ಕಲಿಕಾ ಮಾಪನದಲ್ಲಿ ನವೀನ ವಿದ್ಯಮಾನಗಳು
ಕಲಿಕಾ ಮಾಪನದಲ್ಲಿ ನವೀನ ವಿದ್ಯಮಾನಗಳು
ಆನ್ ಲೈನ್ ಪರೀಕ್ಷೆಗಳು:
ಆನ್ ಲೈನ್ ಪರೀಕ್ಷೆಗಳು ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣದ ಅವಿಭಾಜ್ಯ ಅಂಗವಾಗಿವೆ.
ಆನ್ ಲೈನ್ ಪರೀಕ್ಷೆಯು ಇಂಟರ್ನೆಟ್ ಮತ್ತು ಗಣಕಯಂತ್ರ ಅಥವಾ ಮೊಬೈಲ್
ಬಳಸಿ ನಡೆಸುವ ಒಂದು ಆಧುನಿಕ ಮೌಲ್ಯಮಾಪನ ವಿಧಾನವಾಗಿದೆ. ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಸ್ಥಳಕ್ಕೆ
ಹೋಗುವ ಬದಲು, ತಮಗೆ ಅನುಕೂಲಕರವಾದ ಸ್ಥಳದಲ್ಲಿ ಕುಳಿತು ಕಂಪ್ಯೂಟರ್ ಮೂಲಕ ಪರೀಕ್ಷೆ ಬರೆಯುತ್ತಾರೆ.
ಇದನ್ನು ಸಿ.ಬಿ.ಟಿ (ಕಂಪ್ಯೂಟರ್ ಬೇಸ್ಡ್ ಟೆಸ್ಟ್) ಎಂದು ಕರೆಯುತ್ತಾರೆ.
ಆನ್ ಲೈನ್ ಪರೀಕ್ಷೆಯ ಉದ್ದೇಶಗಳು:
1.
ಸಮಯದ ಉಳಿತಾಯ: ಪರೀಕ್ಷಾ
ಪ್ರಶ್ನೆಪತ್ರಿಕೆ ತಯಾರಿಸುವುದು, ಮುದ್ರಿಸುವುದು ಮತ್ತು ವಿತರಿಸುವ ಸಮಯವನ್ನು ಇದು ಉಳಿಸುತ್ತದೆ.
ಪರೀಕ್ಷೆ ಮುಗಿದ ತಕ್ಷಣ ಅಥವಾ ಅತಿ ಶೀಘ್ರದಲ್ಲಿ ಫಲಿತಾಂಶವನ್ನು ಪಡೆಯಬಹುದು.
2.
ಪಾರದರ್ಶಕತೆ ಮತ್ತು
ನಿಖರತೆ: ಕಂಪ್ಯೂಟರ್ ಆಧಾರಿತ ಮೌಲ್ಯಮಾಪನ ಮಾಡುವುದರಿಂದ ಮಾನವ ತಪ್ಪುಗಳಿಗೆ/ದೋಷಗಳಿಗೆ ಅವಕಾಶವಿರುವುದಿಲ್ಲ.
ಮೌಲ್ಯಮಾಪನವು ಅತ್ಯಂತ ನಿಖರವಾಗಿ ಮತ್ತು ಪಕ್ಷಪಾತವಿಲ್ಲದೆ ನಡೆಯುತ್ತದೆ.
3.
ವೆಚ್ಚ ಕಡಿಮೆ ಮಾಡುವುದು:
ಕಾಗದದ ಬಳಕೆ ಇಲ್ಲದಿರುವುದರಿಂದ ಮುದ್ರಣ ವೆಚ್ಚ ಮತ್ತು ಸಾಗಾಣಿಕಾ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ
ಮಾಡಬಹುದು. ಇದು ಪರಿಸರ ಸ್ನೇಹಿ ವಿಧಾನವೂ ಹೌದು.
4.
ಸುರಕ್ಷತೆ ಮತ್ತು ಗೌಪ್ಯತೆ:
ಪ್ರಶ್ನೆಪತ್ರಿಕೆ ಸೋರಿಕೆಯಾಗುವ ಭಯವಿರುವುದಿಲ್ಲ. ಪ್ರಶ್ನೆಗಳನ್ನು ʼಎನ್ಕ್ ಕ್ರಿಫ್ಟ್ʼ ಮಾಡಲಾಗಿರುತ್ತದೆ
ಮತ್ತು ಪ್ರತಿ ವಿದ್ಯಾರ್ಥಿಗೂ ಪ್ರಶ್ನೆಗಳ ಕ್ರಮವು ಬದಲಾಗುವಂತೆ ಮಾಡಬಹುದು.
5.
ಸುಲಭ ಪ್ರವೇಶ: ವಿದ್ಯಾರ್ಥಿಗಳು
ದೂರದ ಊರುಗಳಿಂದಲೇ ಪರೀಕ್ಷೆ ಬರೆಯಬಹುದು. ಪರೀಕ್ಷಾ ಕೇಂದ್ರಗಳಿಗೆ ಅಲೆಯುವ ಅವಶ್ಯಕತೆ ಇರುವುದಿಲ್ಲ.
6.
ತ್ವರಿತ ವಿಶ್ಲೇಷಣೆ:
ವಿದ್ಯಾರ್ಥಿಯ ಸಾಮರ್ಥ್ಯವನ್ನು ತಕ್ಷಣವೇ ವಿಶ್ಲೇಷಿಸಿ, ಅವರು ಯಾವ ವಿಷಯದಲ್ಲಿ ಹಿಂದೆ ಉಳಿದಿದ್ದಾರೆ
ಎಂಬ ವರದಿಯನ್ನು ಶೀಘ್ರವಾಗಿ ನೀಡಲು ಸಹಕಾರಿಯಾಗುತ್ತದೆ.
ಆನ್ ಲೈನ್ ಪರೀಕ್ಷೆಯ ಅನುಕೂಲಗಳು
1.
ಕಾಗದದ ಬಳಕೆ ಇಲ್ಲದೆ
ಇರುವುದರಿಂದ ಮರಗಳನ್ನು ಉಳಿಸಲು ಮತ್ತು ಪರಿಸರ ಮಾಲಿನ್ಯ
ತಡೆಯಲು ಇದು ಸಹಕಾರಿ.
2.
ಬಹು ಆಯ್ಕೆಯ ಪ್ರಶ್ನೆಗಳಿದ್ದಲ್ಲಿ
ಪರೀಕ್ಷೆ ಮುಗಿದ ತಕ್ಷಣವೇ ಅಂಕಗಳನ್ನು ತಿಳಿಯಬಹುದು.
3.
ಪರೀಕ್ಷಾ ವ್ಯವಸ್ಥಾಪಕರು
ಅಭ್ಯರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ದಿನಾಂಕ ಮತ್ತು ಸಮಯದ ಸ್ಲಾಟ್ ಗಳನ್ನು ನೀಡಲು ಸಾಧ್ಯವಾಗುತ್ತದೆ.
4.
ಸಾವಿರಾರುವಿದ್ಯಾರ್ಥಿಗಳ
ದತ್ತಾಂಶವನ್ನು ನಿರ್ವಹಿಸುವುದು ಮತ್ತು ಶೇಖರಿಸಿಡುವುದು ಭೌತಿಕ ದಾಖಲೆಗಳಿಗಿಂತ ಸುಲಭ.
5.
ಕೇವಲ ಪಠ್ಯವಲ್ಲದೆ,
ಚಿತ್ರಗಳು, ವಿಡಿಯೋಗಳು ಅಥವಾ ಅನಿಮೇಷನ್ ಬಳಸಿ ಪ್ರಶ್ನೆಗಳನ್ನು ಕೇಳಲು ಅವಕಾಶವಿರುತ್ತದೆ.
ಆನ್ ಲೈನ್ ಪರೀಕ್ಷೆಯ ಮಿತಿಗಳು
1.
ಪರೀಕ್ಷೆಯ ಸಮಯದಲ್ಲಿ
ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುವುದು, ವಿದ್ಯುತ್ ವ್ಯತ್ಯಯ ಅಥವಾ ಸರ್ವರ್ ಸಮಸ್ಯೆಗಳು ಎದುರಾಗಬಹುದು.
ಇದು ವಿದ್ಯಾರ್ಥಿಗಳಲ್ಲಿ ಆತಂಕ ಉಂಟುಮಾಡಬಹುದು.
2.
ಕಂಪ್ಯೂಟರ್ ಅಥವಾ ಸ್ಮಾರ್ಟ್
ಪೋನ್ ಬಳಸಲು ಸರಿಯಾಗಿ ತಿಳಿಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಪದ್ದತಿ ಕಷ್ಟವೆನಿಸಬಹುದು.
3.
ಮೇಲ್ವಿಚಾರಕರು ನೇರವಾಗಿ
ಇಲ್ಲದಿದ್ದಾಗ ವಿದ್ಯಾರ್ಥಿಗಳು ಇತರ ಮೂಲಗಳಿಂದ ಉತ್ತರ ಹುಡುಕುವ ಅಥವಾ ಅಡ್ಡದಾರಿ ಹಿಡಿಯುವ ಸಾಧ್ಯತೆ
ಇರುತ್ತದೆ. (ಇದನ್ನು ತಡೆಯಲು ಈಗ ʼರೆಮೋಟ್ ಪ್ರೊಕ್ಟೊರಿಂಗ್ʼ ತಂತ್ರಜ್ಞಾನ ಬಳಸಲಾಗುತ್ತಿದೆ).
4.
ಕಂಪ್ಯೂಟರ್ ಪರದೆಯನ್ನು
ದೀರ್ಘಕಾಲ ನೋಡುವುದರಿಂದ ಕಣ್ಣಿನ ಆಯಾಸ ಮತ್ತು ತಲೆನೋವು ಉಂಟಾಗಬಹುದು.
5.
ದೀರ್ಘವಾದ ಪ್ರಬಂಧ ಮಾದರಿಯ
ಉತ್ತರಗಳನ್ನು ಟೈಪ್ ಮಾಡುವುದು ಎಲ್ಲರಿಗೂ ಸುಲಭವಲ್ಲ, ಇದು ಬರವಣಿಗೆಯ ವೇಗದ ಮೇಲೆ ಪರಿಣಾಮ ಬೀರಬಹುದು.
6.
ಆರಂಭದಲ್ಲಿ ಕಂಪ್ಯೂಟರ್
ಗಳು, ಸಾಪ್ಟ್ವೇರ್ ಮತ್ತು ಹೈ-ಸ್ಪೀಡ್ ಇಂಟರ್ನೆಟ್ ಅಳವಡಿಸಲು ಹೆಚ್ಚಿನ ಬಂಡವಾಳದ ಅಗತ್ಯವಿರುತ್ತದೆ.
ಮುಕ್ತ/ತೆರೆದ ಪುಸ್ತಕ ಪರೀಕ್ಷೆ:
ಮುಕ್ತ
ಪುಸ್ತಕ ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುವಾಗ ತಮ್ಮ ಪಠ್ಯಪುಸ್ತಕಗಳು, ಟಿಪ್ಪಣಿಗಳು
ಅಥವಾ ಇತರ ಶೈಕ್ಷಣಿಕ ದಾಖಲೆಗಳನ್ನು ನೋಡಿ ಉತ್ತರ ಬರೆಯಲು ಅವಕಾಶವಿರುವ ಪರೀಕ್ಷಾ ಕ್ರಮವಾಗಿದೆ. ಇಲ್ಲಿ
ನೆನಪಿನ ಶಕ್ತಿಗಿಂತ ಹೆಚ್ಚಾಗಿ, ವಿಷಯದ ಮೇಲಿ್ ಅರ್ಥೈಸುವಿಕೆ ಮತ್ತು ಅದನ್ನು ಅನ್ವಯಿಸುವ ಸಾಮರ್ಥ್ಯವನ್ನು
ಪರೀಕ್ಷಿಸಲಾಗುತ್ತದೆ.
ಮುಕ್ತ/ತೆರೆದ ಪುಸ್ತಕ ಪರೀಕ್ಷಯ ಉದ್ದೇಶಗಳು
1.
ಮಾಹಿತಿಯ
ಅನ್ವಯ: ಕೇವಲ ಉತ್ತರಗಳನ್ನು ಕಂಠಪಾಠ ಮಾಡುವುದಕ್ಕಿಂತ, ಕಲಿತ ವಿಷಯವನ್ನು
ನೈಜ ಸಮಸ್ಯೆಗಳಿಗೆ ಹೇಗೆ ಅನ್ವಯಿಸಬೇಕು ಎಂಬುದನ್ನು ತಿಳಿಯುವುದು ಇದರ ಮುಖ್ಯ ಗುರಿ.
2.
ವಿಮರ್ಶಾತ್ಮಕ
ಚಿಂತನೆ: ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾತ್ಮಕ
ಮತ್ತು ವಿಮರ್ಶಾತ್ಮಕವಾಗಿ ಆಲೋಚಿಸುವ ಶಕ್ತಿಯನ್ನು ವೃದ್ದಿಸುವುದು.
3.
ಮಾಹಿತಿ ಹುಡುಕುವ
ಕೌಶಲ್ಯ: ಅಗತ್ಯವಿರುವ ಮಾಹಿತಿಯನ್ನು ಬೃಹತ್ ಪಠ್ಯಪುಸ್ತಕಗಳಿಂದ ಅಥವಾ
ಮೂಲಗಳಿಂದ ಹೇಗೆ ತ್ವರಿತವಾಗಿ ಮತ್ತು ನಿಖರವಾಗಿ ಹುಡುಕಬೇಕು ಎಂಬ ಕೌಶಲವನ್ನು ಬೆಳೆಸುವುದು.
4.
ಒತ್ತಡ ಮುಕ್ತ
ಕಲಿಕೆ: ಪಠ್ಯವನ್ನು ನೆನಪಿಟ್ಟುಕೊಳ್ಳುವ ಆತಂಕವನ್ನು ಕಡಿಮೆ ಮಾಡಿ, ಕಲಿಕೆಯ
ಪ್ರಕ್ರಿಯೆಯನ್ನು ಹೆಚ್ಚು ಆನಂದದಾಯಕವಾಗಿಸುವುದು.
5.
ಉನ್ನತ ಮಟ್ಟದ
ಕಲಿಕೆ: ಬ್ಲೂಮ್ಸ್ ಟ್ಯಾಕ್ಸಾನಮಿಯ ಪ್ರಕಾರ ಕೇವಲ ʼನೆನಪಿಟ್ಟುಕೊಳ್ಳುವಿಕೆʼ
ಹಂತದಿಂದ ದಾಟಿ ʼಮೌಲ್ಯಮಾಪನʼ ಮತ್ತು ʼವಿಶ್ಲೇಷಣೆʼ ಹಂತದವರೆಗಿನ ಕಲಿಕೆಯನ್ನು ಪ್ರೋತ್ಸಾಹಿಸುವುದು.
ಮುಕ್ತ/ತೆರೆದ ಪುಸ್ತಕ ಪರೀಕ್ಷಯ ಅನುಕೂಲಗಳು
1.
ಸ್ಮರಣ ಶಕ್ತಿಯ
ಮೇಲಿನ ಒತ್ತಡ ಕಡಿಮೆ: ವಿದ್ಯಾರ್ಥಿಗಳು ಅಂಕಿ-ಅಂಶಗಳನ್ನು
ಅಥವಾ ಸುದೀರ್ಘ ಪಠ್ಯಗಳನ್ನು ನೆನಪಿಟ್ಟುಕೊಳ್ಳುವ ಆತಂಕವಿಲ್ಲದೆ ಪರೀಕ್ಷೆ ಬರೆಯಬಹುದು. ಇದು ಪರೀಕ್ಷಾ
ಭಯವನ್ನು ಕಡಿಮೆ ಮಾಡುತ್ತದೆ.
2.
ಅನ್ವಯಿಕ
ಕಲಿಕೆಗೆ ಆದ್ಯತೆ: ಈ ಪದ್ಧತಿಯಲ್ಲಿ ಪ್ರಶ್ನೆಗಳು
ನೇರವಾಗಿ ಇರುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ವಿಷಯವನ್ನು ಆಳವಾಗಿ ಅರ್ಥಮಾಡಿಕೊಂಡು, ಅದನ್ನು
ಸಮಸ್ಯೆಗಳಿಗೆ ಅನ್ವಯಿಸಲು ಕಲಿಯುತ್ತಾರೆ.
3.
ಉತ್ತಮ ಗುಣಮಟ್ಟದ
ಉತ್ತರಗಳು: ಪಠ್ಯಪುಸ್ತಕಗಳು ಲಭ್ಯವಿರುವುದರಿಂದ
ತಪ್ಪು ಮಾಹಿತಿ ನೀಡುವ ಸಾಧ್ಯತೆ ಕಡಿಮೆ ಇರುತ್ತದೆ ಮತ್ತು ವಿದ್ಯಾರ್ಥಿಗಳು ಹೆಚ್ಚು ನಿಖರವಾದ ಹಾಗೂ
ವಿವರವಾದ ಉತ್ತರಗಳನ್ನು ಬರೆಯಬಹುದು.
4.
ಕಲಿಕಾ ಕೌಶಲ್ಯಗಳ
ವೃದ್ದಿ: ಬೃಹತ್ ಪಠ್ಯದಲ್ಲಿ ಅಗತ್ಯವಿರುವ ಪ್ರಮುಖ ಅಂಶಗಳನ್ನು ಗುರುತಿಸುವುದು
ಮತ್ತು ಮಾಹಿತಿಯನ್ನು ಸಂಘಟಿಸುವ ಕೌಶಲಗಳು ಬೆಳೆಯುತ್ತವೆ.
5.
ನಿರಂತರ ಅಧ್ಯಯನದ
ಪ್ರೇರಣೆ: ಪುಸ್ತಕ ನೋಡಿ ಬರೆಯುವುದಾದರೂ ವಿಷಯ
ಗೊತ್ತಿಲ್ಲದಿದ್ದರೆ ಉತ್ತರ ಹುಡುಕಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇದು ವಿದ್ಯಾರ್ಥಿಗಳು ಪಠ್ಯವನ್ನು
ಮೊದಲೇ ಓದಿಕೊಳ್ಳುವಂತೆ ಪ್ರೇರೇಪಿಸುತ್ತದೆ.
ಮುಕ್ತ/ತೆರೆದ ಪುಸ್ತಕ ಪರೀಕ್ಷಯ ಮಿತಿಗಳು
1.
ಸಮಯದ ನಿರ್ವಹಣೆ: ವಿದ್ಯಾರ್ಥಿಗಳು ಪುಸ್ತಕದಲ್ಲಿ ಉತ್ತರ ಹುಡುಕುವುದರಲ್ಲೇ ಹೆಚ್ಚಿನ
ಸಮಯ ವ್ಯಯಿಸಿದರೆ, ನಿಗದಿತ ಸಮಯದಲ್ಲಿ ಪರೀಕ್ಷೆ ಮುಗಿಸುವುದು ಕಷ್ಟವಾಗುತ್ತದೆ.
2.
ಪ್ರಶ್ನೆ
ಪತ್ರಿಕೆ ಸಿದ್ದಪಡಿಸುವ ಸವಾಲು: ಸಾಮಾನ್ಯ ಪರೀಕ್ಷೆಗಳಿಗಿಂತ
ಇಂತಹ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ತಯಾರಿಸುವುದು ಶಿಕ್ಷಕರಿಗೆ ಕಷ್ಟದ ಕೆಲಸ. ಪುಸ್ತಕದಲ್ಲಿ
ನೇರವಾಗಿ ಉತ್ತರ ಸಿಗದಂತೆ ತಾರ್ಕಿಕ ಪ್ರಶ್ನೆಗಳನ್ನು ಸಿದ್ದಪಡಿಸಬೇಕಾಗುತ್ತದೆ.
3.
ಸಮಾನತೆಯ
ಕೊರತೆ: ಎಲ್ಲಾ ವಿದ್ಯಾರ್ಥಿಗಳ ಬಳಿ ಒಂದೇ ರೀತಿಯ ಗುಣಮಟ್ಟದ ಪಠ್ಯಪುಸ್ತಕಗಳು
ಅಥವಾ ಪೂರಕ ಅಧ್ಯಯನ ಪರಿಕರಗಳು ಇಲ್ಲದಿದ್ದರೆ, ಇದು ತಾರತಮ್ಯಕ್ಕೆ ಕಾರಣವಾಗಬಹುದು.
4.
ನಿರ್ಲಕ್ಷ್ಯದ
ದೋರಣೆ: “ಪುಸ್ತಕ ನೋಡಿಯೇ ಬರೆಯುವುದಲ್ಲವೇ” ಎಂಬ ಅತಿಯಾದ ಆತ್ಮವಿಶ್ವಾಸದಿಂದ
ವಿದ್ಯಾರ್ಥಿಗಳು ಸರಿಯಾಗಿ ಓದದೆ ಪರೀಕ್ಷೆಗೆ ಹಾಜರಾಗುವ ಸಾಧ್ಯತೆ ಇರುತ್ತದೆ.
5.
ಮೌಲ್ಯಮಾಪನದ
ಸಂಕೀರ್ಣತೆ: ವಿದ್ಯಾರ್ಥಿಗಳು ತಮ್ಮದೇ ಆದ ವಿಭಿನ್ನ
ದೃಷ್ಠಿಕೋನಗಳಲ್ಲಿ ಉತ್ತರ ಬರೆಯುವುದರಿಂದ ಶಿಕ್ಷಕರಿಗೆ ಮೌಲ್ಯಮಾಪನ ಮಾಡುವುದು ಸವಾಲಾಗಬಹುದು.
ಕಲಿಕಾ ಪ್ರಕ್ರಿಯೆಯನ್ನು
ಸುಧಾರಿಸುವಲ್ಲಿ ಪೋಷಕರ ಪುನರ್ ಪುಷ್ಠಿಯ / ಪ್ರತಿಕ್ರಿಯೆ / ಪ್ರತ್ಯಾದಾನ ದ ಪಾತ್ರ
ಕಲಿಕಾ ಪ್ರಕ್ರಿಯೆಯನ್ನು
ಸುಧಾರಿಸುವಲ್ಲಿ ಪೋಷಕರ ಪ್ರತಿಕ್ರಿಯೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಮಗುವಿನ ಸರ್ವತೋಮುಖ
ಅಭಿವೃದ್ದಿಗೆ ಶಾಲೆ ಮತ್ತು ಪೋಷಕರ ನಡುವಿನ ಸಂವಹನ ಸೇತುವೆಯಿದ್ದಂತೆ.
ಕಲಿಕೆಯನ್ನು ಸುಧಾರಿಸುವಲ್ಲಿ
ಪೋಷಕರ ಪ್ರತಿಕ್ರಿಯಯ ಪ್ರಮುಖ ಅಂಶಗಳು,
1.
ಮಗುವಿನ ಸಾಮರ್ಥ್ಯ
ಮತ್ತು ದೌರ್ಬಲ್ಯಗಳ ಗುರುತಿಸುವಿಕೆ: ಪೋಷಕರು ತಮ್ಮ
ಮಗುವನ್ನು ಮನೆಯ ವಾತಾವರಣದಲ್ಲಿ ಹತ್ತಿರದಿಂದ ಗಮನಿಸಿರುತ್ತಾರೆ. ಮಗುವಿಗೆ ಯಾವ ವಿಷಯದಲ್ಲಿ ಆಸಕ್ತಿ
ಇದೆ ಮತ್ತು ಯಾವ ವಿಷಯದಲ್ಲಿ ಕಷ್ಟಪಡುತ್ತಿದೆ ಎಂಬ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡುವ ಮೂಲಕ, ಶಿಕ್ಷಕರು
ಆ ಮಗುವಿಗೆ ಬೇಕಾದ ವಿಶೇಷ ಗಮನವನ್ನು ನೀಡಲು ಸಾಧ್ಯವಾಗುತ್ತದೆ.
2.
ಶೈಕ್ಷಣಿಕ
ಪ್ರಗತಿಯ ಮೇಲೆ ಗಮನ: ಪೋಷಕರು ನಿಯಮಿತವಾಗಿ
ಪ್ರತಿಕ್ರಿಯೆ ನೀಡಿದಾಗ, ಮಗು ಶಾಲೆಯಲ್ಲಿ ಏನು ಕಲಿಯುತ್ತಿದೆ ಮತ್ತು ಅದರಲ್ಲಿ ಎಷ್ಟು ಪ್ರಗತಿ ಸಾಧಿಸುತ್ತಿದೆ
ಎಂಬುದು ಅವರಿಗೆ ತಿಳಿಯುತ್ತದೆ. ಇದು ಕಲಿಕೆಯಲ್ಲಿನ ಹಿನ್ನಡೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ
ಸರಿಪಡಿಸಲು ಸಹಾಯ ಮಾಡುತ್ತದೆ.
3.
ಶಿಕ್ಷಕ ಮತ್ತು
ಪೋಷಕರ ಸಂಬಂಧ ವೃದ್ದಿ: ಸರಿಯಾದ ಪ್ರತಿಕ್ರಿಯೆ
ಮತ್ತು ಸಂವಹನವು ಶಿಕ್ಷಕರು ಮತ್ತು ಪೋಷಕರ ನಡುವೆ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇಬ್ಬರೂ ಒಂದೇ
ಗುರಿಯೊಂದಿಗೆ (ಮಗುವಿನ ಅಭಿವೃದ್ದಿ) ಕೆಲಸ ಮಾಡಿದಾಗ ಕಲಿಕೆಯ ಗುಣಮಟ್ಟ ಹೆಚ್ಚಾಗುತ್ತದೆ.
4.
ಮಗುವಿನ ಆತ್ಮವಿಶ್ವಾಸ
ಹೆಚ್ಚಳ: ತಮ್ಮ ಕಲಿಕೆಯ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಚರ್ಚಿಸುತ್ತಿದ್ದಾರೆ
ಎಂದು ತಿಳಿದಾಗ ಮಗುವಿಗೆ ತನ್ನ ಜವಾಬ್ದಾರಿಯ ಅರಿವಾಗುತ್ತದೆ. ಪೋಷಕರ ಸಕಾರಾತ್ಮಕ ಪ್ರತಿಕ್ರಿಯೆಯು
ಮಗುವಿನ ಕಲಿಕೆಯ ಉತ್ಸಾಹವನ್ನು ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
5.
ಕಲಿಕಾ ವಿಧಾನದಲ್ಲಿ
ಬದಲಾವಣೆ: ಒಂದು ವೇಳೆ ಮಗುವಿನ ತರಗತಿಯಲ್ಲಿನ
ಬೋಧನಾ ವಿಧಾನ ಅರ್ಥವಾಗದಿದ್ದರೆ, ಪೋಷಕರು ಅದರ ಬಗ್ಗೆ ಪ್ರತಿಕ್ರಿಯೆ ನೀಡಬಹುದು. ಈ ಮಾಹಿತಿಯು ಶಿಕ್ಷಕರಿಗೆ
ತಮ್ಮ ಬೋಧನಾ ಶೈಲಿಯನ್ನು ಮಗುವಿನ ಅಗತ್ಯಕ್ಕೆ ಅನುಗುಣವಾಗಿ ಮಾರ್ಪಡಿಸಿಕೊಳ್ಳಲು ಅಥವಾ ಬಹುಮಾಧ್ಯಮ
ಬಳಕೆಯಂತಹ ಹೊಸ ವಿಧಾನಗಳನ್ನು ಬಳಸಲು ಪ್ರೇರೇಪಿಸುತ್ತದೆ.
6.
ಶಿಸ್ತು ಮತ್ತು
ಸಮಯ ನಿರ್ವಹಣೆ: ಮನೆಯಲ್ಲಿ ಮಗುವಿನ
ಓದಿನ ಅಭ್ಯಾಸ ಹೇಗಿದೆ ಎಂಬುದರ ಬಗ್ಗೆ ಪೋಷಕರು ಮಾಹಿತಿ ನೀಡಿದಾಗ, ಶಾಲೆಯಲ್ಲಿ ಶಿಕ್ಷಕರು ಅದಕ್ಕೆ
ತಕ್ಕಂತೆ ಮಗುವಿಗೆ ಮಾರ್ಗದರ್ಶನ ನೀಡಬಹುದು. ಇದು ಮಗುವಿನಲ್ಲಿ ಉತ್ತಮ ಸಮಯ ನಿರ್ವಹಣೆ ಮತ್ತು ಶಿಸ್ತನ್ನು
ಬೆಳೆಸುತ್ತದೆ.
ಕಲಿಕಾ ಪ್ರಕ್ರಿಯೆಯನ್ನು ಸುಧಾರಿಸುವಲ್ಲಿ ಶಿಕ್ಷಕರ ಪುನರ್ ಪುಷ್ಠಿಯ
/ ಪ್ರತಿಕ್ರಿಯೆ / ಪ್ರತ್ಯಾದಾನ ದ ಪಾತ್ರ
ಕಲಿಕಾಪ್ರಕ್ರಿಯೆಯಲ್ಲಿ ಶಿಕ್ಷಕರ ಪುನರ್ ಪುಷ್ಟಿಯು ಅತ್ಯಂತ ನಿರ್ಣಾಯಕ
ಪಾತ್ರ ವಹಿಸುತ್ತದೆ. ಇದು ಕೇವಲ ಅಂಕಗಳನ್ನು ನೀಡುವುದಕ್ಕೆ ಸೀಮಿತವಾಗಿರದೆ, ವಿದ್ಯಾರ್ಥಿಯ ಬೆಳವಣಿಗೆಯ
ದಾರಿದೀಪವಾಗಿ ಕೆಲಸ ಮಾಡುತ್ತದೆ.
ಕಲಿಕೆಯನ್ನು
ಉತ್ತಮಪಡಿಸುವಲ್ಲಿ ಶಿಕ್ಷಕರ ಪುನರ್ ಪುಷ್ಟಿಯ ಪ್ರಮುಖ ಪಾತ್ರಗಳು ಹೀಗಿವೆ,
1. ಕಲಿಕೆಯ
ಅಂತರವನ್ನು ಗುರುತಿಸುವುದು: ವಿದ್ಯಾರ್ಥಿಗೆ ವಿಷಯದ ಬಗ್ಗೆ
ಎಷ್ಟು ತಿಳಿದಿದೆ ಮತ್ತು ಇನ್ನೂ ಏನು ತಿಳಿಯಬೇಕಿದೆ ಎಂಬುದರ ನಡುವಿನ ವ್ಯತ್ಯಾಸವನ್ನು ಶಿಕ್ಷಕರ ಪ್ರತಿಕ್ರಿಯೆ
ತೋರಿಸಿಕೊಡುತ್ತದೆ.
ಇದರಿಂದ ವಿದ್ಯಾರ್ಥಿ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು
ಮತ್ತು ವಿಷಯವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಇದು ಸಹಕಾರಿ.
2. ಪ್ರೇರಣೆ
ಮತ್ತು ಅತ್ಮವಿಶ್ವಾಸ ಹೆಚ್ಚಳ: ಸಕಾರಾತ್ಮಕ ಮತ್ತು ರಚನಾತ್ಮಕ
ಪ್ರತಿಕ್ರಿಯೆಯು ವಿದ್ಯಾರ್ಥಿಗಳಲ್ಲಿ “ನನ್ನಿಂದ ಸಾಧ್ಯ”
ಎಂಬ ಆತ್ಮವಿಶ್ವಾಸವನ್ನು ತುಂಬುತ್ತದೆ.
3. ಸ್ವಯಂ
ಮೌಲ್ಯಮಾಪನಕ್ಕೆ ಪ್ರೋತ್ಸಾಹ: ಶಿಕ್ಷಕರು ನೀಡುವ ವಿಮರ್ಶೆಯು
ವಿದ್ಯಾರ್ಥಿಗಳು ತಮ್ಮ ಸ್ವಂತ ಪ್ರಗತಿಯನ್ನು ತಾವೇ ವಿಶ್ಲೇಷಿಸಿಕೊಳ್ಳುವಂತೆ ಮಾಡುತ್ತದೆ. ಇದರಿಂದ
ಅವರು ಸ್ವತಂತ್ರ ಕಲಿಕೆಯ ವಿದ್ಯಾರ್ಥಿಗಳಾಗುತ್ತಾರೆ.
4. ವೈಯಕ್ತಿಕ
ಗಮನ: ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಗೆ ವೇಗ ಮತ್ತು
ಶೈಲಿ ವಿಭಿನ್ನವಾಗಿರುತ್ತದೆ. ಶಿಕ್ಷಕರ ವೈಯಕ್ತಿಕ ಪುನರ್ ಪುಷ್ಟಿಯು ಪ್ರತಿಯೊಬ್ಬರಿಗೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಮಾರ್ಗದರ್ಶನ
ನೀಡಲು ಸಹಾಯ ಮಾಡುತ್ತದೆ.
5. ಬೋಧನಾ
ಕ್ರಮದಲ್ಲಿ ಸುಧಾರಣೆ: ಪುನರ್ ಪುಷ್ಟಿಯು ಕೇವಲ ವಿದ್ಯಾರ್ಥಿಗಳಿಗಷ್ಟೇ
ಅಲ್ಲ,,ಶಿಕ್ಷಕರಿಗೂ ಸಹಕಾರಿ. ವಿದ್ಯಾರ್ಥಿಗಳ ಪುನರ್ ಪುಷ್ಟಿ ಮತ್ತು ಫಲಿತಾಂಶದ ಆಧಾರದ ಮೇಲೆ ಶಿಕ್ಷಕರು
ತಮ್ಮ ಬೋಧನಾ ಶೈಲಿಯನ್ನು ಬದಲಾಯಿಸಿಕೊಳ್ಳಬಹುದು.
Comments
Post a Comment