ಕಲಿಕಾ ಮಾಪನದಲ್ಲಿ ವಿವಿಧ ಸಾಧನ ಹಾಗೂ ತಂತ್ರಗಳು

ಕಲಿಕಾ ಮಾಪನದಲ್ಲಿ ವಿವಿಧ ಸಾಧನ ಹಾಗೂ ತಂತ್ರಗಳು

ಉತ್ತಮ ಅಳತೆಯ ಮಾಪನದ ಗುಣಲಕ್ಷಣಗಳು:  

      ಮೌಲ್ಯಮಾಪನ ಕಾರ್ಯಕ್ರಮದಲ್ಲಿ ಬಳಸುವ ವಿವಿಧ ಸಾಧನಗಳು ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರಬೇಕಾಗಿರುತ್ತದೆ. ಇಂತಹ ಪ್ರಮುಖ ಗುಣಲಕ್ಷಣಗಳೆಂದರೆ – ಸಮಂಜಸತೆ, ವಿಶ್ವಾಸನೀಯತೆ, ವಸ್ತುನಿಷ್ಠತೆ ಮತ್ತು ಪ್ರಯೋಗಾರ್ಹತೆ.

1. ಸಮಂಜಸತೆ (Validity):

       ಯಾವ ಅಂಶವನ್ನು ಅಳೆಯಲು ಪರೀಕ್ಷೆ ಸಾಧನವನ್ನು ರಚಿಸಲಾಗಿದೆಯೋ ಅದು ಆ ಅಂಶವನ್ನು ನಿಖರವಾಗಿ ಅಳೆಯಲು ಸಾಧ್ಯವಾದರೆ ಅದು ಸಮಂಜಸವಾಗಿದೆ ಎಂದು ಹೇಳುತ್ತೇವೆ. ಪರೀಕ್ಷಾ ಸಾಧನ ಯಾವುದನ್ನು ಅಳೆಯಲು ಪ್ರಯತ್ನಿಸುತ್ತಿದೆಯೋ ಅದನ್ನು ಪರಿಣಾಮಕಾರಿಯಾಗಿ ಅಳೆಯಬೇಕು ಮತ್ತು ಪರೀಕ್ಷಾ ಸಾಧನ ಸಂಬಂಧಿಸಿದ ಅಂಶವನ್ನು ಎಷ್ಟು ನಿಖರವಾಗಿ ಅಳೆಯುತ್ತದೆ ಎಂಬುದರ ಆಧಾರದ ಮೇಲೆ ಸಮಂಜಸತೆಯನ್ನು ನಿರ್ಧರಿಸುತ್ತೇವೆ.

          ಸಮಂಜಸತೆ ಹೆಚ್ಚಿನ, ಸಾಧಾರಣ ಹಾಗೂ ಕಡಿಮೆ ಪ್ರಮಾಣದಲ್ಲಿ ಕಂಡುಬರಬಹುದು. ಉದಾಹಾರಣೆಗೆ, ರೇಖಾಗಣಿತದ ಪರೀಕ್ಷೆಯ ಫಲಿತಾಂಶ ತಾರ್ಕಿಕ ನಿಗಮನ ಚಿಂತನೆ ಸೂಚಿಸಲು ಹೆಚ್ಚಿನ ಸಮಂಜಸತೆ ಹೊಂದಿದ್ದರೆ, ಚಿತ್ರ ರಚನಾ ಕೌಶಲ್ಯ ಸೂಚಿಸಲು ಸಾಧಾರಣ ಸಮಂಜಸತೆ ಹೊಂದಿದೆ ಮತ್ತು ಗಣಕ ಕೌಶಲ್ಯಕ್ಕೆ ಕಡಿಮೆ ಸಮಂಜಸತೆ ಹೊಂದಿದೆ.

       ಒಂದು ಬುದ್ದಿಶಕ್ತಿ ಪರೀಕ್ಷೆಯು ಬುದ್ದಿಶಕ್ತಿಯನ್ನು ಅಳೆಯಲು ಸಮಂಜಸವಾಗಿದೆ ಆದರೆ ಭಾಷಾ ಸಾಮರ್ಥ್ಯವನ್ನು ಅಳೆಯಲು ಸಮಂಜಸವಾಗಿರುವುದಿಲ್ಲ.

ಸಮಂಜಸತೆಯ ವಿಧಗಳು:

  1. ವಿಷಯ ಸಮಂಜಸತೆ
  2. ನಿರ್ಣಾಯಕ ಸಂಬಂಧಿ ಸಮಂಜಸತೆ
  3. ಪ್ರಾಗುಕ್ತಿ ಸಮಂಜಸತೆ
  4. ಸಹಗಾಮಿ ಸಮಂಜಸತೆ
  5. ಕಲ್ಪನಾಗುಣ ಸಮಂಜಸತೆ

ಸಮಂಜಸತೆ ಮೇಲೆ ಪ್ರಭಾವ ಬೀರುವ ಅಂಶಗಳು (ಅಡ್ಡಿಯಾಗುವ ಅಂಶಗಳು)

  1. ಅಸ್ಪಷ್ಟ ನಿರ್ದೇಶನಗಳು – ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಹೇಗೆ ಉತ್ತರಿಸಬೇಕೆಂಬುದು ಸ್ಪಷ್ಟವಾಗಿರದಿದ್ದರೆ ಅದು ಸಮಂಜಸತೆಗೆ ಅಡ್ಡಿಯನ್ನುಂಟುಮಾಡುತ್ತದೆ.
  2. ವಾಕ್ಯಗಳ ರಚನೆ ಅರ್ಥಮಾಡಿಕೊಳ್ಳಲು ಕಠಿಣವಾಗಿರುವುದು.
  3. ಪರೀಕ್ಷಾಂಶಗಳನ್ನು ಸರಿಯಾಗಿ ರೂಪಿಸದಿರುವುದು.
  4. ಅಸಮರ್ಪಕ ಪರೀಕ್ಷಾಂಶಗಳ ಬಳಕೆ.
  5. ಅಭಿವ್ಯಕ್ತಿ ಮಾಧ್ಯಮ; ಒಂದು ಪರೀಕ್ಷೆ ಆಂಗ್ಲ ಮಾಧ್ಯಮದಲ್ಲಿದ್ದಾಗ, ಆಂಗ್ಲ ಭಾಷೆ ಸರಿಯಾಗಿ ಬರದೇ ಇರುವ ವಿದ್ಯಾರ್ಥಿಗಳು ಸಮರ್ಪಕವಾಗಿ ಉತ್ತರಿಸಲಾರರು. ಇಲ್ಲಿ ಈ ಪರೀಕ್ಷೆ ವಿದ್ಯಾರ್ಥಿಗಳ ವಿಷಯ ಜ್ಞಾನವನ್ನು ಪರೀಕ್ಷಿಸದೇ ಅವರ ಭಾಷಾ ಸಾಮರ್ಥ್ಯವನ್ನು ಅಳೆಯುತ್ತದೆ.
  6. ವಿದ್ಯಾರ್ಥಿಗಳ ಪದಸಂಪತ್ತು: ವಿದ್ಯಾರ್ಥಿಗಳ ಕ್ರಿಯಾಶೀಲ ಪದಸಂಪತ್ತು ಕಡಿಮೆಯಾಗಿದ್ದಾಗ ಅವರು ಪ್ರಶ್ನೆಯನ್ನು ಸಮರ್ಪಕವಾಗಿ ಓದಿ ಅರ್ಥಮಾಡಿಕೊಳ್ಳಲಾಗದೇ ಪ್ರಶ್ನೆಯನ್ನು ಉತ್ತರಿಸಲಾಗುವುದಿಲ್ಲ. ಇದು ಪರೀಕ್ಷೆಯ ಸಮಂಜಸತೆ ಕಡಿಮೆಯಾಗಲು ಕಾರಣವಾಗುತ್ತದೆ.
  7. ಬಾಹ್ಯ ಅಂಶಗಳ ಪ್ರಭಾವ: ಪರೀಕ್ಷೆಯಲ್ಲಿ ಬಾಹ್ಯ ಅಂಶಗಳಾದ ಬರವಣಿಗೆ ಶೈಲಿ, ವ್ಯಾಕರಣ ಶುದ್ಧತೆ, ಕಾಗುಣಿತ, ಲೇಖನ ಚಿಹ್ನೆಗಳು, ಕೈ ಬರಹ, ವಿಷಯ ವ್ಯವಸ್ಥೆಗೊಳಿಸುವ ರೀತಿ ಇವೆಲ್ಲವೂ ಸಹ ಪರೀಕ್ಷಾ ಸಮಂಜಸತೆಯ ಮೇಲೆ ಪ್ರಭಾವ ಬೀರುತ್ತವೆ.
  8. ಅಸಮರ್ಜಪಕವಾದ ಸಮಯದ ಮಿತಿ: ವೇಗದ ಪರೀಕ್ಷೆಯಲ್ಲಿ ಸಮಯದ ಮಿತಿಯನ್ನು ಸರಿಯಾಗಿ ನಿಗದಿಗೊಳಿಸದಿದ್ದರೆ ಪರೀಕ್ಷಾ ಫಲಿತಾಂಶ ಸೂಕ್ತವಾಗಿರುವುದಿಲ್ಲ.
  9. ಪರೀಕ್ಷಾ ಸಾಧನ ಸಂಪೂರ್ಣ ವಿಷಯ ಒಳಗೊಳ್ಳದಿರುವುದು.
  10. ವಿವಿಧ ವಿಷಯ ಭಾಗಗಳಿಗೆ, ಪ್ರಶ್ನೆಗಳ ಪ್ರಕಾರಗಳಿಗೆ ಅಂದ ಪ್ರಾಧಾನ್ಯತೆ ನೀಡದಿರುವುದು.

2. ವಿಶ್ವಸನೀಯತೆ (Reliability):

         ಒಂದು ಪರೀಕ್ಷಾ ಸಾಧನದ ಎರಡನೆಯ ಪ್ರಮುಖ ಗುಣಲಕ್ಷಣವೆಂದರೆ ವಿಶ್ವಸನೀಯತೆ, ಒಂದು ಅಳತೆಯ ಸಾಧನ ಅಳತೆಯ ನಂತರ ಒದಗಿಸುವ ಮೌಲ್ಯ ನಿಖರ ಮತ್ತು ನಿರ್ದಿಷ್ಟವಾಗಿರಬೇಕು, ಆಗ ಅಳತೆಯ ಸಾಧನ ನಂಬಲರ್ಹವಾಗಿದೆ ಎನ್ನುತ್ತೇವೆ.

          ಒಂದು ಸಾಧನಾ ಪರೀಕ್ಷೆಯನ್ನು ಒಂದು ತರಗತಿಗೆ ಎರಡು ಬೇರೆ ಬೇರೆ ಸಂದರ್ಭಗಳಲ್ಲಿ ನೀಡಿದಾಗ, ಮೊದಲ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಯಾವ ಸ್ಥಾನವನ್ನು ಪಡೆದಿರುವರೋ ಎರಡನೆಯ ಪರೀಕ್ಷೆಯಲ್ಲಿಯೂ ಸಹ ಅಂತಹುದೇ ಸ್ಥಾನ ಪಡೆದರೆ ಆಗ ಆ ಪರೀಕ್ಷೆ ವಿಶ್ವಸನೀಯತೆ ಹೊಂದಿದೆ ಎಂದು ಪರಿಗಣಿಸುತ್ತೇವೆ.

      ಭೌತಿಕ ಅಳತೆಯ ಸಾಧನಗಳಷ್ಟು ನಿಖರತೆ ಮತ್ತು ವಿಶ್ವಸನೀಯತೆಯನ್ನು ಮನೋವೈಜ್ಞಾನಿಕ ಮತ್ತು ಶೈಕ್ಷಣಿಕ ಅಳತೆಗಳಲ್ಲಿ ಕಾಣುವುದು ಕಷ್ಟ.

ವಿಶ್ವಸನೀಯತೆಯ ಮೇಲೆ ಪ್ರಭಾವ ಬೀರುವ ಅಂಶಗಳು:

  1. ವಿಶ್ವಸನೀಯತೆ ನಿರ್ಧರಿಸಲು ಬಳಸುವ ವಿಧಾನ.
  2. ಎರಡು ಬಾರಿ ಪರೀಕ್ಷೆ ನೀಡುವ ನಡುವಿನ ಅಂತರ.
  3. ಪರೀಕ್ಷೆಯ ಉದ್ದ – ಪರೀಕ್ಷೆಯ ಉದ್ದ ಅಂದರೆ ಪರೀಕ್ಷಾಂಶಗಳು ತುಂಬಾ ಕಡಿಮೆ ಇದ್ದರೆ ವಿಶ್ವಸನೀಯತೆ ಕಡಿಮೆಯಾಗುತ್ತದೆ.
  4. ವೇಗ
  5. ಗುಂಪಿನ ಸಮರೂಪತೆ – ಗುಂಪಿನಲ್ಲಿ ವಿಭಿನ್ನ ಸಾಮರ್ಥ್ಯದ ಮಕ್ಕಳಿದ್ದರೆ ಪರೀಕ್ಷೆಯ ವಿಶ್ವಸನೀಯತೆ ಉತ್ತಮವಾಗಿರುತ್ತದೆ. ಗಂಪು ಕನಿಷ್ಠ ವ್ಯಾಪ್ತಿ ಸಾಮರ್ಥ್ಯವನ್ನು ಹೊಂದಿದ್ದರೆ ಸಮರೂಪತೆ ಹೆಚ್ಚಾದಲ್ಲಿ ವಿಶ್ವಸನೀಯತೆ ಕಡಿಮೆಯಾಗುತ್ತದೆ.
  6. ಪರೀಕ್ಷಾಂಶಗಳ ಕಠಿಣತೆ.
  7. ಅಂಕ ನೀಡಿಕೆಯಲ್ಲಿ ವಸ್ತುನಿಷ್ಟತೆಯಿಲ್ಲದಿರುವುದು.
  8. ಪರೀಕ್ಷಾಂಶಗಳನ್ನು ರೂಪಿಸುವಾಗ ಅಸ್ಪಷ್ಟ ಪದಗಳ ಬಳಕೆ.
  9. ಪ್ರಶ್ನೆಪತ್ರಿಕೆಯಲ್ಲಿರುವ ಆಯ್ಕೆಯ ಅವಕಾಶಗಳು ವಿಶ್ವಸನೀಯತೆಯನ್ನು ಕಡಿಮೆಮಾಡುತ್ತದೆ.
  10. ಪರೀಕ್ಷೆ ನೀಡುವಲ್ಲಿ ಅಸ್ಥಿರತೆ:  ಪರೀಕ್ಷಾ ನಿರ್ವಹಣೆಯಲ್ಲಿನ ಅಸ್ಥಿರತೆಯ ಅಂಶಗಳಾದ ಸಮಯದ ವ್ಯತ್ಯಾಸ, ಪರೀಕ್ಷೆ ನೀಡುವ ಕ್ರಮ, ಸೂಕ್ತ ನಿರ್ದೇಶನಗಳಿಲ್ಲದಿರುವುದು, ವಿದ್ಯಾರ್ಥಿಗಳ ಆಸಕ್ತಿ ಮತ್ತು ಅವಧಾನಗಳಲ್ಲಿನ ವ್ಯತ್ಯಾಸ, ಮನೋಧಾರಣೆಯಲ್ಲಿನ ಬದಲಾವಣೆ ವಿಶ್ವಸನೀಯತೆ ಕಡಿಮೆಯಾಗಲು ಕಾರಣವಾಗುತ್ತವೆ.

3. ವಸ್ತುನಿಷ್ಠತೆ (Objectivity):

        ಅಂಕ ನೀಡುವ ವ್ಯಕ್ತಿಯ ವೈಯಕ್ತಿಕ ತೀರ್ಮಾನಗಳು ಅಂಕ ನೀಡುವಿಕೆಯಲ್ಲಿ ಪ್ರಭಾವ ಬೀರದಿದ್ದರೆ ಆ ಪರೀಕ್ಷೆ ವಸ್ತುನಿಷ್ಠವಾಗಿದೆ ಎನ್ನುತ್ತೇವೆ. ಪರೀಕ್ಷೆಯಲ್ಲಿನ ವಸ್ತುನಿಷ್ಠತೆ ಅಂಕ ನೀಡುವ ವ್ಯಕ್ತಿಯ ಪೂರ್ವಗ್ರಹ ಪೀಡಿತ ಅಭಿಪ್ರಾಯ ಅಥವಾ ತೀರ್ಮಾನಗಳಿಗೆ ಅವಕಾಶ ನೀಡುವುದಿಲ್ಲ. ಪರೀಕ್ಷಾ ಸಾಧನಾ ವಸ್ತುನಿಷ್ಠವಾಗಿದ್ದಾಗ ಯಾವುದೇ ಇಬ್ಬರು ಪರಿಣಿತ ಮೌಲ್ಯಮಾಪಕರು ನೀಡುವ ಅಂಕಗಳಲ್ಲಿ ವ್ಯತ್ಯಾಸ ಕಂಡುಬರುವುದಿಲ್ಲ.

       ವಸ್ತುನಿಷ್ಠ ಮಾದರಿಯ ಪರೀಕ್ಷೆಯಲ್ಲಿ ಕೇವಲ ಸರಿ ಅಥವಾ ತಪ್ಪು ಎಂದು ತೀರ್ಮಾನಿಸುವುದರಿಂದ ನಿರ್ಣಯಗಳು ನಿಖರವಾಗಿರುತ್ತವೆ ಮತ್ತು ವಿಶ್ವಸನೀಯವಾಗಿರುತ್ತವೆ. ಇವುಗಳಲ್ಲಿ ಬಹು ಅಂಶ ಮಾದರಿ ಪ್ರಶ್ನೆಗಳು, ಹೊಂದಿಸಿ ಬರೆಯಿರಿ ಮಾದರಿ ಪ್ರಶ್ನೆಗಳು, ಪರ್ಯಾಯ ಉತ್ತರ ಮಾದರಿ ಪ್ರಶ್ನೆಗಳು, ಹೆಚ್ಚು ವಸ್ತುನಿಷ್ಠವಾಗಿರುತ್ತವೆ.  ಪ್ರಬಂಧಮಾದರಿ ಪ್ರಶ್ನೆಗಳು ಸಾಮಾನ್ಯವಾಗಿ ವ್ಯಕ್ತಿನಿಷ್ಠತೆ ಹೊಂದಿರುತ್ತವೆ. ಅಂದಾಕ್ಷಣ ಪ್ರಬಂಧ ಮಾದರಿ ಹಾಗೂ ಚಿಕ್ಕ ಉತ್ತರ ಮಾದರಿ ಪರೀಕ್ಷಾಂಶಗಳನ್ನು ಬಳಸಬಾರದೆಂದಲ್ಲ, ಸಾದ್ಯವಾದಷ್ಠೂ ಮಟ್ಟಿಗೆ ಮೌಲ್ಯಮಾಪನ ಸಾಧನವನ್ನು ವಸ್ತುನಿಷ್ಠವಾಗಿಸಬೇಕು.

ಪರೀಕ್ಷೆಯ ವಸ್ತುನಿಷ್ಠತೆಯನ್ನು ಈ ಕೆಳಕಂಡ ರೀತಿಯಲ್ಲಿ ಹೆಚ್ಚಿಸಬಹುದು.

  1. ಹೆಚ್ಚು ವಸ್ತುನಿಷ್ಠ ಮಾದರಿ ಪ್ರಶ್ನೆಗಳನ್ನು ಬಳಸುವ ಮೂಲಕ.
  2. ಪ್ರಬಂಧ ಮಾದರಿ ಪ್ರಶ್ನೆಗಳನ್ನು ಸ್ಪಷ್ಠವಾಗಿ ರೂಪಿಸಬೇಕು ಮತ್ತು ಸ್ಪಷ್ಠ ನಿರ್ದೇಶನಗಳನ್ನು ಒಳಗೊಂಡಿರಬೇಕು.
  3. ಅಂಕ ಸೂಚಿಯನ್ನು ತಯಾರಿಸಿಕೊಳ್ಳುವ ಮೂಲಕ.
  4. ಒಂದು ಪರೀಕ್ಷೆಯನ್ನು ಇಬ್ಬರು ಪರೀಕ್ಷಕರು ಮೌಲ್ಯಮಾಪನ ಮಾಡಿ, ಇಬ್ಬರೂ ನೀಡಿದ ಅಂಕಗಳ ಸರಾಸರಿಯನ್ನು ಅಂತಿಮ ಅಂಕಗಳಾಗಿ ಪರಿಗಣಿಸಬೇಕು.

4.  ಪ್ರಯೋಗಾರ್ಹತೆ (Practicability):

         ಪರೀಕ್ಷೆಯ ಪ್ರಯೋಗಾರ್ಹತೆ ಪರೀಕ್ಷೆಯ ನಿರ್ವಹಣೆ, ಅಂಕ ನೀಡುವಿಕೆ ಮತ್ತು ಮಿತವ್ಯಯತೆಯಂತಹ ಪ್ರಾಯೋಗಿಕ ಅಂಶಗಳಿಗೆ ಸಂಬಂಧಿಸಿದೆ.

ಎ) ಪರೀಕ್ಷೆ ನೀಡುವಿಕೆ: ಪರೀಕ್ಷಾ ಸಾಮಗ್ರಿಗಳನ್ನು ಸಿದ್ದಗೊಳಿಸಲು, ವಿತರಿಸಲು ಮತ್ತು ಸಂಗ್ರಹಿಸಲು ಇರುವ   ಅವಕಾಶ.

Ø  ವಿದ್ಯಾರ್ಥಿಗಳಿಗೆ ನೀಡುವ ನಿರ್ದೇಶನಗಳು ಸರಳ, ಸ್ಪಷ್ಟ ಹಾಗೂ ಸಂಕ್ಷಿಪ್ತವಾಗಿರಬೇಕು.

Ø  ಪರೀಕ್ಷಾಂಶಗಳನ್ನು ಓದಲು, ಉತ್ತರಿಸಲು ಹಾಗೂ ಒಂದು ಪುಟದಿಂದ ಮತ್ತೊಂದು ಪುಟಕ್ಕೆ, ಸಾಗಲು ಯಾವುದೇ ತೊಂದರೆ ಇರಬಾರದು.

Ø  ಮಾದರಿ ಪ್ರಶ್ನೆ ಹಾಗೂ ಉತ್ತರಿಸುವ ವಿಧಾನವನ್ನು ಸ್ಪಷ್ಟವಾಗಿ ಸಮೂದಿಸಿರಬೇಕು.

Ø  ಪರೀಕ್ಷಾ ಸಾಧನದ ತಾಂತ್ರಿಕ ಅಂಶಗಳಾದ ಪುಟದ ಗಾತ್ರ, ಸಾಲಿನ ಉದ್ದ, ಪ್ರಶ್ನೆಯ ಮುದ್ರಣ ಉತ್ತರಿಸುವ ವಿದ್ಯಾರ್ಥಗಳಿಗೆ ಸೂಕ್ತವಾಗಿರಬೇಕು.

ಬಿ) ಅಂಕ ನೀಡುವಿಕೆಯಲ್ಲಿ ಸುಲಭತೆ:

Ø  ಸರಳವಾಗಿ, ಶೀಘ್ರವಾಗಿ ಅಂಕ ನೀಡುವಂತಿರಬೇಕು.

Ø  ಪರೀಕ್ಷಾರ್ಥಿಯ ಬಗ್ಗೆ ಹೆಚ್ಚು ತಿಳಿಯದಿರುವ ವ್ಯಕ್ತಿಗಳು ನಿಖರವಾಗಿ ಅಂಕ ನೀಡುವಂತಿರಬೇಕು. (ಅಂಕ ಸೂಚಿ ಬಳಸಿಕೊಂಡು)

ಸಿ) ಅರ್ಥೈಸುವಿಕೆಯಲ್ಲಿ ಸುಲಭತೆ:

Ø  ಪರೀಕ್ಷೆಯಿಂದ ಶೇಕಡಾ ಕಚ್ಚಾ ಅಂಕಗಳನ್ನು ಸುಲಭವಾಗಿ ಅರ್ಥಪೂರ್ಣ ಪ್ರಾಪ್ತಾಂಕಗಳಾಗಿ ಪರಿವರ್ತಿಸುವಂತಿರಬೇಕು.

Ø  ತರಗತಿಯ ಶಿಕ್ಷಕರು ಸಹ ಫಲಿತಾಂಶವನ್ನು ಅರ್ಥೈಸುವಂತಿರಬೇಕು.

ಡಿ) ಮಿತವ್ಯಯತೆ:

Ø  ಪರೀಕ್ಷೆ ನೀಡಲು ಮತ್ತು ಅಂಕಗಳನ್ನು ಸೂಚಿಸಲು ಬೇಕಾಗುವ ಸಮಯ ಮಿತವ್ಯಯಿಕವಾಗಿರಬೇಕು.

Ø  ಪರೀಕ್ಷಾ ಸಾಧನ ಹಣಕಾಸಿನ ದೃಷ್ಠಿಯಿಂದಲೂ ಮಿತವ್ಯಯಿಕವಾಗಿರಬೇಕು.

ಯಾವುದೇ ಒಂದು ಪರೀಕ್ಷಾ ಸಾಧನ ಉತ್ತಮ ಅಳತೆಯ ಸಾಧನ ಎನ್ನಿಸಿಕೊಳ್ಳಬೇಕಾದರೆ ಅದು ಪ್ರಮುಖವಾಗಿ ಸಮಂಜಸತೆ, ವಿಶ್ವಸನೀಯತೆ, ವಸ್ತುನಿಷ್ಠತೆ ಮತ್ತು ಪ್ರಯೋಗಾರ್ಹತೆಯ ಗುಣಗಳನ್ನು ಹೊಂದಿರಬೇಕು. 

Comments

Popular posts from this blog

ಮೌಲ್ಯಮಾಪನದ ವಿಧಗಳು

ಕಲಿಕಾ ಮಾಪನದ ಅರ್ಥ,ವ್ಯಾಖ್ಯಾನ,ಮಾಪನದ ಉದ್ದೇಶಗಳು

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ (ಸಿಸಿಇ)