ಕಲಿಕಾ ಮಾಪನದ ಕ್ಷೇತ್ರಗಳು

 

ಕಲಿಕಾ ಮಾಪನದ ಕ್ಷೇತ್ರಗಳು

ಪಠ್ಯ ಕಲಿಕಾ ಮಾಪನ

      ತರಗತಿಯಲ್ಲಿ ಮಗುವಿನ ಅರಿವಿನ ವಿಕಾಸ ಹಾಗೂ ಪಠ್ಯ ವಿಷಯಗಳ ಕಲಿಕಾ ಪ್ರಗತಿಯನ್ನು ಅಳೆಯುವುದೇ ಪಠ್ಯ ಕಲಿಕಾ ಮಾಪನ. ಪ್ರತೀ ವಿಷಯದಲ್ಲೂ ಎಷ್ಟರ ಮಟ್ಟಿಗೆ ಪಾಂಡಿತ್ಯವನ್ನು ಪಡೆದಿದ್ದಾನೆ ಎಂಬುದನ್ನು ಅಳೆಯಲು ಈ ಕಲಿಕಾ ಮಾಪನ ಸಹಕಾರಿಯಾಗಿದೆ.

ಕಲಿಕಾ ಮಾಪನ ಮಾಡುವ ಮುಖ್ಯ ವಿಷಯಗಳು:

  • ಭಾಷೆಗಳು (ಕನ್ನಡ, ಆಂಗ್ಲಭಾಷೆ, ಮತ್ತು ಹಿಂದಿ ಇತರೆ)
  • ಮುಖ್ಯ ವಿಷಯಗಳು (ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ)

    ಪಠ್ಯ ಕಲಿಕಾ ಮಾಪನವನ್ನು ಎರಡು ಮುಖ್ಯ ಹಂತಗಳಲ್ಲಿ ನಡೆಸಲಾಗುವುದು,

  1. ರೂಪಣಾತ್ಮಕ ಕಲಿಕಾ ಮಾಪನ: ಇದು ಬೋಧನಾ-ಕಲಿಕಾ ಪ್ರಕ್ರಿಯೆ ನಡೆಯುತ್ತಿರುವಾಗ ನಿರಂತರವಾಗಿ ಮಾಡುವ ಮಾಪನವಾಗಿದೆ. ಇದರ ಮುಖ್ಯ ಉದ್ದೇಶ ವಿದ್ಯಾರ್ಥಿಯ ಕಲಿಕಾ ನ್ಯೂನ್ಯತೆಗಳನ್ನು ಗುರುತಿಸಿ, ಸುಧಾರಣೆಗೆ ಅವಕಾಶ ನೀಡುವುದಾಗಿದೆ.

ಉದ್ದೇಶ: ಕಲಿಕೆಯನ್ನು ಸುಧಾರಿಸುವುದು.

ಸಾಧನಗಳ ಬಳಕೆ: ತರಗತಿ ವೀಕ್ಷಣೆ, ಮೌಖಿಕ ಪ್ರಶ್ನೆಗಳು, ಗೃಹಕೆಲಸ, ನಿಯೋಜಿತ ಕಾರ್ಯಗಳು, ಪ್ರಾಯೋಗಿಕ ಪರೀಕ್ಷೆ,ಯೋಜನೆಗಳು, ರಸಪ್ರಶ್ನೆ ಮತ್ತು ಕಿರುಪರೀಕ್ಷೆಗಳು.

ಕಾಲಾವಧಿ: ವರ್ಷವಿಡೀ ನಿರಂತರವಾಗಿ ನಡೆಯುತ್ತಿರುತ್ತದೆ.

  1. ಸಂಕಲನಾತ್ಮಕ ಕಲಿಕಾ ಮಾಪನ: ಇದು ಒಂದು ನಿರ್ದಿಷ್ಟ ಅವಧಿ ಅಥವಾ ಸೆಮಿಸ್ಟರ್‌ ಮುಗಿದ ನಂತರ ವಿದ್ಯಾರ್ಥಿಯ ಒಟ್ಟು ಕಲಿಕೆಯ ಸಾಧನೆಯನ್ನು ಅಳೆಯಲು ನಡೆಸುವ ಔಪಚಾರಿಕ ಪರೀಕ್ಷೆಯಾಗಿದೆ.

ಉದ್ದೇಶ: ಕಲಿಕೆಯ ಸಾಧನೆಯನ್ನು ಪ್ರಮಾಣೀಕರಿಸುವುದು.

ಸಾಧನಗಳ ಬಳಕೆ: ಕಲಿಕಾ ಅವಧಿಯ ಕೊನೆಯಲ್ಲಿ ಮಾಡುವ ಲಿಖಿತ ಪರೀಕ್ಷೆಗಳು, ಸೆಮಿಸ್ಟರ್‌ ಕೊನೆಯಲ್ಲಿ ಮತ್ತು ವಾರ್ಷಿಕ ಪರೀಕ್ಷೆಗಳು.

ಲಾಭಗಳು: ವಿದ್ಯಾರ್ಥಿಯ ಕಲಿಕೆಯಲ್ಲಿ ವ್ಯಾಪಕವಾಗಿ ವರ್ಷದ ಸಾಧನೆಯನ್ನು ತಿಳಿಸುತ್ತದೆ.

ಸಹಪಠ್ಯ ಕಲಿಕಾ ಮಾಪನ

   ಸಹಪಠ್ಯ ಕಲಿಕಾ ಮಾಪನ ಎಂದರೆ ವಿದ್ಯಾರ್ಥಿಗಳ ಕೇವಲ ಪಠ್ಯಪುಸ್ತಕ ವಿಷಯಗಳ ಜ್ಞಾನವನ್ನು ಮಾತ್ರ ಅಳೆಯದೆ, ಅವರ ಸರ್ವಾಂಗಿಣ ಅಭಿವೃದ್ಧಿಯನ್ನು ಗುರುತಿಸುವ ಒಂದು ಪ್ರಮುಖ ಪ್ರಕ್ರಿಯೆಯಾಗಿದೆ.

       ಸರಳವಾಗಿ ಹೇಳುವುದಾದರೆ, ತರಗತಿಯ ಕೋಣೆಯ ಹೊರಗೆ ನಡೆಯುವ ಕ್ರೀಡೆ, ಕಲೆ, ನಾಟಕ, ಸಂಗೀತ, ಭಾಷಣ, ನಾಯಕತ್ವ ಗುಣಗಳು ಮತ್ತು ಸಾಮಾಜಿಕ ಸೇವೆಗಳಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಯ ಪ್ರಗತಿ ಮತ್ತು ಕೌಶಲ್ಯಗಳನ್ನು ಮಾಪನ ಮಾಡುವುದೇ ಸಹಪಠ್ಯ ಕಲಿಕಾ ಮಾಪನ.

ಸಹ-ಪಠ್ಯ ಕಲಿಕಾ ಮಾಪನದ ಪ್ರಮುಖ ಕ್ಷೇತ್ರಗಳು

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಮತ್ತು ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ಪದ್ದತಿಯ ಪ್ರಕಾರ, ಸಹ-ಪಠ್ಯ ಕ್ಷೇತ್ರವನ್ನು ಪ್ರಮುಖವಾಗಿ ನಾಲ್ಕು ಮುಖ್ಯ ವಲಯಗಳಾಗಿ ವಿಂಗಡಿಸಲಾಗಿದೆ, ಇವು ವಿದ್ಯಾರ್ಥಿಯ ಸರ್ವಾಂಗಿಣ ಬೆಳವಣಿಗೆಯನ್ನು ಅಳೆಯಲು ಸಹಾಯ ಮಾಡುತ್ತವೆ.

  1. ಜೀವನ ಕೌಶಲಗಳು: ಇದು ವಿದ್ಯಾರ್ಥಿಯು ದೈನಂದಿನ ಜೀವನದ ಸವಾಲುಗಳನ್ನು ಎದುರಿಸಲು ಮತ್ತು ಆರೋಗ್ಯಕರ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಿರುವ ಮಾನಸಿಕ ಹಾಗೂ ಸಾಮಾಜಿಕ ಸಾಮರ್ಥ್ಯಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಮೂರು ಉಪ-ಕ್ಷೇತ್ರಗಳಿವೆ,

·         ಆಲೋಚನಾ ಕೌಶಲ್ಯಗಳು: ಸ್ವಯಂ-ಅರಿವು, ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ಸಮಸ್ಯೆ ಬಗೆಹರಿಸುವ ಸಾಮರ್ಥ್ಯ.

·         ಸಾಮಾಜಿಕ ಕೌಶಲ್ಯಗಳು: ಪರಾನುಭೂತಿ (ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು), ಪರಿಣಾಮಕಾರಿ ಸಂವಹನ, ಮತ್ತು ಪರಸ್ಪರ ಸಂಬಂಧಗಳು

·         ಭಾವನಾತ್ಮಕ ಕೌಶಲ್ಯಗಳು: ಒತ್ತಡ ನಿರ್ವಹಣೆ ಮತ್ತು ಭಾವನೆಗಳ ನಿಯಂತ್ರಣ.

  1. ವರ್ತನೆಗಳು ಮತ್ತು ಮೌಲ್ಯಗಳು:  ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಜನರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಇದು ಅಳೆಯುತ್ತದೆ.

·         ಶಿಕ್ಷರೊಂದಿಗೆ ವರ್ತನೆ: ಗೌರವ, ಸಹಕಾರ ಮತ್ತು ಸಕಾರಾತ್ಮಕ ಒಡನಾಟ.

·         ಸಹಪಾಠಿಗಳೊಂದಿಗಿನ ವರ್ತನೆ: ಸ್ನೇಹಿತರೊಂದಿಗೆ ಒಗ್ಗಟ್ಟು, ಸಂವೇದನಾಶೀಲತೆ ಮತ್ತು ಲಿಂಗ ಸಮಾನತೆಯ ಭಾವನೆ.

·         ಶಾಲಾ ಪ್ರಗತಿ ಮತ್ತು ಪರಿಸರದೊಂದಿಗಿನ ಮನೋಭಾವ: ಶಾಲೆಯ ನಿಯಮಗಳನ್ನು ಪಾಲಿಸುವುದು ಮತ್ತು ಪರಿಸರ ಸಂರಕ್ಷಣೆಯ ಪ್ರಜ್ಷೆ.

·         ನೈತಿಕ ಮೌಲ್ಯಗಳ ವ್ಯವಸ್ಥೆ: ಸತ್ಯ, ಪ್ರಾಮಾಣಿಕತೆ, ಶಿಸ್ತು, ದೇಶಭಕ್ತಿ ಮತ್ತು ಸಾಮಾಜಿಕ ನ್ಯಾಯ.

  1. ಸಹ-ಪಠ್ಯ ಚಟುವಟಿಕೆಗಳು: ತರಗತಿಯ ಹೊರಗೆ ವಿದ್ಯಾರ್ಥಿಯ ಆಸಕ್ತಿ ಮತ್ತು ಕೌಶಲ್ಯಗಳನ್ನು ಪ್ರೋತ್ಸಾಹಿಸುವ ಕ್ಷೇತ್ರಗಳಿವು. ಇವುಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಎರಡು ಕ್ಷೇತ್ರಗಳನ್ನು ಆರಿಸಿಕೊಳ್ಳಬಹುದು:

·         ಸಾಹಿತ್ಯ ಮತ್ತು ಸೃಜನಶೀಲ ಕೌಶಲ್ಯಗಳು: ಚರ್ಚಾಸ್ಪರ್ದೆ, ಭಾಷಣ, ಪ್ರಬಂಧ ಬರವಣಿಗೆ, ನಾಟಕ ಮತ್ತು ವಾಚನ.

·         ವೈಜ್ಞಾನಿಕ ಕೌಶಲ್ಯಗಳು: ವಿಜ್ಞಾನ ಕ್ಲಬ್ ಗಳು, ಪ್ರದರ್ಶನಗಳು, ಗಣಿತದ ಒಗಟುಗಳು ಮತ್ತು ಸ್ವಯಂ-ಸಿದ್ದಪಡಿಸಿದ ಉಪಕರಣಗಳ ತಯಾರಿ.

·         ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ: ಗಣಕಯಂತ್ರ ಅನ್ವಯಗಳು, ಬಹುಮಾಧ್ಯಮ ಬಳಕೆ ಮತ್ತು ಡಿಜಿಟಲ್‌ ಕೌಶಲ್ಯಗಳು.

·         ಪ್ರದರ್ಶನ ಕಲೆಗಳು: ಸಂಗೀತ, ನೃತ್ಯ, ಶಿಲ್ಪಕಲೆ ಮತ್ತು ಕರಕುಶಲ ವಸ್ತುಗಳ ತಯಾರಿ.

  1. ದೈಹಿಕ ಮತ್ತು ಆರೋಗ್ಯ ಶಿಕ್ಷಣ: ವಿದ್ಯಾರ್ಥಿಯ ದೈಹಿಕ ಸಾಮರ್ಥ್ಯ, ಆರೋಗ್ಯ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಇದು ಮಾಪನ ಮಾಡುತ್ತದೆ.

·         ಕ್ರಿಡೆಗಳು ಮತ್ತು ಆಟಗಳು: ಕ್ರಿಕೆಟ್‌, ಪುಟ್ಬಾಲ್‌, ಅಥ್ಲೆಟಿಕ್ಸ ಇತ್ಯಾದಿಗಳಲ್ಲಿ ಭಾಗವಹಿಸುವಿಕೆ ಮತ್ತು ಕ್ರಿಡಾ ಮನೋಭಾವ.

·         ಎನ್.ಸಿ.ಸಿ/ಸ್ಕೌಟ್‌ ಮತ್ತು ಗೈಡ್:‌ ನಾಯಕತ್ವ ಮತ್ತು ಸಮಾಜ ಸೇವೆಯ ಮನೋಭಾವವನ್ನು ಬೆಳೆಸುತ್ತದೆ.

·         ಯೋಗ: ದೈಹಿಕ ಶಿಸ್ತು ಮತ್ತು ಮಾನಸಿಕ ಏಕಾಗ್ರತೆ.

·         ಪ್ರಥಮ ಚಿಕಿತ್ಸೆ ಮತ್ತು ನೈರ್ಮಲ್ಯ: ವೈಯಕ್ತಿಕ ಸ್ವಚ್ಚತೆ ಮತ್ತು ತುರ್ತು ಸಂದರ್ಭಗಳ ನಿರ್ವಹಣೆ.

Comments

Popular posts from this blog

ಮೌಲ್ಯಮಾಪನದ ವಿಧಗಳು

ಕಲಿಕಾ ಮಾಪನದ ಅರ್ಥ,ವ್ಯಾಖ್ಯಾನ,ಮಾಪನದ ಉದ್ದೇಶಗಳು

ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ (ಸಿಸಿಇ)