮಿಯ ಜೀವಸತ್ವ ಎಂದು ಕರೆಯುತ್ತಾರೆ.

ಉದಾ:2 ಸೂರ್ಯರಶ್ಮಿಯ ಜೀವಸತ್ವ ಎಂದು ಕರೆಯಲ್ಪಡುವ ಜೀವಸತ್ವ __________

(ಎರಡನೆ ಹೇಳಿಕೆಯು ಉತ್ತಮವಾದುದು)

  1. ಪ್ರಶ್ನೆಯಲ್ಲಿ ಅಸಂಬದ್ಧ ಸುಳಿವುಗಳನ್ನು ನೀಡಬೇಡಿ

(ವ್ಯಕರಣದ ರೂಪದಲ್ಲಿ ಅಥವಾ ಖಾಲಿ ಜಾಗದ ಉದ್ದ ಇತ್ಯಾದಿಯಾಗಿ)

  1. ಉತ್ತರಗಳನ್ನು ಸರಿಯಾದ ಕ್ರಮದಲ್ಲಿ ಬರೆಯಲು ನಿರ್ದಿಷ್ಟ ಸೂಚನೆಗಳನ್ನು ನೀಡಬೇಕು.
  2. ವ್ಯಾಖ್ಯೆಗಳು ಅಥವಾ ತಾಂತ್ರಿಕ ಪದಗಳ ಜ್ಞಾನ ಪರೀಕ್ಷಿಸುವಾಗ ನೇರ ಪ್ರಶ್ನೆಗಳನ್ನು ಬಳಸುವುದು ಉತ್ತಮ.

 

ಜೋಡಣೆಯ ಪರೀಕ್ಷೆ/ಹೊಂದಿಸಿ ಬರೆಯಿರಿ ಮಾದರಿ

       ಜೋಡಣೆಯ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಪ್ರಶ್ನೆಗಳನ್ನು ಎರಡು ಪಟ್ಟಿಗಳ ರೂಪದಲ್ಲಿ ನೀಡಲಾಗುವುದು. ಎಡ ಭಾಗದ ಪಟ್ಟಿಯಲ್ಲಿರುವ ಅಂಶಗಳು ಉತ್ತರಿಸಬೇಕಾದ ಪ್ರಶ್ನೆಗಳು ಅಥವಾ ಸಮಸ್ಯೆಗಳನ್ನೊಳಗೊಂಡಿರುತ್ತವೆ. ಬಲಭಾಗದ ಪಟ್ಟಿಯಲ್ಲಿರುವ ಅಂಶಗಳು ಉತ್ತರ ರೂಪದಲ್ಲಿರುತ್ತವೆ. ಪರಿಕ್ಷಾರ್ಥಿಯು ಎರಡು ಪಟ್ಟಿಯಲ್ಲಿರುವ ಪದಗಳ ಮಧ್ಯೆ ಸಂಬಂಧವನ್ನು ಕಲ್ಪಿಸಬೇಕಾಗುತ್ತದೆ. ʼಎʼ ಪಟ್ಟಿಯಲ್ಲಿರುವ ಅಂಶವನ್ನು ʼಬಿʼ ಪಟ್ಟಿಯಲ್ಲಿರುವ ಸೂಕ್ತ ಉತ್ತರಗಳೊಂದಿಗೆ ಜೋಡಿಸಬೇಕಾಗುತ್ತದೆ.

ನಿರ್ದೇಶನ:  ʼಎʼ ಪಟ್ಟಿಯಲ್ಲಿರುವ ಪದಗಳ ಪಕ್ಕದಲ್ಲಿ ನೀಡಿರುವ ಆವರಣದಲ್ಲಿ ʼಎʼ ಪಟ್ಟಿಯಲ್ಲಿರುವ ಮನೋವಿಜ್ಞಾನಿಕ ಪಂಥಗಳಿಗೆ ಸೂಕ್ತ ಸಂಬಂಧ ಹೊಂದಿರುವ ʼಬಿʼ ಪಟ್ಟಿಯಲ್ಲಿರುವ ಮನೋವಿಜ್ಞಾನಿಗಳನ್ನು ಪತ್ತೆ ಹಚ್ಚಿ ಆ ಸಂಖ್ಯೆಯನ್ನು ಬರೆಯಿರಿ.

                                                  ಪಟ್ಟಿ ʼಎʼ                                        ಪಟ್ಟಿ ʼಬಿʼ                                   

 

                         (  ‌  )            1. ರಚನಾ ಪಂಥ                            ಎ) ಮ್ಯಾಕ್ಸ್‌ ವರ್ದಿಮರ್‌

                         (    )            2. ಕ್ರಿಯಾತ್ಮಕ ಪಂಥ                      ಬಿ) ಸಿಗ್ಮಂಡ್‌ ಫ್ರಾಯ್ಡ್

‌                         (    )            3. ವರ್ತನಾ ಪಂಥ                          ಸಿ) ಬ್ರೂನರ್‌

                        (    )             4. ಗೆಸ್ಟಾಲ್ಟ್‌ ಪಂಥ                          ಡಿ) ಇ.ಬಿ. ಟಿಷ್ನರ್‌

            ‌            (    )            5. ಮನೋವಿಶ್ಲೇಷಣಾ ಪಂಥ            ಇ) ವಿಲಿಯಂ ಜೇಮ್ಸ್‌

‌                                                                                                 ಎಫ್) ಜೆ.ಬಿ. ವ್ಯಾಟ್ಸನ್

                         ಜೋಡಣೆ ಮಾದರಿ ಪ್ರಶ್ನೆಗಳನ್ನು ರೂಪಿಸಲು ಸಲಹೆಗಳು

  1. ಎರಡು ಪಟ್ಟಿಗಳಲ್ಲಿ ನೀಡುವ ಅಂಶಗಳು ಸಾಧ್ಯವಾದಷ್ಟು ಚಿಕ್ಕ ಪದಗುಚ್ಚ, ಒಂದು ಪದ ಅಥವಾ ಸಂಖ್ಯೆಗಳನ್ನು ಒಳಗೊಂಡಿರಬೇಕು. ಉದ್ದನೆಯ ಹೇಳಿಕೆಗಳಿದ್ದಲ್ಲಿ ವಿದ್ಯಾರ್ಥಿಗಳಿಗೆ ಓದಿ ಉತ್ತರಿಸಲು ಸಮಯ ಹೆಚ್ಚು ಬೇಕಾಗುತ್ತದೆ.
  2. ಪ್ರತಿ ಜೊಡಣೆ ಪರೀಕ್ಷೆ ಒಂದೇ ಪರಿಕಲ್ಪನೆ ಅಥವಾ ಕ್ಷೇತ್ರಗಳಿಗೆ ಸಂಬಂಧಿಸಿದ ಒಂದೇ ರೀತಿಯ ಅಂಶಗಳನ್ನು ಒಳಗೊಂಡಿರಬೇಕು. ಇದು ಪ್ರಶ್ನೆಯ ಸಮಂಜಸತೆಯನ್ನು ಹೆಚ್ಚಿಸುತ್ತದೆ.
  3. ಸಾಮಾನ್ಯವಾಗಿ ಪ್ರತಿ ಪಟ್ಟಿ ಚಿಕ್ಕದಾಗಿರಬೇಕು, ಚಿಕ್ಕ ಪಟ್ಟಿಗಳಿದ್ದರೆ ಓದುವ ಸಮಯ ಉಳಿತಾಯವಾಗುತ್ತದೆ, ಸಮರೂಪತೆ ಕಾಯ್ದುಕೊಳ್ಳಲು ಮತ್ತು ಸಮಂಜಸತೆ ಹೆಚ್ಚಿಸಲು ನೆರವಾಗುತ್ತದೆ.
  4. ಮೊದಲನೆ ಪಟ್ಟಿಯಲ್ಲಿರುವ ಅಂಶಗಳು ಮತ್ತು ಎರಡನೇ ಪಟ್ಟಿಯಲ್ಲಿರುವ ಉತ್ತರದ ಅಂಶಗಳು ಸಮವಾಗಿರಬಾರದು.
  5. ಎರಡನೆ ಪಟ್ಟಿಯಲ್ಲಿರವ ಉತ್ತರಗಳನ್ನು ಒಂದು ಕ್ರಮಬದ್ದವಾದ ರೀತಿಯಲ್ಲಿ ಜೋಡಿಸಿರಿ.

ಉದಾ: ಅಕ್ಷರಮಾಲೆಯ ಅನುಕ್ರಮವಾಗಿ ಸಂಖ್ಯೆಗಳನ್ನು ಏರಿಕೆ ಅಥವಾ ಇಳಿಕೆ ಕ್ರಮದಲ್ಲಿ, ವರ್ಷ ಮತ್ತು ದಿನಗಳನ್ನು ಕ್ರಮಾನುಗತವಾಗಿ ಜೋಡಿಸಬೇಕು.

  1. ಅಸಂಬದ್ದ ಸುಳಿವುಗಳನ್ನು ನೀಡಬಾರದು.
  2. ಯಾವ ಅಂಶವನ್ನು ಆಧರಿಸಿ ಜೋಡಣೆ ಮಾಡಬೇಕೆಂಬುದನ್ನು ನಿರ್ದೇಶನದಲ್ಲಿ ನೀಡಬೇಕು.
  3. ಪ್ರಶ್ನೆಗಳಲ್ಲಿ ವ್ಯಾಕರಣ ಶುದ್ದತೆಯನ್ನು ಕಾಪಾಡಿಕೊಳ್ಳಿರಿ.
  4. ಮೊದಲನೆ ಪಟ್ಟಿಯಲ್ಲಿ ಅಂಶಗಳನ್ನು ಸಂಖ್ಯೆಗಳಿಂದ ಮತ್ತು ಎರಡನೆ ಪಟ್ಟಿಯಲ್ಲಿರುವ ಅಂಶಗಳನ್ನು ಅಕ್ಷರಗಳಿಂದ ಗುರುತಿಸಿರಿ.
  5. ಅಪೂರ್ಣ ಹೇಳಿಕೆಗಳನ್ನು ಜೋಡಣೆ ಮಾಡಲು ನೀಡಬಾರದು, ಇಂತಹ ಹೇಳಿಕೆಗಳಲ್ಲಿ ವ್ಯಾಕರಣದ ಸುಳಿವುಗಳು ಸುಲಭವಾಗಿ ದೊರೆಯುತ್ತವೆ.

ಸರಿ-ತಪ್ಪು   ಮಾದರಿ ಪ್ರಶ್ನೆಗಳು/ಪರ್ಯಾಯ ಉತ್ತರದ ಪರೀಕ್ಷೆ

     ಈ ಮಾದರಿ ಪ್ರಶ್ನೆಗಳನ್ನು ಪರ್ಯಾಯ ಉತ್ತರ ಮಾದರಿ ಪ್ರಶ್ನೆಗಳೆಂದು ಕರೆಯುವರು. ಕೊಟ್ಟಿರುವ ಹೇಳಿಕೆಯು ಸರಿಯಗಿದೆಯೋ ಅಥವಾ ತಪ್ಪಾಗಿದೆಯಿಓ ಎಂಬುದನ್ನು ವಿದ್ಯಾರ್ಥಿಯು ನಿರ್ಧರಿಸಬೇಕು. ಆ ಹೇಳಿಕೆಗಳ ಮುಂದೆ ವಿದ್ಯಾರ್ಥಿಯು ಸರಿ- ತಪ್ಪು, ಹೌದು-ಇಲ್ಲ, ʼʼ ಅಥವಾ ʼ X ʼ ಎಂಬ ಚಿಹ್ನೆಯ ಮೂಲಕ ತನ್ನ ನಿರ್ಧಾರ ಸೂಚಿಸಬೇಕು.

ಸರಿ- ತಪ್ಪು ಮಾದರಿ ಪ್ರಶ್ನೆಗಳನ್ನು ರೂಪಿಸಲು ಸಲಹೆಗಳು

  1. ಹೇಳಿಕೆಗಳಲ್ಲಿ ಅಸ್ಪಷ್ಟತೆಗೆ ಅವಕಾಶವಿಲ್ಲದಂತೆ ಸರಳ, ಸ್ಪಷ್ಟ ಭಾಷೆಯನ್ನು ಬಳಸಿರಿ.
  2. ಭಾಗಶಃ ತಪ್ಪು ಅಥವಾ ಭಾಗಶಃ ಸರಿಯಾಗಿರುವ ಹೇಳಿಕೆಗಳನ್ನು ಬಳಸಬಾರದು. ಪೂರ್ಣ ಸರಿ ಅಥವಾ ಪೂರ್ಣ ತಪ್ಪಾಗಿರುವ ವಾಕ್ಯಗಳನ್ನೇ ಬಳಸಬೇಕು.
  3. ವಿವಾದಾತ್ಮಕ ಹೇಳಿಕೆಗಳನ್ನು ಯಾವಾಗಲೂ ಬಳಸಬಾರದು.
  4. ಪಠ್ಯ ಪುಸ್ತಕದ ಹೇಳಿಕೆಗಳನ್ನು ಯಾಥಾವತ್ತಾಗಿ ಬಳಸಬಾರದು. ಇದು ವಿದ್ಯಾರ್ಥಿಗಳು ಪಠ್ಯ ಭಾಗವನ್ನು ಕಂಠಪಾಠ ಮಾಡುವುದನ್ನು ತಪ್ಪಿಸುತ್ತದೆ.
  5. ಸರಿ ಮತ್ತು ತಪ್ಪು ಹೇಳಿಕೆಗಳನ್ನು ಯಾದೃಚ್ಚಿಕ ಮಾದರಿಯಲ್ಲಿ ಜೋಡಿಸಿರಿ, ಇದು ಸರಿ- ತಪ್ಪು ಹೇಳಿಕೆಗಳನ್ನು ಗುರುತಿಸಲು ಯಾವುದೇ ಸುಳಿವು ನೀಡಬಾರದು.
  6. ಒಂದು ಹೇಳಿಕೆ ಒಂದಕ್ಕಿಂತ ಹೆಚ್ಚಿನ   ಪಠ್ಯಾಂಶಗಳನ್ನು ಒಳಗೊಂಡಿರಬಾರದು.
  7. ದ್ವಿ ಋಣಾತ್ಮಕ (ದ್ವಿ-ನಿಷೇಧಾರ್ಥಕ) ಹೇಳಿಕೆಗಳನ್ನು ಬಳಸಬಾರದು. ಇವು ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡುತ್ತವೆ.
  8. ಸರಿ- ತಪ್ಪುಗಳನ್ನು ಸೂಚಿಸಲು ಸರಳ ವಿಧಾನ ಸೂಚಿಸಿರಿ.\\

ಉದಾ: ಸರಿಯಾದ ಹೇಳಿಕೆಯನ್ನು ʼ T ʼ ಎಂತಲೂ ತಪ್ಪಾದ ಹೇಳಿಕೆಯನ್ನು ʼ F ʼ ಎಂತಲೂ ಗುರುತಿಸಿರಿ.

ಸರಿ- ತಪ್ಪು ಮಾದರಿ ಪ್ರಶ್ನೆಗಳು

ನಿರ್ದೇಶನ: ಈ ಕೆಳಗೆ ಕೊಟ್ಟಿರುವ ಹೇಳಿಕೆಗಳಲ್ಲಿ ಸರಿಯಾಗಿರುವ ಹೇಳಿಕೆಗಳ ಮುಂದೆ ʼ T ʼ ಎಂತಲೂ, ತಪ್ಪಾಗಿರುವ ಹೇಳಿಕೆಗಳ ಮುಂದೆ ʼ F ʼ ಎಂತಲೂ ಬರೆಯಿರಿ.

  1. ಮಾನವ ದೇಹದ ಪ್ರತಿ ಜೀವ ಕೋಶದಲ್ಲಿ 22 ಜೊತೆ ವರ್ಣ ತಂತುಗಳಿರುತ್ತವೆ.                            ʼ F ʼ 
  2. ಮೆಟಾಫೇಸ್‌ ಹಂತದಲ್ಲಿ ವರ್ಣತಂತುಗಳು ಸಮಾಂತರ ಫಲಕದಲ್ಲಿ ಜೋಡಿಸಲ್ಪಟ್ಟಿರುತ್ತವೆ.       ʼ T ʼ
  3. ಮೈಟಾಸಿಸ್‌ ಕೋಶ ವಿಭಜನೆಯನ್ನು 6 ಹಂತಗಳಲ್ಲಿ ಗುರುತಿಸಬಹುದು.                                     ʼ F ʼ 
  4. ಮಿಯಾಸಿಸ್ನ್ ನ್ನು ಸಂಖ್ಯಾ ಕ್ಷೀಣ ವಿಭಜನೆ ಎಂದು ಕರೆಯುವರು.                                               ʼ T ʼ

ಸರಿ- ತಪ್ಪು ಮಾದರಿಯ ಸುಧಾರಿತ ರೂಪದ ಪ್ರಶ್ನೆಗಳು

ನಿರ್ದೇಶನ: ಈ ಕೆಳಗಿನ ಹೇಳಿಕೆಗಳಲ್ಲಿ ಸರಿ-ತಪ್ಪು ಹೇಳಿಕೆಗಳನ್ನು ಗುರುತಿಸಿ, ತಪ್ಪಾಗಿರುವ ಹೇಳಿಕೆಗಳನ್ನು ಸರಿಪಡಿಸಿರಿ.

  1. ನಮ್ಮ ದೇಶದಲ್ಲಿ ಕಂಡುಬರುವ ಸಹಜ ಮರುಭೂಮಿ ಸಹರಾ ಆಗಿದೆ….. ತಪ್ಪು 

ಸರಿ ಉತ್ತರ:  ನಮ್ಮ ದೇಶದಲ್ಲಿ ಕಂಡುಬರುವ ಸಹಜ ಮರುಭೂಮಿ ಥಾರ್‌ ಆಗಿದೆ.

  1. ಮಾನವ ಅತ್ಯಂತ ಪ್ರಬಲ ಜೀವಿ ಎಂದು ಕರೆಯಲು ಮುಖ್ಯ ಕಾರಣ ಅವನು ಹೊಂದಿರುವ ದೈಹಿಕ ಬಲ…..ತಪ್ಪು

                   ಸರಿ ಉತ್ತರ:     ಮಾನವ ಅತ್ಯಂತ ಪ್ರಬಲ ಜೀವಿ   ಎಂದು ಕರೆಯಲು ಮುಖ್ಯ ಕಾರಣ ಅವನು

                                           ಹೊಂದಿರುವ ಬುದ್ದಿ ಶಕ್ತಿ.

ಸಾದೃಶ್ಯ ಮಾದರಿ / ಸಂಬಂಧ ಕಲ್ಪಿಸುವ ಮಾದರಿ ಪ್ರಶ್ನೆಗಳು

     ಈ ಮಾದರಿ ಪರೀಕ್ಷೆಯಲ್ಲಿ ಪ್ರಶ್ನೆಯ ಮೊದಲ ಎರಡು ಅಂಶಗಳಿಗಿರುವ ಸಂಬಂಧವನ್ನು ವಿದ್ಯಾರ್ಥಿ ಪತ್ತೆ ಹಚ್ಚಿ, ನಂತರ ಕೊಟ್ಟಿರುವ ಮೂರನೇ ಅಂಶಕ್ಕೆ, ಮೊದಲ ಎರಡು ಪದಗಳಿಗಿರುವ ಸಂಬಂಧವನ್ನು ಅನ್ವಯಿಸಿ ನಾಲ್ಕನೇ ಅಂಶವನ್ನು ನೀಡಬೇಕಾಗುತ್ತದೆ.

   ಇಲ್ಲಿ ಪ್ರಶ್ನೆಯನ್ನು  a : b :: c :  ?   ಎಂಬ ರೂಪದಲ್ಲಿ ನೀಡಲಾಗಿರುತ್ತದೆ.’ a ‘  ಮತ್ತು’ b ‘  ಗಳಲ್ಲಿರುವ ಸಂಬಂಧವನ್ನು ಗ್ರಹಿಸಿ ‘c ‘  ಗೆ ಸೂಕ್ತವಾದ ಸಂಬಂಧವಿರುವ ಪದವನ್ನು ವಿದ್ಯಾರ್ಥಿ ನೀಡಬೇಕು. ಪ್ರತಿ ಪ್ರಶ್ನೆಗೂ ಅದ್ವಿತೀಯ ಉತ್ತರವಿರಬೇಕು. ಮೊದಲ ಎರಡು ಅಂಶಗಳ ನಡುವೆ ನಿರ್ದಿಷ್ಟ ಸಂಬಂಧವಿರುವಂತೆ ಪ್ರಶ್ನೆ ರೂಪಿಸಬೇಕು.

  1. ಉದಾ:  2 : 8 : : 5 : ?
  2. ರವೀಂದ್ರ : ಸವರ್ಣದೀರ್ಘ ಸಂಧಿ: : ನರೇಂದ್ರ; ?
  3. ಬೆರಿಬೆರಿ : ವಿಟಮಿನ್‌ ಬಿ ::  ರಿಕೆಟ್ಸ್‌ :  ?
  4. ದೂರದರ್ಶಕ : ಗೆಲಿಲಿಯೋ : : ದೂರದರ್ಶನ :  ?
  5. ರಾಜ್ಯಸರ್ಕಾರ : ಮುಖ್ಯಮಂತ್ರಿ : : ಕೇಂದ್ರ ಸರ್ಕಾರ :   ?

 

Comments

Popular posts from this blog

ಮೌಲ್ಯಮಾಪನದ ವಿಧಗಳು

ಕಲಿಕಾ ಮಾಪನದ ಅರ್ಥ,ವ್ಯಾಖ್ಯಾನ,ಮಾಪನದ ಉದ್ದೇಶಗಳು

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ (ಸಿಸಿಇ)